ಶಿವಮೊಗ್ಗ: ಕೊರೊನಾ 2ನೇ ಅಲೆ ಭೀತಿಯಲ್ಲಿ ರಾಜ್ಯ ಸರ್ಕಾರ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯಗೊಳಿಸಿದೆ. ಶಿವಮೊಗ್ಗದಲ್ಲಿ ಮಾಸ್ಕ್ ಕಾರ್ಯಾಚರಣೆ ಶುರುವಾಗಿದೆ. ಹೆಚ್ಚು ಜನ ಸೇರುವ ಕಡೆ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ಒಂದು ಕಡೆ ಪಾಲಿಕೆ, ಮತ್ತೊಂದು ಕಡೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.
ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ದಿಢೀರ್ ಮಾಸ್ಕ್ ಕಾರ್ಯಾಚರಣೆ ಆರಂಭಿಸಿದರು. ಬಸವೇಶ್ವರ ದೇವಾಲಯದ ಬಳಿ ಮಾಸ್ಕ್ ಧರಿಸದೇ ಬರುತ್ತಿದ್ದವರನ್ನು ತಡೆದು, ದಂಡ ಹಾಕಿದರು.
ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಮಾಸ್ಕ್ ಧರಿಸದೇ ಬಂದ ಹಲವರು ಅಧಿಕಾರಿಗಳಿಗೆ ಸಿಕ್ಕಬಿದ್ದರು. ಕೆಲವರು ದಂಡ ಹಾಕುತ್ತಿರುವುದು ಗೊತ್ತಾಗುತ್ತಿದ್ದಂತೆ ಪರಾರಿಯಾದರು. ಒಬ್ಬ ಯುವಕ ತನ್ನಲ್ಲಿ ದಂಡ ಕಟ್ಟಲು ಹಣವಿಲ್ಲ ಎಂದು ಬೈಕ್ ಬಿಟ್ಟು ಹೋದ ಘಟನೆಯು ನಡೆಯಿತು.
ಶಿವಮೊಗ್ಗ ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸದ್ಯ ಜಿಲ್ಲೆಯಲ್ಲಿ 170 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 67 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.