ಶಿವಮೊಗ್ಗ : ವರ್ತಮಾನದ ಸನ್ನಿವೇಶದಲ್ಲಿ ವೀರಶೈವ ಲಿಂಗಾಯತ ಸಮಾಜದಲ್ಲಿ ಗೊಂದಲದ ವಾತಾವರಣ ಇರುವುದರಿಂದ ವೀರಶೈವ ಲಿಂಗಾಯತ ಸಮಾನ ಮನಸ್ಕರು ಸೇರಿಕೊಂಡು ಮಂಗಳವಾರ ಸಂಜೆ ಶುಭಮಂಗಳ ಸಮುದಾಯ ಭವನದಲ್ಲಿ ‘ಶಿವ ಸಂಕಲ್ಪ’ ವೀರಶೈವ ಲಿಂಗಾಯತ ಒಕ್ಕೂಟ ಎಂಬ ಸಂಸ್ಥೆಯನ್ನು ಆರಂಭಿಸಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮತ್ತು ಒಕ್ಕೂಟದ ಪ್ರಮುಖರಾದ ಮಹಾಲಿಂಗಯ್ಯ ಶಾಸ್ತ್ರಿ ಹಾಗೂ ಸಮಾನ ಮನಸ್ಕರು ಸೇರಿ ಶುಭಾರಂಭ ಮಾಡಿದರು.

ಚಿಂತಕ ಹಾಗೂ ವಿವೇಕ ವಂಶಿ ಫೌಂಡೇಶನ್ ಸಂಸ್ಥಾಪಕ ನಿತ್ಯಾನಂದ ಎಸ್.ಬಿ. ಅವರು ಈ ಸಂದರ್ಭದಲ್ಲಿ ಮಾತನಾಡಿ, ವೀರಶೈವ ಲಿಂಗಾಯತರು ಯಾವುದೇ ಪ್ರಚಾರ ಬಯಸದೆ ತಮ್ಮ ಪಾಡಿಗೆ ತಾವು ಕಾಯಕವೇ ಕೈಲಾಸ ಎಂದು ಎಲ್ಲಾ ಸಮಾಜದೊಟ್ಟಿಗೆ ಬೆರೆತು ಮುಂದಕ್ಕೆ ಹೋಗುತ್ತಿರುತ್ತಾರೆ. ಸಮಸ್ತ ಹಿಂದೂ ವೀರಶೈವ ಲಿಂಗಾಯಿತ ಸಮಾಜ ದೇಶದ ಒಳಿತನ್ನು ಬಯಸಿದೆ. ಇತ್ತೀಚಿಗೆ ಸಮಾಜದ ಕೆಲವರು ಗುರುಗಳು ಸೇರಿದಂತೆ ಸಮಾಜದಲ್ಲಿ ಗೊಂದಲ ಮೂಡಿಸಿದ್ದಾರೆ ಇದರ ಪರಿಣಾಮ ಬಿರುಕು ದೊಡ್ಡದಾಗಿ ಸಮಾಜ ಛಿದ್ರವಾಗುವ ಆತಂಕದಲ್ಲಿದೆ. ಆದರೆ ಹಿಂದೂ ವೀರಶೈವ ಲಿಂಗಾಯತ ಸಮಾಜ ದವರು ಮೂರ್ಖರಲ್ಲ. ನಮ್ಮ ಅಸ್ತಿತ್ವವೇ ಶಿವಮಯವಾಗಿರುವುದರಿಂದ ನಾವೆಲ್ಲ ಹಿಂದೂ ವೀರಶೈವ ಲಿಂಗಾಯಿತರು. ಧರ್ಮಸ್ಥಳ ಕ್ಷೇತ್ರವನ್ನು ಅಪವಿತ್ರಗೊಳಿಸಿ ಹಿಂದೂ ಧಾರ್ಮಿಕ ನಂಬಿಕೆಯೊಂದಿಗೆ ಚೆಲ್ಲಾಟವಾಡಿ ಷಡ್ಯಂತ್ರ ಮಾಡಿದವರು ಹೇಗೆ ಬಟಾ ಬಯಲಾದರೂ ಅದೇ ರೀತಿ ಕರ್ನಾಟಕದಲ್ಲಿ ಇನ್ನು ಮುಂದೆ ದೊಡ್ಡದೊಂದು ಪವಾಡ ಸಂಭವಿಸಲಿದೆ. ನೂರಕ್ಕೆ ನೂರರಷ್ಟು ಸಮಾಜ ಮತ್ತೆ ಒಗ್ಗಟ್ಟಾಗಿ ಪುಟಿದೇಳಲಿದ್ದು ಶಿವಮೊಗ್ಗದಲ್ಲಿ ‘ಶಿವಸಂಕಲ್ಪ’ದಿಂದ ಪ್ರಾರಂಭವಾಗಿ ಇಡೀ ರಾಜ್ಯಾದ್ಯಂತ ಈ ಶಿವ ಸಂಕಲ್ಪ ಅಭಿಯಾನ ವಿಸ್ತಾರವಾಗಿ ಪವಾಡ ಮಾಡಲಿದೆ ಎಂದರು.

