ಶಿವಮೊಗ್ಗ : ಸಂಸದ ಬಿ.ವೈ. ರಾಘವೇಂದ್ರ ಅವರು ಯಾವ ಧರ್ಮಕ್ಕೆ ಸೇರಿದವರು ಎಂದು ಸ್ಪಷ್ಟಪಡಿಸಬೇಕು ಮತ್ತು ಅವರಿಗೆ ಮೊದಲಬಾರಿ ಸಂಸದ ಟಿಕೇಟ್ ನೀಡಲು ಯಾವ ಅರ್ಹತೆ ಇತ್ತು ಎಂದು ಹೇಳಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಟಾಂಗ್ ನೀಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ವೈ. ರಾಘವೇಂದ್ರ ಅವರು ಸಚಿವ ಮಧುಬಂಗಾರಪ್ಪ ಅವರನ್ನು ಅರ್ಥವಿಲ್ಲದೆ ಟೀಕಿಸುತ್ತಿದ್ದಾರೆ. ಅಷ್ಟೇ ಅಲ್ಲ ಜಾತಿಗಣತಿಯ ಬಗ್ಗೆ ದ್ವಂದ್ವದ ನಿಲುವು ತಾಳಿದ್ದಾರೆ ಮತ್ತು ಹಿಂದುಳಿದವರ ಮೀಸಲಾತಿಯ ಮೇಲೆ ಸಚಿವ ಸ್ಥಾನ ಪಡೆದಿದ್ದಾರೆ ಎಂದು ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ. ಆದರೆ ಈ ಎಲ್ಲಾ ಮಾತುಗಳನ್ನು ಅವರು ಎಚ್ಚರಿಕೆಯಿಂದ ಆಡಬೇಕಿತ್ತು. ಸ್ವತಃ ಅವರಿಗೇ ತಮ್ಮ ಧರ್ಮದ ಬಗ್ಗೆ ಸ್ಪಷ್ಟತೆ ಇಲ್ಲ, ಅರ್ಹತೆಯ ಬಗ್ಗೆಯೂ ಗೊತ್ತಿಲ್ಲ ಎಂದರು.

ಮಧುಬಂಗಾರಪ್ಪ ಅವರಿಗೆ ಸಚಿವ ಸ್ಥಾನವನ್ನು ಯಾವ ಅರ್ಹತೆಯ ಆಧಾರದಲ್ಲಿ ನೀಡಲಾಗಿದೆ ಎಂದು ಹೇಳುವ ಬಿ.ವೈ. ರಾಘವೇಂದ್ರ ಅವರು ಮೊದಲಬಾರಿ ಸಂಸದ ಸ್ಥಾನಕ್ಕೆ ಬಿಜೆಪಿಯವರು ಟಿಕೇಟ್ ಕೊಟ್ಟಾಗ ತಮಗೆ ಯಾವ ಅರ್ಹತೆ ಇತ್ತು ? ಮತ್ತು ಈಗ ಯಾವ ಅನುಭವವೂ ಇಲ್ಲದೆ ಮೊದಲ ಬಾರಿ ಆಯ್ಕೆಯಾದ ಶಾಸಕ ನಿಮ್ಮ ಸಹೋದರ ಬಿ.ವೈ. ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಲು ಯಾವ ಅರ್ಹತೆ ಇತ್ತು. ಯಾವ ಕೋಟಾದಲ್ಲಿ ನೀವಿಬ್ಬರೂ ರಾಜಕಾರಣಿಗಳಾಗಿದ್ದೀರಿ ? ನಿಮ್ಮ ತಂದೆ ಹೋರಾಟಗಾರರು ಅವರ ಬಗ್ಗೆ ನಮಗೆ ಮೆಚ್ಚುಗೆ ಮತ್ತು ಪ್ರೀತಿ ಇದೆ. ಆದರೆ ನೀವು ಹೇಗೆ ರಾಜಕಾರಣಿಗಳಾದಿರಿ ಇನ್ನೊಬ್ಬರನ್ನು ಟೀಕಿಸುವಾಗ ನಾವೇನು ಎಂದು ಪ್ರಾಮಾಣಿಕವಾಗಿ ಯೋಚಿಸಬೇಕಲ್ಲವೇ ಎಂದರು.

