ಶಿವಮೊಗ್ಗ : ರಾಜೀವ್ ಗಾಂಧಿ ವಸತಿ ಯೋಜನೆಗೆ ಸಂಬಂಧಿಸಿದಂತೆ ಆಳಂದ ಶಾಸಕ ಬಿ.ಆರ್ ಪಾಟೀಲ್ ಮಾಡಿರುವ ಆರೋಪದ ಸತ್ಯ ಹೊರ ಬರಬೇಕಾದರೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಶಾಸಕರೆ ಸಚಿವರ ಮೇಲೆ ಈ ರೀತಿ ಆರೋಪ ಮಾಡುವುದರಿಂದ ಪಕ್ಷದಲ್ಲಿ ಗೊಂದಲ ಉಂಟಾಗುತ್ತದೆ. ಆರೋಪ ಸತ್ಯವೋ ಸುಳ್ಳೋ, ಸತ್ಯಾಂಶ ಹೊರಬರಬೇಕು. ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆಕೊಟ್ಟು ತನಿಖೆ ಎದುರಿಸುವುದು ಸೂಕ್ತ ಎನ್ನುವುದು ತಮ್ಮ ಅಭಿಪ್ರಾಯ ಎಂದರು.

ಸಚಿವರ ಮೇಲೆ ಇಂತಹ ಆರೋಪಗಳು ಹೊಸದಲ್ಲ. ಈ ಹಿಂದೆ ನಾಗೇಂದ್ರ ಅವರ ಮೇಲೆ ಇಂತಹ ಆರೋಪ ಬಂದಾಗ ಮುಖ್ಯಮಂತ್ರಿಗಳ ಸಲಹೆಯಂತೆಅವರು ರಾಜೀನಾಮೆಕೊಟ್ಟರು. ಇಂತಹ ಹಲವು ಉದಾಹರಣೆಗಳಿವೆ. ಇದು ವಸತಿ ಸಚಿವರು ರಾಜೀನಾಮೆ ಕೊಡುವುದು ಸೂಕ್ತ ಎಂದು ಆಗ್ರಹಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರವು ರಸ ಗೊಬ್ಬರದ ಮೇಲಿನ ಬೆಲೆ ಹೆಚ್ಚಳ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ತಾವು ರೈತರ ಪರ ಎನ್ನುತ್ತಾರೆ. ಹಾಗಾದರೆ ಈಗ ರಸಗೊಬ್ಬರವನ್ನುದುಬಾರಿ ಮಾಡಿ, ಯಾಕೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದರು ಎನ್ನುವದನ್ನು ಬಹಿರಂಗ ಪಡಿಸಲಿ. ಹಾಗೆಯೇ ರಸಗೊಬ್ಬರ ದ ಬೆಲೆ ಹೆಚ್ಚಳದ ಬಗ್ಗೆ ಬಿಜೆಪಿ ನಾಯಕರು ಯಾಕೆ ಮೌನ ವಾಗಿದ್ದಾರೆನ್ನುವುದು ಕೂಡ ಹೊರ ಬರಲಿ ಎಂದು ಕಟುಕಿದರು.

ಹಾಲಿನ ದರ ಒಂದು ರೂಪಾಯಿ ಹೆಚ್ಚಳವಾದಾಗ ಬಿಜೆಪಿ ನಾಯಕರು ಬೊಬ್ಬೆ ಹೊಡೆದುಕೊಂಡಿದ್ದರು. ಕಾಂಗ್ರೆಸ್ ಸರ್ಕಾರ ರೈತ ವಿರೋಧಿ, ಜನ ವಿರೋಧಿ ಎಂದು ಬಿ.ವೈ ವಿಜಯೇಂದ್ರ ಅವರು ವೀರಾ ವೇಷದಲ್ಲಿ ಮಾತನಾಡಿದ್ದರು. ಈಗ ಯಾಕೆ ಮೌನವಾಗಿದ್ದಾರೆ? ರಸಗೊಬ್ಬರ ರೈತರಿಗೆ ಬೇಡವೇ? ರೈತರು ಈಗ ಸಂಕಷ್ಟ ದಲ್ಲಿದ್ದಾರೆ. ನಾನಾ ಕಾರಣಕ್ಕೆ ಬೆಳೆ ಬೆಳೆಯುವುದೇ ಕಷ್ಟವಾಗಿದೆ .ಇಂತಹ ಸಂದರ್ಭದಲ್ಲಿ ರಸಗೊಬ್ಬರದ ಮೇಲಿನ ದರ ಹೆಚ್ಚಳ ಮಾಡಿರುವುದು ರೈತ ವಿರೋಧಿ ಅಲ್ಲವೇ ಎಂದು ಗುಡುಗಿದರು.
ರಾಷ್ಟ್ರ ಧ್ವಜ ವನ್ನು ಕೇಸರಿಕರಣ ಮಾಡಬೇಕೆನ್ನುವ ಹುನ್ನಾರ ನಡೆದಿದೆ. ಇದು ರಾಷ್ಟ್ರ ವಿರೋಧಿ ಕೃತ್ಯವಲ್ಲವೇ? ಮಾತೆತ್ತಿದರೆ ತಾವು ರಾಷ್ಠ್ರ ಭಕ್ತರು, ರಾಷ್ಟ್ರ ಪ್ರೇಮಿಗಳು ಎನ್ನುವವರೆ ಈಗ ರಾಷ್ಟ್ರ ಧ್ವಜವನ್ನು ಕೇಸರಿಕರಣ ಮಾಡಲು ಹೊರಟಿದ್ದಾರೆ. ಇದು ಖಂಡನೀಯ ಎಂದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ ಇದ್ದರು.