ಶಿವಮೊಗ್ಗ: ಚಕ್ರಾ -ಸಾವೇಹಕ್ಲು ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟು ಹಂಚಿಕೆಯಾದ ನಿವೇಶನಗಳನ್ನು ಅಕ್ರಮ ಖಾತೆ ಮಾಡಿಸಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಮತ್ತು ಅಕ್ರಮ ಖಾತೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಹಾಯ್ಹೊಳೆ ಗ್ರಾಮಸ್ಥರು ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅಗಸವಳ್ಳಿ ಗ್ರಾಮ ಪಂಚಾಯಿತಿ ಸ.ನಂ.167 ರಲ್ಲಿ ಚಕ್ರಾ ಸಾವೇಹಕ್ಲು ಪುನರ್ವಸತಿ ಕಾಲೋನಿಯಲ್ಲಿ 205 ನಿವೇಶನಗಳನ್ನು ಸಂತ್ರಸ್ತರಿಗಾಗಿ 1979-80 ರಲ್ಲಿ ಮೀಸಲಿಡಲಾಗಿತ್ತು. ಕೆಪಿಸಿಯವರ ಶಿಫಾರಸಿನಂತೆ ಶಿವಮೊಗ್ಗ ತಾಲೂಕು ತಹಸೀಲ್ದಾರ್ ಅವರು 1985 ರಿಂದ 1994-95 ರತನಕ ಹಂತಹಂತವಾಗಿ ನಿವೇಶನಗಳಿಗೆ ಹಕ್ಕು ಪತ್ರ ನೀಡಿದ್ದರು. ಈ ರೈತರಲ್ಲಿ ಕೆಲವರು ನಿವೇಶನ ಖಾತೆ ಮಾಡಿಸಿಕೊಂಡಿದ್ದು,

ಪಂಚಾಯಿತಿಯಿಂದ ಇ-ಸ್ವತ್ತು ಕೂಡಾ ಮಾಡಿಸಿಕೊಂಡಿದ್ದಾರೆ. ಆದರೆ ಉಳಿದ ಮುಳುಗಡೆ ಸಂತ್ರಸ್ತರು ತಮಗೆ ಮೀಸಲಿಟ್ಟಿರುವ ನಿವೇಶನಗಳಲ್ಲಿ ಖಾತೆ ಮಾಡಿಸುವುದಕ್ಕೆ ವಿಳಂಬ ಮಾಡಿದ್ದಾರೆ. ಈ ಅವಕಾಶ ಬಳಸಿಕೊಂಡಿರುವ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿಕೊಂಡು ನಿವೇಶನ ಲಪಟಾಯಿಸುತ್ತಿದ್ದಾರೆ. ಈಗಾಗಲೇ ಸುಮಾರು 30 ಕ್ಕೂ ಹೆಚ್ಚು ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟವನ್ನೂ ಮಾಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ನಕಲಿ ಹಕ್ಕು ಪತ್ರ ಸೃಷ್ಟಿಸಲಾಗಿದೆ. ಅಗಸವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳು ಮತ್ತು ಪಿಡಿಒ ಸೇರಿದಂತೆ ಅಧಿಕಾರಿಗಳು ಸ್ಥಳ ಮಹಜರು ಮಾಡದೆ ದಾಖಲೆ ಮಾಡಿಕೊಟ್ಟಿದ್ದಾರೆ. ಮುಳುಗಡೆ ಸಂತ್ರಸ್ತರಿಗೆ 80&120 ನಿವೇಶನ ನೀಡಿದ್ದು, ಈಗ ಈ ನಿವೇಶನಗಳ ಬೆಲೆ ಲಕ್ಷಾಂತರ ರೂ. ಆಗಿದ್ದು, ಈ ನಕಲಿ ದಾಖಲೆ ಸೃಷ್ಟಿ ಮತ್ತು ಮಾರಾಟದ ಹಿಂದೆ ಭೂ
ಮಾಫಿಯಾವೇ ಇರುವ ಅನುಮಾನವಿದೆ. ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು. ಚಕ್ರಾ-ಸಾವೇಹಕ್ಲು ಮುಳುಗಡೆ ಸಂತ್ರಸ್ತರಿಗೆ ಸಿಗಬೇಕಾದ ನಿವೇಶನಗಳನ್ನು ಸಂತ್ರಸ್ತರಲ್ಲದವರಿಗೆ ನೀಡುತ್ತಿರುವ ಕಳ್ಳದಂಧೆಯನ್ನು ನಿಲ್ಲಿಸಬೇಕಿದೆ ಎಂದು ಮುಳುಗಡೆ ಸಂತ್ರಸ್ತರು ದೂರಿದ್ದಾರೆ. ಸಂತ್ರಸ್ತರಲ್ಲದ ಪರ ಊರಿನವರಿಗೆ ಮಾಡಿಕೊಟ್ಟ ದಾಖಲೆ, ಕ್ರಯ ಪತ್ರಗಳ ಪ್ರತಿಯನ್ನು ಸಂತ್ರಸ್ಥರು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.
ಈ ಸಂದರ್ಭ ಸಂತ್ರಸ್ತರಾದ ವೀರಪ್ಪಗೌಡ, ಅಖೀಲೇಶ ಗೌಡ, ಉಮೇಶ್, ಗಣಪತಿ, ಪರ್ವತಪ್ಪ ಸೇರಿದಂತೆ ಹಲವರು ಹಾಜರಿದ್ದರು.