ಶಿವಮೊಗ್ಗ : ಸೋಗಾನೆ ವಿಮಾನ ನಿಲ್ದಾಣಕ್ಕೆ ಜಮೀನು ಕಳೆದುಕೊಂಡ ಸಂತ್ರಸ್ಥರಿಗೆ ನಿವೇಶನ ಹಂಚದೆ ವಿಳಂಬನೀತಿಯನ್ನು ಅನುಸರಿಸುತ್ತಿರುವುದನ್ನು ವಿರೋಧಿಸಿ, ಸೋಗಾನೆ ಭೂಮಿ ಹಕ್ಕು ರೈತರ ಹೋರಾಟ ಸಮಿತಿ ಅ.9ರಂದು ಬೆಳಿಗ್ಗೆ 10 ಗಂಟೆಗೆ ವಿಮಾನ ನಿಲ್ದಾಣದ ಮುಖ್ಯದ್ವಾರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಬಿ. ಕೃಷ್ಣಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ವಿಮಾನ ನಿಲ್ದಾಣಕ್ಕಾಗಿ ನಾವು ಭೂಮಿಯನ್ನು ಕಳೆದುಕೊಂಡಿದ್ದೇವೆ. ನಮಗೆ ನಿವೇಶನ ನೀಡುವುದಾಗಿ ಸರ್ಕಾರದ ಆದೇಶವೂ ಆಗಿತ್ತು. ನ್ಯಾಯಾಲಯ ಕೂಡ ಅವರಿಗೆ ನಿವೇಶನ ನೀಡಿ ಎಂದು ಆದೇಶ ನೀಡಿತ್ತು. ಆದರೆ ನಮಗೆ ನಿವೇಶನವನ್ನು ವಿಮಾನ ನಿಲ್ದಾಣ ಉದ್ಘಾಟನೆಗೆ ಮೊದಲೇ ನೀಡಬೇಕಿತ್ತು ಆದರೆ ನೀಡಲಿಲ್ಲ ಉದ್ಘಾಟನೆಯ ದಿನ ನಾವು ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದನ್ನು ಕಂಡು ನಮಗೆ ಜಿಲ್ಲಾಡಳಿತ ನಿವೇಶನ ಹಂಚಿಕೆಯ ಪತ್ರವನ್ನೂ ನೀಡಿತ್ತು. ಆದರೆ ಅಲ್ಲಿ ನಿವೇಶನ ಹಂಚದಂತೆ ಕೆಲವರು ಕೋರ್ಟ್ ಮೊರೆ ಹೋಗಿದ್ದರು. ತಡೆಯಾಜ್ಞೆ ತಂದಿದ್ದರು ನಾವೇ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದೆವು ಎಂದರು.

ಆದರೂ ಕೂಡ ನಮಗೆ ನಿವೇಶನ ಹಂಚಿಕೆಯಾಗಿಲ್ಲ. ಸಂತ್ರಸ್ಥ, ರೈತರಿಗೆ ಮೂರು ತಿಂಗಳ ಒಳಗೆ ನಿವೇಶನ ಹಂಚಿಕೆ ಮಾಡಲು ಸಂತ್ರಸ್ಥರಾದ ನಮ್ಮಗಳ ಪರವಾಗಿ ಉಚ್ಛ ನ್ಯಾಯಾಲಯ ಆದೇಶ ನೀಡಿದೆ. ಇಷ್ಟಾದರೂ ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸುತ್ತಿದ್ದು, ಇದೂವರೆಗೂ ನಮಗೆ ನಿವೇಶನ ಹಂಚಿಕೆ ಪತ್ರ ನೀಡಿಲ್ಲ, ಸುಮಾರು 341 ಸಂತ್ರಸ್ಥರಿದ್ದೇವೆ. ಜಿಲ್ಲಾಡಳಿತದ ಈ ವಿಳಂಬ ನೀತಿಯನ್ನು ವಿರೋಧಿಸಿ ನಾವು ಅ.9ರಂದು ಬೆಳಿಗ್ಗೆ ನಮಗೆ ನ್ಯಾಯ ಸಿಗುವವರೆಗೂ ಅನಿರ್ಧಿಷ್ಟ ಕಾಲಾವಧಿವರೆಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂಧನೆ ಕೇಸನ್ನು ಕೂಡ ದಾಖಲಿಸುತ್ತೇವೆ. ನಮ್ಮ ಕಾನೂನು ಮತ್ತು ಬೀದಿ ಹೋರಾಟ ಮುಂದುವರಿಯುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ಥರಾದ ಶಿವಾನಂದ, ರಾಮಣ್ಣ, ನಾಗರಾಜ್, ಎನ್.ಟಿ. ಕುಮಾರ್, ವೀರಭದ್ರ, ರಾಘವೇಂದ್ರ, ಬಸವಲಿಂಗಪ್ಪ, ರಾಮಣ್ಣ, ರಂಗಪ್ಪ, ಮಹಾದೇವ್ ಸೇರಿದಂತೆ ಹಲವರಿದ್ದರು.