ಶಿವಮೊಗ್ಗ: ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ವಿಶ್ವ ಉದ್ಯಮಿಗಳ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸ್ಥಳೀಯ ಯಶಸ್ವಿ ಉದ್ಯಮಿಗಳ ಸಂಸ್ಥೆಗಳಿಗೆ ಭೇಟಿ ನೀಡಿ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು.

ಆಹಾರ ಉತ್ಪನ್ನಗಳ ಉದ್ಯಮಿ ಕವಿತಾ, ಬಾಡಿಗೆ ವೇಷಭೂಷಣದ ಉದ್ಯಮ ನಡೆಸುತ್ತಿರುವ ಉಮಾ, ಫಿಟ್ನೆಸ್ ಕೋಚಿಂಗ್ ಉದ್ಯಮ ನಡೆಸುತ್ತಿರುವ ಸುನಿತಾ ಚೇತನ್ ಅವರನ್ನು ಭೇಟಿ ಮಾಡಿದ ವಿದ್ಯಾರ್ಥಿಗಳ ತಂಡ, ಯಶಸ್ವಿ ಉದ್ಯಮದ ಪ್ರಯಾಣದ ಹಾದಿ, ಎದುರಿಸಿದ ಸವಾಲುಗಳು ಮತ್ತು ಬಳಸಿದ ತಂತ್ರಗಳ ಕುರಿತಾಗಿ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡಿ, ಉದ್ಯಮಶೀಲತೆ ಎಂಬುದು ಬದುಕಿನಲ್ಲಿ ಆರ್ಥಿಕ ಬೆಳವಣಿಗೆಗೆ ಮತ್ತು ಸ್ವಾವಲಂಬನೆಗೆ ಸಿಕ್ಕ ಅದ್ಭುತ ಶಕ್ತಿ. ನಾವೀನ್ಯ ಯೋಜನೆಗಳನ್ನು ಉದ್ಯಮಶೀಲವಾಗಿ ರೂಪಿಸುವಲ್ಲಿ ಕಾಲೇಜಿನಲ್ಲಿ ಐಡಿಯಾ ಲ್ಯಾಬ್, ಐಇಡಿಸಿ, ಕಾರ್ಟ್ ನಂತಹ ವೇದಿಕೆಗಳು ಪೂರಕವಾಗಿ ನಿಲ್ಲಲಿದೆ ಎಂದು ಹೇಳಿದರು.

ನ್ಯೂಜೆನ್ ಐಇಡಿಸಿ ಯೋಜನಾ ಸಂಯೋಜಕ ಡಾ.ಕೆ.ಎಂ.ಬಸಪ್ಪಾಜಿ ಮಾತನಾಡಿ, ಉದ್ಯಮಿ ದಿನದ ಆಚರಣೆಯ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಚಿಂತನೆಗಳನ್ನು ಉದ್ದೀಪನಗೊಳಿಸಲು ಸಾಧ್ಯವಾಗಲಿದೆ. ಸರ್ಕಾರದಿಂದ ನಾವೀನ್ಯ ಚಿಂತನೆಗಳನ್ನು ಸಮಾಜಮುಖಿ ಯೋಜನೆಯಾಗಿ ಪರಿವರ್ತನೆಗೊಳ್ಳಲು ಅನೇಕ ಆರ್ಥಿಕ ಸಹಕಾರಿ ವೇದಿಕೆಗಳನ್ನು ನೀಡಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ಇದೇ ವೇಳೆ ಉದ್ಯಮಶೀಲತೆಯ ಪರಿಕಲ್ಪನೆಗಳು, ಸ್ಟಾರ್ಟ್-ಅಪ್ ವ್ಯವಸ್ಥೆ ಮತ್ತು ಯಶಸ್ಸಿನ ಕಥೆಗಳ ಬಗ್ಗೆ ವಿದ್ಯಾರ್ಥಿಗಳ ಅರಿವನ್ನುವಿಸ್ತರಿಸಲು ಉದ್ಯಮಶೀಲತೆಯ ಕುರಿತಾಗಿ ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಸಿ.ಶ್ರೀಕಾಂತ್, ಸಹಾಯಕ ಪ್ರಾಧ್ಯಾಪಕಿ ಡಾ.ಪಿ.ಎಸ್.ಸುಭದ್ರಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.