
ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 55
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಈ ಸಮಾಜ ಎಷ್ಟು ವಿಭಿನ್ನವಾಗಿರುತ್ತದೆ ಗೊತ್ತಾ? ಇಲ್ಲಿನ ಕೆಲವೇ ಕೆಲವರು ಮಾಡುವ ಕುತಂತ್ರದ ಬುದ್ಧಿಯಿಂದ ಇಡೀ ವ್ಯವಸ್ಥೆ, ನಾನು ಏರುಪೇರುಗಳನ್ನು ಕಾಣುತ್ತಿದೆ ಅಲ್ಲವೇ? ಇಲ್ಲಿ ಕೆಲವರು ನಾಟಕದ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಒಂದೆಡೆ ದೇವತಾ ಮನುಷ್ಯನಂತೆ ಆಟವಾಡುತ್ತಾ, ಮತ್ತೊಂದೆಡೆ ತನಗಿರುವ ರಾಕ್ಷಸಿ ಗುಣವನ್ನು ತೋರಿಸಿಕೊಳ್ಳುವ, ಅದನ್ನು ಹರಡಿ ಸಮಾಜದ ಎಲ್ಲರನ್ನು ಅನುಮಾನದಲ್ಲೇ ಬದುಕುವಂತೆ ರೂಪಿಸಿ ಬಿಡುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.

ಸಾಮಾಜಿಕ ಜಾಲತಾಣದ ಚಿತ್ರ
ಸಮಾಜದ ಕೆಲವೇ ಕೆಲವರು ಇನ್ನೊಬ್ಬರಿಗೆ ಟೋಪಿ ಹಾಕಲು, ಇನ್ನೊಬ್ಬರನ್ನು ವಂಚಿಸಿ ತಾವು ಮಾತ್ರ ತಮ್ಮ ಅನಿವಾರ್ಯತೆಗಳನ್ನು ರೂಪಿಸಿಕೊಂಡಂತೆ ಬಿಂಬಿಸುವ ಕೆಲ ಕೆಟ್ಟ ಮುಖಗಳನ್ನು ನಾವು ನಮ್ಮ ಮಗ್ಗುಲಲ್ಲೇ ಇಟ್ಟುಕೊಂಡಿದ್ದೇವೆ ಎಂಬುದನ್ನು ಮರೆಯದಿರುವುದು ಹಾಗೂ ಎಚ್ಚರಾವಸ್ಥೆಯಲ್ಲಿರುವುದು ಒಳ್ಳೆಯದಲ್ಲವೇ?.
ಇಲ್ಲಿ ಅತಿ ಮುಖ್ಯವಾಗಿ ಕೈಗಡ ಎಂದು ಯಾವುದೋ ಒಂದಿಷ್ಟು ವಸ್ತುಗಳನ್ನು ಅಥವಾ ಹಣವನ್ನು ಕೊಟ್ಟಾಗ ಅದನ್ನು ವಾಪಾಸ್ ಕೊಡುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ನಿಯತ್ತಿನ ಬದುಕು ನಮ್ಮ ನಡುವೆ ಅಷ್ಟೇ ಪ್ರಮಾಣದಲ್ಲಿದೆ. ಆ ನಿಯತ್ತಿನ ಬದುಕು ನಮಗೆ ಅತ್ಯಂತ ಮಹತ್ವ ಹಾಗೂ ಮುಖ್ಯ ಎನಿಸುವುದಿಲ್ಲ. ಏಕೆಂದರೆ ಅದು ಕೊಡುಕೊಳ್ಳುವ ಮಾಮೂಲಿ ವಿಧಾನ ಅಷ್ಟೇ.

ಆದರೆ ಇಂತಹ ಘಟನೆಗಳಲ್ಲಿ ಕೆಲವೇ ಕೆಲವು ವಿಕೃತರು ಕೊಡುವುದರಿಂದ ತಪ್ಪಿಸಿಕೊಳ್ಳಲು ಅಥವಾ ಕೊಡುವುದನ್ನೇ ಮರೆತು ಬಿಡುವ ನಯವಂಚಕರು ಇದ್ದಾರೆ ಎಂಬುದನ್ನು ಮರೆಯಬಾರದು.
ಬಹುತೇಕ ಎಲ್ಲಾ ಪಾಸಿಟಿವ್ ಮನಸುಗಳಲ್ಲಿ ಇಂತಹ ನೆಗೆಟಿವ್ ಮನಸುಗಳ ವ್ಯಕ್ತಿಗಳು ಬಂದು ಹೋಗಿರುತ್ತಾರೆ. ಅವರ ಭಾವನೆಗಳೇ ನಮ್ಮ ಪಾಸಿಟಿವ್ ಮನಸ್ಸನ್ನು ನಾನಾ ಬಗೆಯಲ್ಲಿ ಪ್ರಶ್ನಿಸಿಕೊಳ್ಳುವಂತೆ ಮಾಡಿಬಿಡುತ್ತದೆ. ಕೊಡುವುದನ್ನು ಕೊಟ್ಟೆ ಕೊಟ್ಟೆ ಎನ್ನುತ್ತಲೇ ತಿಂಗಳು, ವರುಷ ಕಳೆದರೂ ಅದರ ಬಗ್ಗೆ ಮಾತನಾಡದೆ ಕೇಳಿದಾಗ ಕೊಡುವೆ ಖಂಡಿತ ಎಂದು ನಾಳೆ ಎಂಬ ಮುಖವಾಡವನ್ನು ಬಿಂಬಿಸುವ ನಾಟಕೀಯ ವ್ಯಕ್ತಿಗಳು ಸದ್ದು ಮಾಡದೆ ನಮ್ಮ ಮನಸ್ಸೆಂಬ ದೇಗುಲವನ್ನೇ ನಾಶ ಮಾಡಿಬಿಡುತ್ತಾರೆ. ಪಡೆಯುವಾಗ ಇರುವ ಕಾಳಜಿ ಅಥವಾ ಕೇಳುವ ಪರಿ ಕೊಡುವಾಗ ತಪ್ಪಿಸಿಕೊಳ್ಳಲು ಇಚ್ಛೆ ಪಡುವುದಂತೆ.ಮಾನ ಮರ್ಯಾದೆ ಎಂಬುದು ಇಲ್ಲದಂತ ಆಡುವ ಸಮಾಜದಲ್ಲಿ ನಮ್ಮದೆಲ್ಲಾ ಹೌದು ಎಂಬುದನ್ನು ತೋರಿಸುವ ಇಂತಹ ಕೆಲ ವಿಕೃತ ಮನಸ್ಸುಗಳು ಇಡೀ ನಮ್ಮ ಸಮಾಜಕ್ಕೆ ಒಂದು ಕಪ್ಪು ಚುಕ್ಕೆ ಎಂದರೆ ತಪ್ಪಾಗಲಿಕ್ಕಿಲ್ಲ.

