ಶಿವಮೊಗ್ಗ : ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮತ್ತವರ ಸಹೋದರ ನಿಪುಣರು. ತಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದಾಗ ಇಬ್ಬರು ಏನು ಮಾಡಿದ್ದರು ಎನ್ನುವುದು ಜಿಲ್ಲೆಯ ಜನತೆಗೆ ಗೊತ್ತಿದೆ. ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರ ಮೇಲೆ ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಿದರು.

ಜಿಲ್ಲೆಯ ಅಭಿವೃಧ್ಧಿ ಮತ್ತು ಸಾರ್ವಜನಿಕರ ಹಿತಾದೃಷ್ಟಿಯಿಂದ ಸರ್ಕಾರದ ಪ್ರತನಿಧಿಗಳಾಗಿ ನಾವು ನಮ್ಮಕೆಲಸ ಮಾಡಬೇಕಾಗುತ್ತದೆ. ಇದನ್ನು ಪ್ರಶ್ನೆ ಮಾಡುತ್ತಾ ಬೇಕಾಬಿಟ್ಟಿ ಆರೋಪ ಮಾಡುವುದಲ್ಲ. ಇಷ್ಟಕ್ಕೂ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರ ಇಲ್ಲ. ಸಂಸದ ರಾಘವೇಂದ್ರ ಅವರು ಬಿಜೆಪಿ ಸರ್ಕಾರವೇ ಇದೆ ಎನ್ನುವ ಗುಂಗಿನಲ್ಲಿದ್ದಾರೆ. ಮೊದಲು ಅವರು ಈ ಭ್ರಮೆಯಿಂದ ಹೊರ ಬರಲಿ ಎಂದು ಕಟುಕಿದರು.
ಶರಾವತಿ ಸಂತ್ರಸ್ತರಿಗೆ ಶಾಶ್ವ ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಗಳು ನಡೆದಿವೆ. ಈಗಾಗಲೇ ಶೇ. ೭೫ ರಷ್ಟು ಕೆಲಸ ಆಗಿದೆ. ಈಗ ಕೋರ್ಟ್ ನಲ್ಲಿ ಎಲ್ಲವೂ ಇತ್ಯರ್ಥವಾಗಬೇಕಿದೆ. ಬ್ಲಾಕ್ ಸಮಸ್ಯೆ ಸೇರಿದಂತೆ ಯಾವುದೇ ಅಹವಾಲು ಇದ್ದರೆ ಸಂತ್ರಸ್ಥರು ತಮ್ಮ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು, ಅವು ಸರ್ಕಾರಕ್ಕೆ ಸಲ್ಲಿಕೆಯಾಗಿ ಅಲ್ಲಿಂದ ಕೋರ್ಟ್ ತಲುಪಲಿವೆ ಎಂದರು.

ಶರಾವತಿ ಸಂತ್ರಸ್ತರಿಗೆ ಭೂಮಿಹಕ್ಕು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆನ್ನುವ ವಿಚಾರದಲ್ಲಿ ನಮ್ಮ ಸರ್ಕಾರ ಬದ್ದವಾಗಿದೆ. ಇದು ತುಂಬಾ ಹಿಂದಿನ ಸಮಸ್ಯೆ. ಕಾಗೋಡು ತಿಮ್ಮಪ್ಪ ಅವರು ಒಂದು ಹಂತದಲ್ಲಿ ಹೋರಾಟ ನಡೆಸಿ, ಸಂತ್ರಸ್ತರಿಗೆ ಭೂಮಿಹಕ್ಕು ನೀಡುವ ವಿಚಾರಕ್ಕೆ ಕಾನೂನು ರೂಪ ನೀಡುವ ಹಂತದಲ್ಲಿ ಅದಕ್ಕೆ ಅಡ್ಡವಾಗಿದ್ದೆ ಬಿಜೆಪಿಯವರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಅದನ್ನು ಹಾಳುಮಾಡಿದರು. ಶರಾವತಿ ಸಂತ್ರಸ್ತರ ಸಮಸ್ಯೆ ಬಿಜೆಪಿಯ ಪಾಪದ ಕೂಸು. ಅದನ್ನು ಸರಿಪಡಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.

