








ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 50
- ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಈ ನಮ್ ಜನ ಏನ್ ಬೇಕಾದ್ರೂ ಹೇಳ್ತಾರೆ, ಎಲ್ಲಾ ಚೆಂದಾಗಿದ್ದರೂ ಆಡ್ಕೋತಾರೆ, ಹದಗೆಟ್ಟರೂ ಸುಮ್ನಿರಲ್ಲ. ಜನರಾಡುವ ಮಾತಿಗೆ ತಲೆಕೆಡಿಸಿಕೊಳ್ಳದೆ ನಮ್ಮಷ್ಟಕ್ಕೆ ನಾವು ಸ್ವಂತಿಕೆಯಲ್ಲಿ ಬೆಳೆಯುವುದು ಒಳ್ಳೆಯದಲ್ಲವೇ? ಜನರಾಡುವ ಮಾತಿಗೆ ತಲೆಕೆಡಿಸಿಕೊಂಡರೆ ಏನ್ ಲಾಭ ಬರುತ್ತೆ ಶಿವಾ ಎಂಬ ವಿಷಯ ಈ ವಾರದ ಸುವರ್ಣ ಸಂಭ್ರಮದ ನೆಗೆಟಿವ್ ಥಿಂಕಿಂಗ್ ಅಂಕಣದ ವಿಷಯ.

ನಾವು ಈ ಸಮಾಜದ ಜೊತೆ ಬೆಳೆಯುತ್ತಿದ್ದೇವೆ. ಇಲ್ಲಿ ಒಳ್ಳೆಯವರ ಸಾಮ್ರಾಜ್ಯವಿದೆ, ಹಾಗೆ ಕೆಲವೇ ಕೆಲವು ನೀತಿಗೆಟ್ಟವರ, ಮೋಸ ಮಾಡುವವರ, ವಂಚಿಸುವವರ, ದಿನಾ ಹೊಸ ಗಿರಾಕಿ ಹುಡುಕಿ ತಲೆ ಬೋಳಿಸುವ ಸಮುದಾಯವಿದೆ.
ಇಂತಹ ನೀತಿಗೆಟ್ಟವರನ್ನು ನಾವು ಪಕ್ಕದಲ್ಲೇ ಇಟ್ಟುಕೊಂಡಿದ್ದೇವೆ ಹಾಗಾಗಿ ಎಚ್ಚರದಿಂದಿರಬೇಕು ಎಂಬುದೇ ಅತಿ ಮುಖ್ಯ ಉದ್ದೇಶವಲ್ಲವೇ? ಅವರು ನಮ್ಮ ನಡುವೆ ಸದಾ ಗೊತ್ತಿದ್ದು ಗೊತ್ತಿಲ್ಲದಂತೆ ಆಟವಾಡುವ ತಿಮಿಂಗಲಗಳಂತೆ ಕಾಣಿಸಿಕೊಳ್ಳುತ್ತಾರೆ ನಾವು ಉದಾರತೆ ನೆಪದಲ್ಲಿ ಮುಗ್ಧರಾಗಿ ನಮ್ಮನ್ನು ಕಳೆದುಕೊಳ್ಳುತ್ತಿರುವುದು ದುರಂತವಲ್ಲವೇ?
ಈ ಸಮಾಜ ಅದರೊಳಗಿನ ನಾವು ಪ್ರಶ್ನೆಯಾಗಿ ಉಳಿದುಕೊಳ್ಳುತ್ತೇವೆ. ಏಕೆಂದರೆ ಒಂದು ತಪ್ಪು ಸರಿ ಮಾಡಿಕೊಳ್ಳುವುದರೊಳಗೆ ಮತ್ತೊಂದು ತಪ್ಪಿನೊಳಗೆ ಸಿಲುಕುತ್ತೇವೆ. ಆಸೆ ಇರಬೇಕು ಆದರೆ ದುರಾಸೆ ಒಳ್ಳೆಯದಲ್ಲ ಹಾಗೆಯೇ ಮೋಸದ ಯಾವುದೇ ವಸ್ತು ಹಣ ಏನೇ ಆಗಿರಲಿ ಅದು ನಮ್ಮ ಕಲ್ಮಶಕ್ಕೆ ಸಮ ಎಂಬುದನ್ನು ಅರಿತುಕೊಳ್ಳುವವರು ನಮ್ಮ ನಡುವೆ ಸಾಕಷ್ಟು ಜನರಿದ್ದಾರೆ. ಆದರೆ ಕೆಲವೇ ಕೆಲವು ಕಿರಾತಕ ವಿಕೃತ ಮನಸ್ಸುಗಳಿಗೆ ಸದಾ ಎತ್ತುವಳಿ ಸಂಸ್ಕೃತಿಯವರು ಅನ್ಯರನ್ನು ಅವರ ಮುಗ್ಧತೆಯನ್ನು ಅವರ ಉದಾರತೆಯನ್ನು ವಂಚಿಸುವ ಕಾಯಕ ನಿರಂತರವಾಗಿ ನಡೆಯುತ್ತದೆ.

