ಶಿವಮೊಗ್ಗ:‘ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ಹದಗೆಟ್ಟಿದ್ದು, ಜಾತಿಗಣತಿ ಹೆಸರಲ್ಲಿ ಇಡಿ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಲಾಗುತ್ತಿದೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಸರ್ಕಾರ ಯಾವುದೇ ಪೂರ್ವ ತಯಾರಿ ಇಲ್ಲದೆ ಹೊರಟ ಪರಿಣಾಮ ಶಿಕ್ಷಕರ ಪಾಡು ಹೇಳ ತೀರದಾಗಿದೆ. ಅಸಂಬದ್ದ ಪ್ರಶ್ನಾವಳಿಗಳಿಂದ ಕೆಲವೆಡೆ ಜನರೇ ಸರ್ಕಾರಕ್ಕೆ ಭೀಮಾರಿ ಹಾಕಿದ್ದಾರೆ. ಇದೀಗ ದಸರಾ ರಜಾ 10 ದಿನಗಳ ಕಾಲ ಮುಂದೂಡಿರುವುದು ಹಾಗೂ ಅದನ್ನು ಸರಿ ಹೊಂದಿಸಲು ವಿಶೇಷ ತರಗತಿ ಮಾಡಿ ಎಂದು ಹೇಳುವ ಮೂಲಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ಮತ್ತು ಒತ್ತಡಕ್ಕೆ ಸಿಲುಕಿಸಿದೆ.

ಇತ್ತೀಚೆಗೆ ತಾನೆ 150 ಕೋಟಿ ಖರ್ಚು ಮಾಡಿ ಗಣತಿ ವರದಿಯನ್ನು ಮೂಲೆಗಿಟ್ಟ ಸರ್ಕಾರ ಜಾತಿ-ಸಾಮಾಜಿಕ-ಶೈಕ್ಷಣಿಕ ಗಣತಿಗೆ ಮತ್ತೆ 453 ಕೋಟಿ ಖರ್ಚು ಮಾಡುವ ಅಗತ್ಯವೇನಿತ್ತು. ಕೇಂದ್ರ ಸರ್ಕಾರವೇ ಜನ – ಜಾತಿ ಸಾಮಾಜಿಕ ಶಿಕ್ಷಣ ಎಲ್ಲಾ ಒಳಗೊಂಡ ಗಣತಿ ಮಾಡಲು ತಯಾರಿ ಮಾಡುತ್ತಿರುವಾಗ ರಾಜ್ಯದ ಜನರ ತೆರಿಗೆ ಹಣವನ್ನು ಪೋಲು ಮಾಡಿ ಸಮೀಕ್ಷೆ ಮಾಡುವ ಅವಶ್ಯಕತೆ ಇತ್ತಾ? ಎಂದು ಪ್ರಶ್ನಿಸಿರುವ ಅವರು, ಸಿಎಂ ರವರ ಮೊಂಡುತನಕ್ಕೆ ಸಾರ್ವಜನಿಕರ ತೆರಿಗೆ ಹಣ ಬೇಕಾಬಿಟ್ಟಿಯಾಗಿ ಖರ್ಚು ಮಾಡಿ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನೆ ಹಾಳು ಮಾಡುತ್ತಿರುವುದು ಖಂಡನೀಯ, ಶಿಕ್ಷಣ ಸಚಿವರು ಸಾರ್ವಜನಿಕರ ತೆರಿಗೆ ಬಗ್ಗೆ ವಿಶೇಷವಾದ ಕಾಳಜಿ ಹೊಂದಿರುವ ಹಾಗೆ ಮಾತನಾಡುವ ಅವರಿಗೆ ಸಮೀಕ್ಷೆಗೆ ಮೊದಲಿಗೆ 150 ಮತ್ತು ಈಗ 453 ಕೋಟಿ ಖರ್ಚು ಮಾಡುತ್ತಿರುವುದು ಕಾಣಿಸುತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.