ಶಿವಮೊಗ್ಗ : ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಜಾತಿ ಸಂಘಟನೆಗಳನ್ನು ಕಟ್ಟಿಕೊಂಡು ಕ್ಯಾಂಪಸ್ ವಾತಾವರಣ ಹಾಳುಮಾಡುತ್ತಿದ್ದಾರೆ. ಯಾವುದೇ ಜಾತಿ ಸಂಘಟನೆಗಳಿಗೆ ಅವಕಾಶ ನೀಡಬಾರದು ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಕಂಠ ಕೂಡಿಗೆ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಸಮೂಹ ರಾಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿವೃತ್ತ ಮುಖ್ಯಸ್ಥ ಪೆÇ್ರ.ಕೆ.ಚಂದ್ರಶೇಖರ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಶ್ವ ವಿದ್ಯಾನಿಲಯಗಳಲ್ಲಿ ಕೆಲವು ಅಧ್ಯಾಪಕರು ಬೋಧನೆ ಮಾಡುವ ಬದಲು ಹಣ ಗಳಿಕೆಯತ್ತ ಗಮನ ನೀಡುತ್ತಿದ್ದಾರೆ. ತಾವು ಹಾಗೂ ಚಂದ್ರಶೇಖರ್ ಅವರು ಅಧ್ಯಾಪಕರಾದ ಅವಧಿಯಲ್ಲಿ ಯಾವತ್ತೂ ಜಾತಿಭೇದ ಮಾಡಲಿಲ್ಲ. ಹಣಗಳಿಸುವ ಆಲೋಚನೆಯೂ ಬರಲಿಲ್ಲ. ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇವೆ ಎಂದರು.

ಪೆÇ್ರ.ಚಂದ್ರಶೇಖರ್ ಅವರು ಅತ್ಯಂತ ಪ್ರಾಮಾಣಿಕರು. 16 ವಿದ್ವತ್ಪೂರ್ಣ ಗ್ರಂಥಗಳನ್ನು ಬರೆದಿದ್ದಾರೆ. ಅವರ ಹಲವು ಗ್ರಂಥಗಳು ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತವೆ. ಅವರ ಪ್ರತಿಭೆಯನ್ನು ವಿಶ್ವವಿದ್ಯಾಲಯವೇ ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ಗುರುತಿಸಲಿಲ್ಲ. ನಿವೃತ್ತಿಯ ನಂತರವಾದರೂ ರಾಜ್ಯದ ಇತರೆ ವಿಶ್ವವಿದ್ಯಾಲಯಗಳು ಅವರ ಜ್ಞಾನ, ಸೇವೆ ಬಳಸಿಕೊಳ್ಳಬಹುದು ಎಂದು ಹೇಳಿದರು.
ಇದೇ ವೇಳೆ ,ವಿಶ್ವ ವಿದ್ಯಾನಿಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಪ್ರಸ್ತಾಪಿಸಿ ಮಾತನಾಡಿದರು.ಬಹುತೇಕ ಅಧ್ಯಾಪಕರು ನಿವೃತ್ತರಾಗುತ್ತಿದ್ದರೂ, ಪೂರ್ಣ ಪ್ರಮಾಣದ ನೇಮಕಾತಿ ಪ್ರಕ್ರಿಯೆಗಳು ನಡೆಯದೇ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ವಿಶ್ವವಿದ್ಯಾಲಯಗಳು ವಿಫಲವಾಗುತ್ತಿವೆ ಎಂದು ಹೇಳಿದರು.

ವಿಶ್ವವಿದ್ಯಾಲಯಗಳಲ್ಲಿ ಹಿಂದೆ ಸುವ್ಯವಸ್ಥಿತ ಕಟ್ಟಡಗಳು, ಮೂಲಸೌಕರ್ಯಗಳ ಕೊರತೆ ಇದ್ದರೂ, ನುರಿತ, ಅನುಭವಿ ಅಧ್ಯಾಪಕರ ಬಲವಿತ್ತು. ಅಂದು ಸಿಕ್ಕ ಗುಣಾತ್ಮಕ ಶಿಕ್ಷಣದ ಫಲವಾಗಿ ಇಂದು ಸಾವಿರಾರು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಆದರೆ, ಬಹುತೇಕ ವಿಶ್ವವಿದ್ಯಾಲಯಗಳು ಇಂದು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿವೆ. ಸಂಶೋಧನೆಗಳು ಸ್ಥಗಿತವಾಗುತ್ತಿವೆ. ಗುಣಾತ್ಮಕ ಶಿಕ್ಷಣ ಇಲ್ಲವಾಗುತ್ತಿದೆ. ಅಧ್ಯಾಪಕರ ನೇಮಕ ಮಾಡಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಪ್ರೋ ಹೂವಯ್ಯಗೌಡ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪೂರ್ಣಾನಂದ, ದಸಂಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ದತ್ತಾತ್ರೇಯ, ರಾಜ್ಯಶಾಸ್ತ್ರ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಎಂ.ಹೆಚ್. ಪ್ರಹ್ಲಾದಪ್ಪ ಉಪಸ್ಥಿತರಿದ್ದರು.
ಹಳೇ ವಿದ್ಯಾರ್ಥಿಗಳಾದ ರಾಘವೇಂದ್ರ ಕಿಣಿ, ಪಿ. ಆಶಾ, ಕುಮಾರಸ್ವಾಮಿ, ರಾಮಣ್ಣ, ಸೋಮಶೇಖರ್, ಪಿ.ಎಸ್. ಗಂಗಾಧರ್, ಉಪೇಂದ್ರ ಘೋರ್ಪಡೆ, ಮಂಜುನಾಥ್, ಜಯಪ್ರಕಾಶ್, ಪಂಕಜಾ, ಶಿವಣ್ಣ, ಶೈಲಜಾ ಮತ್ತಿತರರು ಮಾತನಾಡಿದರು.