ಬಿ.ವೈ. ರಾಘವೇಂದ್ರ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕರಾಗಿದ್ದಾರೆ. ಮಹಾಸಭೆಯಲ್ಲಿ ವೀರಶೈವ ಲಿಂಗಾಯಿತ ಎಂದು ಗಣತಿಯಲ್ಲಿ ಬರೆಸಬೇಕು. ಧರ್ಮದ ಕಾಲಂನಲ್ಲಿ ಆಯ್ಕೆ ಅವರಿಗೇ ಬಿಟ್ಟಿದ್ದು ಎಂದು ತೀರ್ಮಾನ ಕೈಗೊಂಡಾಗ ಮೌನ ವಹಿಸಿದ್ದೀರಿ. ಇಲ್ಲಿ ಬಿಜೆಪಿಯ ಪ್ರಶ್ನೆ ಬಂದಾಗ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಸಿ ಎಂದು ಹೇಳುವ ನೀವು ಯಾವ ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದೀರಿ ಧರ್ಮದ ಕಾಲಂನಲ್ಲಿ ಏನೆಂದು ಬರೆಸಬೇಕು ಎಂಬುದನ್ನು ನೀವು ಈಗಲಾದರೂ ಸ್ಪಷ್ಟಪಡಿಸಿ ಎಂದು ಸವಾಲು ಹಾಕಿದರು.
ಅಲ್ಲದೆ ಪಂಚಮಸಾಲಿ ಲಿಂಗಾಯಿತ ಸಮಾಜದ ಹಾಗೂ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಒಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಲಿಂಗಾಯಿತರೇ ಅಲ್ಲ ಎಂದು ಹೇಳಿ ತಿಂಗಳುಗಳೇ ಕಳೆದಿದೆ. ಯಡಿಯೂರಪ್ಪನವರಾಗಲೀ, ಪುತ್ರರಾದ ನೀವಿಬ್ಬರಾಗಲಿ ಇದನ್ನು ಕೇಳಿಸಿಕೊಂಡರೂ ಕೂಡ ಸುಮ್ಮನಿರುವುದೇಕೆ ? ನಾವಂತೂ ನೀವು ವೀರಶೈವ ಲಿಂಗಾಯಿತ ಎಂದೇ ಭಾವಿಸಿದ್ದೇವೆ ಆದರೆ ಯತ್ನಾಳ್ ಅವರ ಅಭಿಪ್ರಾಯ ಬೇರೆಯೇ ಇದೆ ದಾಖಲೆ ಬೇಕಾದರೆ ಕೊಡುತ್ತೇನೆ ಎಂದು ಅವರು ಹೇಳುತ್ತಾರೆ. ಸಮಾಜದ ಜನರಿಗೆ ಗೊಂದಲವುಂಟಾಗಿದೆ. ಈಗಲಾದರೂ ಇದಕ್ಕೆ ಉತ್ತರ ನೀಡಿ ಎಂದರು.
ಈಗ ನಡೆಯುತ್ತಿರುವುದು ಜನಸಂಖ್ಯೆ ಅಥವಾ ಜಾತಿಗಣತಿಯಲ್ಲ, ಅದು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಈ ಸಮೀಕ್ಷೆ ಮಾಡುವಾಗ ಜಾತಿಯ ಹೆಸರು ಬರುವುದು ಸಹಜವೇ ಆಗಿದೆ. ರಾಜ್ಯ ಸರ್ಕಾರ ಇದನ್ನು ಮಾಡಬಹುದಾಗಿದೆ. ಆದರೆ ರಾಘವೇಂದ್ರ ಅವರು ಸಂವಿಧಾನವನ್ನು ಸರಿಯಾಗಿ ಓದಿಕೊಳ್ಳದೇ, ರಾಜ್ಯ ಸರ್ಕಾರಕ್ಕೆ ಈ ಸಮೀಕ್ಷೆ ಮಾಡಲು ಯಾವ ಅಧಿಕಾರವೂ ಇಲ್ಲ ಎಂದು ಹೇಳುತ್ತಾರೆ. ಹಾಗಿದ್ದರೆ ಹೈಕೋರ್ಟ್ ಸಮೀಕ್ಷೆಗೆ ಒಪ್ಪಿಗೆ ನೀಡುತ್ತಿತ್ತೇ ಯಾವ ಸಂವಿಧಾನದಲ್ಲಿ ರಾಜ್ಯ ಸರ್ಕಾರ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡಬಾರದು ಎಂದಿದೆ ಈ ಚಿಕ್ಕ ವಿಷಯ ಇವರಿಗೆ ಗೊತ್ತಿಲ್ಲವೇ ಇದೊಂದು ಬೇಜಾಬ್ದಾರಿ ಹೇಳಿಕೆ ಎಂದರು.
