ಶಿವಮೊಗ್ಗ,ಸೆ.28:
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಯುತ್ತಿರುವ ದಸರಾ ಸಂಭ್ರಮದಲ್ಲಿ ಸೆಪ್ಟಂಬರ್ 28ರ ನಾಳೆ ಸಾಕಷ್ಟು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದ್ದು, ಅಲ್ಲಮಪ್ರಭು ಉದ್ಯಾನವನದಲ್ಲಿ ಸಂಜೆ ಅದ್ದೂರಿ ಮ್ಯೂಸಿಕಲ್ ನೈಟ್ ಹಾಗೂ ಕರುನಾಡು ಚಕ್ರವರ್ತಿ, ಚಿತ್ರನಟ ಶಿವರಾಜ್ ಕುಮಾರ್ ಆಗಮನ ವಿಶೇಷ ಮೆರಗು ತಂದಿದೆ.

ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಅತ್ಯಂತ ವಿಶೇಷವಾಗಿ ಚಿತ್ರನಟ ಶಿವರಾಜ್ ಕುಮಾರ್, ಗಾಯಕರಾದ ಹೇಮಂತ್ ಕುಮಾರ್, ಅನುರಾಧ ಭಟ್ ಮತ್ತು ಸರಿಗಮಪ ಹಾಗೂ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಕಲಾವಿದರು ರಂಜನೆಯ ರಸದೌತಣ ನೀಡಲಿದ್ದಾರೆ.
ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಶಾಸಕ ಆರ್. ಪ್ರಸನ್ನ ಕುಮಾರ್, ಮಾಜಿ ಸಂಸದ ಆಯನೂರು ಮಂಜುನಾಥ್ ಆಗಮಿಸಲಿದ್ದಾರೆ.

ಸಂಜೆ ಆರು ಗಂಟೆಗೆ ಆಹಾರಮೇಳ ನಡೆಯಲಿದೆ. ಅದನ್ನು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಆರ್. ಅವಿನ್ ಉದ್ಘಾಟಿಸಲಿದ್ದಾರೆ. 28ರ ಸಂಜೆ 5:30ಕ್ಕೆ ಕುವೆಂಪುರಂಗ ಮಂದಿರದಲ್ಲಿ ಯೋಗ ಶಿಬಿರ ನಡೆಯಲಿದ್ದು, ಬೆಳಗ್ಗೆ 9:00 ರಿಂದ ರಾತ್ರಿ 8 ಗಂಟೆವರೆಗೆ ಕಮಲಾ ನೆಹರೂ ಕಾಲೇಜ್ ನಲ್ಲಿ ಗಮಕ ದಸರಾ ನಡೆಯಲಿದೆ. ಗಮಕ ರತ್ನಾಕರ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಸಂಜೆ 5:00 ಗಂಟೆಗೆ ಪತ್ರಿಕಾ ಭವನದಲ್ಲಿ ಪತ್ರಕರ್ತರ ದಸರಾ ನಡೆಯಲಿದ್ದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಶರತ್ ಅನಂತಮೂರ್ತಿ ಉದ್ಘಾಟಿಸಲಿದ್ದಾರೆ. ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಪೂರಕವಾಗಿ ಬೆಳಗ್ಗೆ 10 ಗಂಟೆಗೆ ಹಿರಿಯ ಪತ್ರಕರ್ತರಾದ ಎಸ್. ಚಂದ್ರಕಾಂತ್ ಮತ್ತು ಬಂಡಿಗಡಿ ನಂಜುಂಡಪ್ಪ ಅವರು ನಾಮಫಲಕ ಅನಾವರಣ ಮಾಡಲಿದ್ದು, ಪತ್ರಿಕಾ ಛಾಯಾಗ್ರಾಹಕರಿಂದ ಹಮ್ಮಿಕೊಂಡಿರುವ ಛಾಯಾಚಿತ್ರ ಪ್ರದರ್ಶನವನ್ನು ಹಿರಿಯ ಛಾಯಾಗ್ರಾಹಕ ಎಸ್. ಕೆ. ದಿನೇಶ್ ಉದ್ಘಾಟಿಸಲಿದ್ದಾರೆ.

ವ್ಯಂಗ್ಯ ಚಿತ್ರ ಪ್ರದರ್ಶನವನ್ನು ಹಿರಿಯ ವ್ಯಂಗ್ಯ ಚಿತ್ರಕಾರ ರಾಮಧ್ಯಾನಿ ಕೃಷ್ಣಮೂರ್ತಿ ಉದ್ಘಾಟಿಸಲಿದ್ದು, ಸಾರ್ವಜನಿಕರಿಗೆ ಪ್ರಬಂಧ, ಪದಬಂಧ ಹಾಗೂ ಕರೋಕೆ ಸ್ಪರ್ಧೆಯನ್ನು ಹಿರಿಯ ಪತಕರ್ತರಾದ ಜಿ. ಚಂದ್ರಶೇಖರ್ ಹಾಗೂ ಪದ್ಮನಾಭ ಉದ್ಘಾಟಿಸಲಿದ್ದಾರೆ. ಅಂತೆಯೇ ಪತ್ರಕರ್ತರು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಭಾಷಣ ಸ್ಪರ್ಧೆಯನ್ನು ವಾರ್ತಾ ಇಲಾಖೆಯ ಎಚ್. ಡಿ. ಭಾಗ್ಯ ಹಾಗೂ ವರದಿಗಾರ್ತಿ ಅರ್ಪಿತ ಉದ್ಘಾಟಿಸಲಿದ್ದಾರೆ.

ವಿಶೇಷವಾಗಿ ಸೆಪ್ಟೆಂಬರ್ 28ರ ಬೆಳಿಗ್ಗೆ 9:30 ರಿಂದ ರಾತ್ರಿ 8ರವರೆಗೆ ಕಮಲಾನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗಮಕವಾಚನ ವಾಕ್ಯ ವ್ಯಾಖ್ಯಾನ, ಗಮಕ ವಿಚಾರಗೋಷ್ಠಿ, ಉದಯೋನ್ಮುಖ ಕಲಾವಿದರಿಂದ ವಾಚನ ವ್ಯಾಖ್ಯಾನ ಹಾಗೂ ಮಧ್ಯಾಹ್ನ 1:45 ಕ್ಕೆ ರಾಜ್ಯಮಟ್ಟದ ಗಮಕ ಸ್ಪರ್ಧೆ ನಡೆಯಲಿದ್ದು, ಅಧ್ಯಕ್ಷತೆಯನ್ನು ರಾಮಮೂರ್ತಿ ಮೈಸೂರ್ ವಹಿಸಲಿದ್ದಾರೆ.
ನಾಳೆ ವಿಶೇಷವಾಗಿ ಸಂಜೆ 7 ಗಂಟೆಗೆ ಕುವೆಂಪುರಂಗಮಂದಿರಲ್ಲಿ ಕಾಂತೇಶ್ ಕದರಮಂಡಲಗಿ ನಿರ್ದೇಶನದ ಸಹ್ಯಾದ್ರಿ ರಂಗತರಂಗ ಸಂಸ್ಥೆಯ ವತಿಯಿಂದ ರಾವಿ ನದಿ ದಂಡೆಯಲ್ಲಿ ನಾಟಕ ಪ್ರದರ್ಶನವಾಗಲಿದೆ.
ಎಲ್ಲಾ ಕಾರ್ಯಕ್ರಮಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣಗೌಡ ಹಾಗೂ ಸ್ವಾಗತ ಹಾಗೂ ದಸರಾ ಸಮಿತಿಗಳು ಸ್ವಾಗತಿಸಿವೆ.