ದೇಶವನ್ನು ಒಡೆದು ಆಳುವ ಪ್ರಕ್ರಿಯೆ ವಿಶ್ವ ಮಟ್ಟದಲ್ಲಿ ಷಡ್ಯಂತ್ರ ರೂಪಿತಗೊಂಡಿದ್ದು, ಇದಕ್ಕೆ ಅನೇಕ ಪುರಾವೆಗಳೊಂದಿಗೆ ದೇಶದ ತಜ್ಞರು ಜನಸಾಮಾನ್ಯರಿಗೆ ತಿಳಿ ಹೇಳಿದ್ದಾರೆ. ಲೇಖನಗಳನ್ನು ಬರೆದು ಎಚ್ಚರಿಸಿದ್ದಾರೆ ಇಡೀ ಪ್ರಪಂಚದಲ್ಲಿ ಭಾರತ ಬಿಟ್ಟರೆ ಪ್ರಜಾಪ್ರಭುತ್ವದ ಸ್ಥಿರವಾದ ರಾಷ್ಟ್ರ ಬೇರೇ ಇಲ್ಲ. ಮಿಜೋರಾಂನಲ್ಲಿ ಎರಡು ಪ್ರಮುಖ ಜಾತಿಗಳನ್ನು ಒಡೆದು ಅತಂತ್ರ ಸೃಷ್ಟಿಸಿದ ಶಕ್ತಿಗಳು ಇಲ್ಲಿ ಕೂಡ ತಂತ್ರ ರೂಪಿಸುತ್ತಿದೆ. ಆದರೆ ಈ ತಂತ್ರ ಅವರಿಗೆ ತಿರುಗುಬಾಣವಾಗುತ್ತಿದ್ದು ಭಾರತ ಬಲಿಷ್ಠ, ಸುಭದ್ರ ಆಡಳಿತದಲ್ಲಿದ್ದು ಪಾಕಿಸ್ತಾನ, ನೇಪಾಳ, ಬಾಂಗ್ಲಾ ಮುಂತಾದ ರಾಷ್ಟ್ರಗಳಲ್ಲಿ ಕ್ರಾಂತಿ ನಡೆದಿದೆ ಪಾಕ್ ಆಕ್ರಮಿತ ಕಾಶ್ಮೀರ ಕೂಡ ಭಾರತದ ಪಾಲಾಗಲಿದೆ. ಬುದ್ಧನ ಪ್ರತಿಮೆ ಒಡೆದ ದೇಶ ಇಂದು ಬುದ್ಧನ ಪ್ರತಿಮೆ ಮುಂದೆ ಕುಳಿತು ಭಾರತದ ಸ್ನೇಹಕ್ಕೆ ಕೈ ಚಾಚುತ್ತಿದೆ. ವೀರಶೈವ ಲಿಂಗಾಯತ ಜಾತಿಯನ್ನು ಒಡೆಯಲು ಹೋಗುವವರು ಬೆಂಕಿಯ ಜೊತೆ ಸರಸವಾಡುತ್ತಿದ್ದು ಶಿವನೇ ನಮಗೆಲ್ಲರಿಗೂ ಶಕ್ತಿ ಕೊಟ್ಟು ದೃಢ ಸಂಕಲ್ಪಕೊಟ್ಟು ಈ ರಾಜ್ಯದಲ್ಲಿ ಪವಾಡ ನಡೆಸಲಿದ್ದಾನೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉದ್ಘಾಟನೆ ನೆರವೇರಿಸಿದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಮಾತನಾಡಿ, ಡಿಸೆಂಬರ್ ೨೮ರಂದು ವೀರಶೈವ ಸಾಂಸ್ಕೃತಿಕ ಸಭಾಭವನದಲ್ಲಿ ಹುಬ್ಬಳ್ಳಿಯ ೩೦೦೦ ಮಠದ ಶ್ರೀಗಳಿಂದ ಶಿವಸಂಕಲ್ಪ ಪದಾಧಿಕಾರಿಗಳ ಸಂಘಟನೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಹಂತಹಂತವಾಗಿ ಹಲವು ಸಮಾವೇಶಗಳು ನಡೆಯಲಿದ್ದು, ಸಮಾಜದಲ್ಲಿನ ಗೊಂದಲ ದೂರವಾಗಲು ಎಲ್ಲರೂ ಒಟ್ಟಾಗಿ ಸೇರಿ ಪ್ರಯತ್ನ ಮಾಡಲಿದ್ದಾರೆ ಎಂದರು.