ಇನ್ನೂ ಸಮೀಕ್ಷೆಯಲ್ಲಿ ಪ್ರಶ್ನೆಗಳು ಹೆಚ್ಚಾಗಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿರಬಹುದು. ಆದರೆ ಸಮೀಕ್ಷಾದಾರರಿಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡಲೇಬೇಕು ಎಂದೇನೂ ಇಲ್ಲ. ಹಾಗಾಗಿ ಈ ಬಗ್ಗೆ ದೂರುವುದು ಸರಿಯಲ್ಲ. ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಷಿಯವರು ಕೂಡ ಇದನ್ನು ವಿರೋಧಿಸುತ್ತಿದ್ದಾರೆ. ವ್ಯವಸ್ಥೆಯ ಒಂದು ಭಾಗವಾಗಿರುವ ಅವರು ಈ ರೀತಿ ವಿರೋಧ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ಸಚಿವರ ಮಧುಬಂಗಾರಪ್ಪ ಅವರು ಮಾತನಾಡಿದ್ದಾರೆ ಅಷ್ಟೇ ಎಂದರು.
ಶಿಕಾರಿಪುರದ ಬಳಿ ಇರುವ ಟೋಲ್ಗೇಟ್ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈ ಟೋಲ್ಗೇಟ್ ಯಾರ ಕಾಲದಲ್ಲಿ ಆಗಿತ್ತು. ಇದಕ್ಕೆ ಟೆಂಡರ್ ಕೊಟ್ಟವರು ಯಾರು ? ಎಂಬ ಅರಿವಿಲ್ಲದೆ ರಾಘವೇಂದ್ರ ಅವರು ಇದರ ವಿರೋಧ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಕೂಡ ದ್ವಂದ್ವ ಹೇಳಿಕೆಯಾಗಿದೆ ಎಂದರು.
ಸಿ.ಟಿ. ರವಿ ಮುಂದೆ ಮುಖ್ಯಮಂತ್ರಿಯಾಗುವವರು ಭ್ರಷ್ಟಾಚಾರಿಯೇ ಆಗಿರುತ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ. ಸಿ.ಟಿ. ರವಿಗೆ ಒಂದು ಪ್ರಶ್ನೆ ರಾಜ್ಯದ ಇಡೀ ಬಿಜೆಪಿ ತಂಡದಲ್ಲಿ ಭ್ರಷ್ಟರಲ್ಲದೇ ಇರುವ ಮೂವರು ಹೆಸರು ಹೇಳಿ ಸಾಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಟಿ. ಹಾಲಪ್ಪ, ರಮೇಶ್ ಶಂಕರಘಟ್ಟ, ಶಿವುಕುಮಾರ್, ವೈ.ಹೆಚ್. ನಾಗರಾಜ್, ಜಿ.ಡಿ. ಮಂಜುನಾಥ್, ಶಿವಣ್ಣ, ಮಂಜುನಾಥ್ ಬಾಬು, ಸೈಯದ್ ವಾಹಿದ್ ಅಡ್ಡು, ಧೀರರಾಜ್ ಹೊನ್ನವಿಲೆ, ಕುಮಾರ್, ಕಲಗೋಡು ರತ್ನಾಕರ್ ಮುಂತಾದವರು ಇದ್ದರು.