ಏಕೆಂದರೆ ನಮ್ಮ ನಡುವಿನ ಎಲ್ಲ ವ್ಯವಹಾರಗಳು ಶಿಸ್ತು ಬದ್ಧವಾಗಿ ನಡೆದರೂ ಸಹ ಅದು ದೈನಂದಿನ ಚಟುವಟಿಕೆಯಂತೆ ಮರೆತು ಹೋಗುತ್ತದೆ. ಆದರೆ ಕೆಲ ದುರಾಸೆಯ ಮನುಷ್ಯರು ತಮಗೆ ಮಾತ್ರ ಹೆಂಡತಿ ಮಕ್ಕಳಿದ್ದಾರೆ. ಬೇರೆಯವರ ಬಗ್ಗೆ ನಮಗೇಕೆ ಚಿಂತೆ ಎಂದು ತನ್ನ ತನ್ನ ನೀಚ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವ, ಮೋಸ ಮಾಡುವ ವಂಚಕ ಮನಸುಗಳಿಗೆ ದೊಡ್ಡದೊಂದು ಧಿಕ್ಕಾರವಿರಲಿ.
ಸಮಾಜದ ಎಲ್ಲ ಸ್ಥರಗಳನ್ನು ಬಗೆ ಬಗೆಯಾಗಿ ನೋಡಬಹುದಾಗಿದ್ದು ನಮ್ಮ ನಡುವಿನ ಒಳ್ಳೆಯತನ ಇನ್ನೊಬ್ಬರಿಗೆ ವರದಾನವಾಗದಿರಲಿ. ಹಾಗೆಯೇ ನಮ್ಮನ್ನು ಕುರಿಗಳಂತೆ ಹಳ್ಳ ಹತ್ತಿಸುವ ಮೋಸ, ವಂಚನೆಯ ಮನಸ್ಸುಗಳನ್ನು ದೂರ ಬಿಡುವುದು ಅತ್ಯಗತ್ಯ ಹಾಗೂ ಅನಿವಾರ್ಯವಲ್ಲವೇ?
ಅತಿಯಾದರೆ ಅಮೃತವು ವಿಷವಾಗುತ್ತೆ ಎಂಬ ವಾಕ್ಯವನ್ನು ನಮ್ಮ ಬದುಕಿನಲ್ಲಿ ಕಟ್ಟಿಕೊಳ್ಳುವುದು, ಪಾಲಿಸುವುದು ಈಗ ಅನಿವಾರ್ಯವಾಗಿದೆ. ನಮ್ಮಲ್ಲಿರುವ ಮುಗ್ಧ ಹಾಗೂ ಉದಾರ ಮನಸ್ಸುಗಳನ್ನು ಪದೇ ಪದೇ ಹಿಂಸಿಸುವ ನೋಯಿಸುವ, ಹೀನ ವ್ಯಕ್ತಿತ್ವದ ಕೆಲವರಿಗೆ ಒಂದು ಶಾಶ್ವತ ಫುಲ್ ಸ್ಟಾಪ್ ಇಡುವುದು ಅಗತ್ಯ ಎಂದರೆ ತಪ್ಪಾಗಲಿಕ್ಕಿಲ್ಲ.
ಎಲ್ಲರ ಗಮನಕ್ಕೆ..
ಕಳೆದ 55 ವಾರಗಳಿಂದ ಮೂಡಿಬರುತ್ತಿರುವ ನೆಗೆಟಿವ್ ಥಿಂಕಿಂಗ್ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಮುಕ್ತ ಸ್ವಾಗತ. ಹಾಗೆಯೇ ಇದರ ಪಾತ್ರಧಾರಿ ಹಾಗೂ ನೆಗೆಟಿವ್ ಮನಸ್ಸು ನಿಮ್ಮಲ್ಲಿದ್ದರೆ ಅದಕ್ಕೂ ನಮಗೂ ಸಂಬಂಧವಿಲ್ಲ. ಇಲ್ಲಿ ಯಾರನ್ನೂ ಉದ್ದೇಶಿಸಿ ಬರೆದಿಲ್ಲ. ಕಳ್ಳ ಮನಸ್ಸು ನಾನೇ ಅಂದುಕೊಂಡರೆ ನಾವೇನು ಮಾಡಲು ಆಗುತ್ತದೆ.
ತುಂಗಾತರಂಗ ದಿನಪತ್ರಿಕಾ ಬಳಗ