ಮೋಸದಿಂದ ಪದೇ ಪದೇ ವಂಚನೆಗೆ ಒಳಗಾಗುವುದು ಒಳ್ಳೆಯದಲ್ಲ ಅಲ್ಲವೇ? ಈ ನಮ್ಮ ಜನ ಹೇಗಿದ್ದಾರೆ ಎಂದರೆ ಶ್ರೀಮಂತರು ಅದರಲ್ಲೂ ದುಡ್ಡಿರುವವರು ಕೋಟ್ಯಾಧಿಪತಿಗಳು ಏನು ಮಾಡಿದರೂ ಅದು ನೆಪಮಾತ್ರದ ಚರ್ಚೆಯಾಗಿ ಬಿಡುತ್ತದೆ. ಅದೇ ಅಮಾಯಕ ಅಸಹಾಯಕ ತಪ್ಪು ಮಾಡಿದರೆ ಅದೇ ದೊಡ್ಡ ವಿಷಯವಾಗಿ ಹೋಗುತ್ತದೆ. ಅದೇ ನಮ್ಮ ನಡುವೆ ಬಾರೀಶಕ್ತಿಯ ವಸ್ತುವಾಗಿ ಬಿಡುತ್ತದೆ ಅಲ್ಲವೇ,
ಜನ ಏನೆಂದು ಹೇಳುತ್ತಾರೆ ಎಂಬುದು ಮುಖ್ಯವಲ್ಲ ನಮ್ಮ ನಮ್ಮ ಬದುಕು ಜೀವನ ಶೈಲಿ ನಮ್ಮ ಹಿಡಿತದಲ್ಲಿ ಇರಬೇಕು ಎಂಬುದು ಕಳಕಳಿಯ ಪಬ್ಲಿಕ್ ಮಾತು.

ನಿಯತ್ತಾಗಿದ್ರೂ ನಾಕಾಣೆ ಆಸೆ ಇರಲಿ
ತುಂಬಾ ನಿಯತ್ತಾಗಿರಬೇಕು ಆದ್ರೂ ನಾಕಾಣೆ ಆಸೆ ಇರಬೇಕು. ಅದನ್ನು ಬಿಡಬೇಡಿ ಯಾಕೆ ಗೊತ್ತಾ ನೀವು ನಿಮ್ಮ ಬದುಕನ್ನು ನೋಡಿಕೊಳ್ಳಲು ಸ್ವಲ್ಪವಾದರೂ ಆಸೆ ಎಂಬುದು ಇರಬೇಕು. ಅದು ದುರಾಸೆಯಾಗಬಾರದು, ನಿಯತ್ತು ತಪ್ಪಬಾರದು ನಿಯತ್ತಿನೊಳಗೆ ದುಡಿಮೆ ಎಂಬ ಆಯುಧ ನಾಕಾಣೆಯನ್ನು ತಂದು ಕೊಡುವಂತಿರಬೇಕು. ಅದನ್ನು ಶ್ರಮಕ್ಕೆ ಪ್ರತಿಫಲ ಅಂದುಕೊಳ್ಳಬೇಡಿ ಆ ನಾಕಾಣೆ ನಿಜಕ್ಕೂ ನಮ್ಮ ಬದುಕಿನ ದಾರಿದೀಪವಾಗುತ್ತದೆ ಎಂಬುದು ಮತ್ತೊಂದು ಮಾತು.