ಶಿವಮೊಗ್ಗ : ರಾಜ್ಯದ ಪಾಲಿನ ಜಿಎಸ್ಟಿಯನ್ನು ಕೊಡಿಸುವಲ್ಲಿ ರಾಜ್ಯದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ. ಜಿಎಸ್ಟಿ ಕೊಡಿಸುವುದಿರಲಿ, ಕರ್ನಾಟಕಕ್ಕೆ ಕೊಡಬೇಡಿ ಎಂದು ಹೇಳಿದವರು ಇವರೇ ಎಂದು ರಾಜ್ಯ ಬಿಜೆಪಿ ಸಂಸದರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಕಿಡಿಕಾರಿದರು.

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿನಿಂದ ಜಿಎಸ್ಟಿ ಕಡಿಮೆಯಾಗಿದೆಯಲ್ಲಾ ಎಂಬ ಮಾಧ್ಯಮದವರ ಪ್ರತಿಕ್ರಿಯೆಗೆ ಉತ್ತರಿಸಿ, ಹೌದು ಕಡಿಮೆಯಾಗಿದೆ ಆದರೆ ಕೇಂದ್ರ ಸರ್ಕಾರ ನಮ್ಮಿಂದ ಕೊಳ್ಳೆಹೊಡೆಯುವುದು ತಪ್ಪಿಲ್ಲವಲ್ಲ, ಸುಪ್ರೀಂಕೋರ್ಟ್ ಈ ಬಗ್ಗೆ ಛೀಮಾರಿ ಹಾಕಿದರೂ ಕೂಡ ನಮ್ಮ ಪಾಲಿನ ಜಿಎಸ್ಟಿ ಹಣ ಬರಲೇ ಇಲ್ಲ. ನಮ್ಮ ರಾಜ್ಯದ ಹಣವನ್ನು ಬೇರೆ ರಾಜ್ಯಗಳಿಗೆ ಕೊಟ್ಟರೆ ಆ

ಅನ್ಯಾಯವನ್ನು ನಾವು ಹೇಗೆ ಸಹಿಸಿಕೊಳ್ಳಬೇಕು ರಾಜ್ಯದ ಬಿಜೆಪಿ ಸಂಸದರು ಇದಕ್ಕೆ ಉತ್ತರ ಕೊಡಬೇಕಲ್ಲ, ಕೊಡಿಸುವುದು ಒತ್ತಿಟ್ಟಿಗಿರಲಿ ಈ ಮಹಾನುಭಾವರು ಕರ್ನಾಟಕ ರಾಜ್ಯಕ್ಕೆ ಜಿಎಸ್ಟಿ ಹಣವನ್ನೇ ಕೊಡಬೇಡಿ ಎಂದು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಟಿ ಕಾಲಿಟ್ಟಿದೆ. ಸುಮಾರು 80 ಸಾವಿರ ಎಕರೆ ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ ನಾಶವಾಗಿದೆ. 100 ಕೋಟಿ ರೂ. ಶಿವಮೊಗ್ಗ ಜಿಲ್ಲೆಗೆ ಬೇಕಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವೂ ಇದೆಯಲ್ಲವೆ. ಕೊಳೆರೋಗದಿಂದ ನಮ್ಮ ಜಿಲ್ಲೆಯ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಅವರಿಗೆಲ್ಲಾ ಕೇಂದ್ರ ಸರ್ಕಾರ ಸ್ಪಂದಿಸಬೇಕು ತಾನೇ. ನಮ್ಮ ಅಡಿಕೆ ಬೆಳೆಗಾರರ ಜಿಎಸ್ಟಿ ಹಣವನ್ನು ನಮಗೇ ಕೊಡಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದರು.

ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿ ಇಂದಿನಿಂದ ಪ್ರಾರಂಭವಾಗಿದೆ. ರಾಜ್ಯದಲ್ಲಿ ಸುಮಾರು 1 ಕೋಟಿ ಮನೆಗಳನ್ನು ಸಮೀಕ್ಷೆ ಮಾಡಬೇಕಾಗಿದೆ. 1.60 ಲಕ್ಷ ಸಮೀಕ್ಷಾದಾರರಿದ್ದಾರೆ. ಜಿಲ್ಲೆಯಲ್ಲಿ 5.3 ಲಕ್ಷ ಮನೆಗಳನ್ನು ತಲುಪಬೇಕಾಗಿದೆ. ಇದಕ್ಕಾಗಿ 3500 ಶಿಕ್ಷಕರು ನೇಮಕಗೊಂಡಿದ್ದಾರೆ. ಕಡಿಮೆ ಬಂದರೆ ಮತ್ತಷ್ಟು ಶಿಕ್ಷಕರನ್ನು ನೇಮಕಮಾಡಿಕೊಳ್ಳಲಾಗುವುದು. ಎಲ್ಲಾ ಹಿಂದುಳಿವ ವರ್ಗಗಳ ಅಂಕಿಅಂಶಗಳು ಸರ್ಕಾರಕ್ಕೆ ಗೊತ್ತಾಗಬೇಕು. ಕೇಂದ್ರ ಸರ್ಕಾರಕ್ಕೂ ಇದು ಮಾದರಿಯಾಗಿದೆ ನಮ್ಮ ಗ್ಯಾರೆಂಟಿಗಳನ್ನು ಅವರು ನಕಲು ಮಾಡಿದ್ದಾರೆ. ಇದೂ ಕೂಡ ಹಾಗೆಯೇ ಎಂದರು.

ಒಂದು ಜಾತಿಯನ್ನು ಇನ್ನೊಂದು ಧರ್ಮಕ್ಕೆ ಸಮೀಕರಿಸುವ ವಿಷಯ ಈಗ ಮುಗಿದು ಹೋಗಿದೆ. ಮತಾಂತರಗೊಂಡ ಯಾವ ಕ್ರಿಶ್ಚಿಯನ್ ಪದವು ಕೂಡ ಸಮೀಕ್ಷೆಯಲ್ಲಿ ಇಲ್ಲ ಅದು ಮುಗಿದ ಅಧ್ಯಾಯ ಎಂದರು. ಈಗಾಗಲೇ ನಿರ್ಧರಿಸಿದಂತೆ ಇಂದು ಸಾಹಿತಿ ಭಾನುಮುಸ್ತಾಕ್ ಅವರು ದಸರಾವನ್ನು ಉದ್ಘಾಟಿಸಿದ್ದಾರೆ. ಸುಪ್ರೀಂಕೋರ್ಟ್ ಬೇಡ ಎಂದವರಿಗೆ ತಕ್ಕ ಉತ್ತರ ಕೊಟ್ಟಿದೆ ಎಂದರು.

ಸ್ವಾತಂತ್ರ್ಯ ಬಂದ ಮೇಲೆ ಪ್ರಜಾ ಪ್ರಭುತ್ವದ ಕಗ್ಗೊಲೆ ಮಾಡುವ ಕಾರ್ಯವನ್ನು ಬಿಜೆಪಿ ಮಾಡುತ್ತಾ ಬಂದಿದೆ. ಬಿಜೆಪಿಯಿಂದ ಎಲ್ಲಾ ವಿಷಯಗಳಲ್ಲೂ ಪ್ರಜೆಗಳಿಗೆ ಮೋಸವಾಗುತ್ತಿದೆ. ಕಾಂಗ್ರೆಸ್ ಯೋಜನೆಗಳನ್ನು ಕದ್ದು ಕಾಪಿಮಾಡಿ, ಅದನ್ನು ನಾವು ಮಾಡಿದ್ದು ಎಂದು

ಹೇಳುತ್ತಾರೆ. ನಾವು ಮತದಾರರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಬಿಜೆಪಿ ಈಡೇರಿಸಿಲ್ಲ ಬಿಜೆಪಿಯವರು ಚುನಾವಣಾ ಆಯೋಗದೊಂದಿಗೆ ಶಾಮೀಲಾಗಿ ಮತಗಳ್ಳತನ ಮಾಡಿದ್ದು ದೇಶದ ಪ್ರಜಾಪ್ರಭುತ್ವದಲ್ಲಿ ನಡೆದ ದೊಡ್ಡ ದುರಂತ ಎಂದರು. ದೇಶ ಸರ್ವನಾಶವಾಗಲು ಕಾಂಗ್ರೆಸ್ ಎಂದಿಗೂ ಬಿಡುವುದಿಲ್ಲ ಎಂದರು.