ಸಮಾಜದ ಮುಖಂಡರಾದ ಹೆಚ್.ವಿ. ಮಹೇಶ್ವರಪ್ಪ ಮಾತನಾಡಿ, ಸಮಾಜ ಒಂದಾಗಬೇಕಾದರೆ ತಮ್ಮ ಸುತ್ತಲಿನ ರಾಜಕಾರಣಿಗಳನ್ನು ಮತ್ತು ಸ್ವಾಮಿಗಳನ್ನು ಕೈಬಿಡಿ. ದೇವರು ನಿಮಗೆ ವಿವೇಚನೆ ಕೊಟ್ಟಿದ್ದಾನೆ. ನಾವು ಲಿಂಗಸಕಲ್ಪ ಮಾಡಿ ಸಮಾಜ ಸುಧಾರಣೆಗೆ ಒಗ್ಗಟ್ಟಾಗಬೇಕು. ಕಾಶಪ್ಪನವರನ್ನು ಎತ್ತಿಕಟ್ಟಿ ಮೃತುಂಜಯ ಸ್ವಾಮೀಜಿಗಳನ್ನು ಹೊರಗೆ ಹಾಕಿದರು. ಸಮಾಜವನ್ನು ಒಡೆಯುವ ತಂತ್ರ ಮಾಡಿದರು ಸಮೀಕ್ಷೆಯಿಂದ ಏನು ಪ್ರಯೋಜನ ಆಗಲ್ಲ. ನಾವೆಲ್ಲಾ ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಾಗಬೇಕು ಎಂದರು.
ಪ್ರಮುಖರಾದ ಮಹಾಲಿಂಗ ಶಾಸ್ತ್ರಿ ಮಾತನಾಡಿ, ಇವತ್ತು ಇಷ್ಟು ಜನ ಒಗ್ಗಟ್ಟಾಗಿ ಸೇರಿದ್ದು ನೋಡಿದರೆ ನಾವೆಲ್ಲ ಸರಿಯಾಗುವ ಸಮಯ ಬಂದಿದೆ. ಎಲ್ಲರೂ ನಮ್ಮ ಮೇಲೆ ಕಲ್ಲು ಎಸೆದು ಚಂದ ನೋಡುತ್ತಿದ್ದಾರೆ ರಾಜಕಾರಣಿಗಳ ಕೈಯಲ್ಲಿ ಸಮಾಜ ನಲುಗುತ್ತಿದೆ. ಅದಕ್ಕಾಗಿ ಸಮಾನ ಮನಸ್ಕರೆಲ್ಲ ಸೇರಿ ಚಿದ್ರ ಚಿದ್ರ ಮಾಡಲು ಹೊರಟಿರುವ ಶಕ್ತಿಗಳಿಗೆ ತಕ್ಕಪಾಠ ಕಲಿಸುವ ಕಾಲ ಬಂದಿದೆ. ಒಂದು ಕಾಲದಲ್ಲಿ ೧೨೦ ಶಾಸಕರಿದ್ದ ನಮ್ಮ ಸಮಾಜ ಇಂದು ೬೦ಕ್ಕೆ ಇಳಿದಿದೆ. ರಾಜ್ಯದಲ್ಲಿ ನಾವು ಒಂದೂವರೆ ಕೋಟಿ ಜನರಿದ್ದೇವೆ. ಯಾರದ್ದೋ ಮಾತು ಕೇಳಿ ದಡ್ಡರಾಗಬೇಡಿ, ಒಳಪಂಗಡಗಳನ್ನೆಲ್ಲಾ ಒಟ್ಟಾಗಿಸುವ ಕಾಲ ಬಂದಿದೆ ಎಂದರು.
ವೇದಿಕೆಯಲ್ಲಿ ಸಮಾಜದ ಸಾಧಕರನ್ನು ಮತ್ತು ಆಯುರ್ವೇದ ವೈದ್ಯಕೀಯ ಪದವಿಯಲ್ಲಿ ಉತ್ತಮ ಅಂಕ ಪಡೆದ ಪತ್ರಿಕಾ ಛಾಯಾಗ್ರಾಹಕ ಸೋಮನಾಥ್ ಅವರ ಮಗಳಾದ ಲಲಿತೇಶ್ವರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಕೆ.ಇ.ಕಾಂತೇಶ್, ಉಮೇಶ್ ಆರಾಧ್ಯ, ರತ್ನಮ್ಮ, ರೇಣುಕಾರಾಧ್ಯ ಸೋಮಶೇಖರ್, ಸಂಗಯ್ಯ, ಚಂದ್ರಯ್ಯ, ಆನಂದಪ್ಪ, ಹೆಚ್.ಎಂ. ಲೋಕೇಶ್, ಲಿಂಗಮೂರ್ತಿ, ಈ.ವಿಶ್ವಾಸ್, ಮುರುಗೇಶ್, ಶಕುಂತಲಾ ಜಗದೀಶ್, ವಿಕ್ರಂ, ಚನ್ನೇಶ್ ಗೌರಮ್ಮ, ವಿರೂಪಾಕ್ಷ ಶಾಸ್ತ್ರಿ, ರುದ್ರಯ್ಯ, ಆಶಾ ಚನ್ನಬಸಪ್ಪ, ಪ್ರೇಮಾ ವೀರಯ್ಯ, ಶ್ರೀಕಾಂತ್ ಮೊದಲಾದವರಿದ್ದರು.