ಶಿವಮೊಗ್ಗ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನ – ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಸ್ವಾತಂತ್ರ್ಯ ಚಳುವಳಿ ವಿಚಾರವಾಗಿ ಗುಂಪು ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದು ಕಾಲೇಜಿನಿಂದ ಐವರು ವಿದ್ಯಾರ್ಥಿಗಳನ್ನು ಒಳಗೊಂಡ ಒಂದು ತಂಡ ಅಥವಾ ಹೆಚ್ಚು ತಂಡಗಳು ಭಾಗವಹಿಸುವ ಕಾರ್ಯಕ್ರಮ ಪ್ರತಿ ತಾಲ್ಲೂಕು ಹಂತದಲ್ಲಿ ನಡೆಯಲ್ಲಿದ್ದು, ಶಿವಮೊಗ್ಗ ತಾಲ್ಲೂಕಿನ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಗಸ್ಟ್ 1 ರಂದು ಶುಕ್ರವಾರ ಬೆಳಿಗ್ಗೆ 10 ಕ್ಕೆ ಸಹ್ಯಾದ್ರಿ ವಾಣಿಜ್ಯ ಮತ್ತು ಸಂವಹನ ಕಾಲೇಜು ಸಭಾಂಗಣದಲ್ಲಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ ಎಂ. ಎಸ್. ಉದ್ಘಾಟಿಸಲಿದ್ದಾರೆ. ಕಸಾಪ, ಕಸಾಸಾಂ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ, ಕುವೆಂಪು ವಿ. ವಿ. ಸಿಂಡಿಕೇಟ್ ಸದಸ್ಯರಾದ ಕೆ. ಪಿ. ಶ್ರೀಪಾಲ್, ಅನನ್ಯ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಅನನ್ಯ ಗಿರೀಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಹಾದೇವಿ ಭಾಗವಹಿಸುವರು. ಸಹ್ಯಾದ್ರಿ ವಾಣಿಜ್ಯ ಕಾಲೇಜು ಪ್ರಾಂಶುಪಾಲರಾದ ಟಿ. ಅವಿನಾಶ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ವಿಶ್ರಾಂತ ಪ್ರಾಚಾರ್ಯರಾದ ಡಾ. ಎಚ್. ಟಿ. ಕೃಷ್ಣಮೂರ್ತಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶ್ ಮರ್ಗನಹಳ್ಳಿ, ಕನ್ನಡ ಉಪನ್ಯಾಸಕರು, ರಂಗಕರ್ಮಿ ಡಾ. ಜಿ. ಆರ್. ಲವ,, ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಪಿ.ಆರ್.ಓ. ಸಿ.ಎಂ. ನೃಪತುಂಗ ಅವರು ಭಾಗವಹಿಸಲಿದ್ದಾರೆ.

ಆಗಸ್ಟ್ 5 ರಂದು ಶಿವಮೊಗ್ಗ ಗೋಪಿಶೆಟ್ಟಿಕೊಪ್ಪ ಬಡಾವಣೆಯಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾದ ಮೂರು ತಂಡಗಳು ಭಾಗವಹಿಸಲು ಅವಕಾಶವಿದೆ ಎಂದು ಡಿ. ಮಂಜುನಾಥ ತಿಳಿಸಿದ್ದಾರೆ.