ಶಿವಮೊಗ್ಗ : ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಸಿಜೆಐ ಬಿ.ಆರ್. ಗವಾಯಿಯವರ ಮೇಲೆ ಶೂ ಎಸೆದಿರುವ ವಕೀಲರಾದ ರಾಕೇಶ್ಕಿಶೋರ್ರವರ ಮೇಲೆ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.

ದೇಶದ ಪ್ರಜಾಪ್ರಭುತ್ವದ ಕಾನೂನು ಮತ್ತು ಸಂವಿಧಾನ ಹಾಗೂ ಸಮಸ್ತ ಜನತೆಗೆ ಅವಮಾನ ಪಡುವಂತಹ ಕೃತ್ಯವನ್ನು ಈ ವಕೀಲರು ಮಾಡಿದ್ದು, ದುರಾದೃಷ್ಟಕರ ಸಂಗತಿಯಾಗಿದೆ. ಭಾರತೀಯ ವಕೀಲ ಪರಿಷತ್ತು ಈ ಕೂಡಲೇ ಅವರ ವಕೀಲವೃತ್ತಿಯನ್ನು ಶಾಶ್ವತವಾಗಿ ರದ್ದುಪಡಿಸಬೇಕು, ಸಂವಿಧಾನ ವಿರೋಧಿಸುವ ಇವರಿಗೆ ಜಾಮೀನುರಹಿತ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಕೇಂದ್ರ ಸರ್ಕಾರ ನ್ಯಾಯಮೂರ್ತಿಗಳಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕು. ಮತ್ತೊಮ್ಮೆ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕಾನೂನುಗಳನ್ನು ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ಮನವಿ ನೀಡುವ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಹೆಚ್.ಎನ್. ಶ್ರೀನಿವಾಸ್, ಜಿಲ್ಲಾಧ್ಯಕ್ಷ ಸಿ. ಮೂರ್ತಿ, ಪದಾಧಿಕಾರಿಗಳಾದ ಶಿವಮೂರ್ತಿ, ದೇವೇಂದ್ರಪ್ಪ, ಗಾಜನೂರು ನಾಗರಾಜ್, ಹನುಮೇಶ್ ಮೊದಲಾದವರಿದ್ದರು.