ರಾಜ್ಯ ಸರ್ಕಾರದ ಜಾತಿ ಗಣತಿ ಕುರಿತು ಮಾಹಿತಿ ನೀಡಿದ ಅವರು, ಈ ಹಿಂದೆ ನಡೆದ ಜಾತಿ ಗಣತಿ ವರದಿಗೆ ೧೦ ವರ್ಷಗಳಾದವು. ಈಗ ಅದು ಒಂದಷ್ಟು ಹಳತಾಯಿತು ಎನ್ನುವ ಕಾರಣಕ್ಕೆ ಈಗ ಮರು ಸಮೀಕ್ಷೆಗೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಇದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಚಣಿಕ ಸಮೀಕ್ಷೆಯಾಗಿದೆ. ಇದರ ಸರ್ವೇಗೆ ಶಿಕ್ಷಕರನ್ನು ಬಳಕೆ ಮಾಡುವುದು ಬೇಡ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಸರ್ಕಾರವು ಬಹುತೇಕ ಇದಕ್ಕೆ ಏಜೆನ್ಸಿ ಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದರು.

ಇದೇ ವೇಳೆ ಕೇಂದ್ರದ ಜಾತಿಗಣತಿ ತೀರ್ಮಾನಕ್ಕೆ ಪ್ರತಿಕ್ರಿಯಿಸಿ, ಇದು ಸಾಮಾಜಿಕ, ಶೈಕ್ಚಣಿಕ ಹಾಗೂ ಅರ್ಥಿಕ ಸಮೀಕ್ಷೆ ಅಲ್ಲ. ರಾಜ್ಯದ ಜಾತಿ ಸಮೀಕ್ಷೆಗೂ ಕೇಂದ್ರದ ಸಮೀಕ್ಷೆಗೂ ವ್ಯತ್ಯಾಸವಿದೆ. ಅವರು ಕರ್ನಾಟಕದ ಮಾದರಿ ಇಟ್ಟುಕೊಂಡು ಜಾತಿಗಣತಿ ಮಾಡುತ್ತಿದ್ದರೆ. ಇದು ರಾಜಕೀಯದಿಂದ ಹೊರಗಿದ್ದರೆ ಒಳ್ಳೆಯದು. ರಾಜಕಾರಣದ ಲಾಭಕ್ಕೆ ಮಾಡಿದರೆ ಅದು ಸರಿಹೋಗುವುದಿಲ್ಲ ಎಂದರು.
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಿಗೆ ಬೇಡಿಕೆ ಹೆಚ್ವಾಗಿದೆ. ಹಾಗಾಗಿ ಇಲ್ಲಿನ ಮಕ್ಕಳ ಪ್ರವೇಶಾತಿ ಸಂಖ್ಯೆಯನ್ನು ೩೦ ರಿಂದ ೫೦ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ಪ್ರತಿವಿಧಾನ ಸಭಾ ಕ್ಷೇತ್ರದಲ್ಲೂ ಕನಿಷ್ಟ ೨ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಮುಂದೆ ಈ ಸಂಖ್ಯೆ ಹೆಚ್ಚಾಗಬಹುದು. ಆದರೂ ಸರ್ಕಾರಿ ಶಾಲೆಗಳಿಗೆ ದಕ್ಕೆಯಾಗದಂತೆ ಸಮತೋಲನ ಕಾಯ್ದುಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಕೆ.ಪಿ.ಶ್ರೀಪಾಲ್, ಜಿ.ಡಿ. ಮಂಜುನಾಥ್, ಶ್ವೇತಾ ಬಂಡಿ, ಆದರ್ಶ್ ಹುಂಚದಕಟ್ಟೆ, ತೇಜಪ್ಪ, ರವಿ ಇದ್ದರು.