ಶಿವಮೊಗ್ಗ, ಮಾ.೨೩:
ರಾಷ್ಟ್ರಕವಿ ವಿಶ್ವಮಾನವ ಕುವೆಂಪು ಅವರ ಹೆಸರನ್ನೊತ್ತ ಕುವೆಂಪು ವಿಶ್ವ ವಿದ್ಯಾನಿಲಯ ಭಾರತ ದೇಶದಲ್ಲೇ ಅತ್ಯುತ್ತಮ ವಿವಿಗಳಲ್ಲಿ ಒಂದಾಗಿದೆ. ಕೇವಲ ಮೂರುವರೆ ದಶಕಗಳಲ್ಲಿ ರಾಜ್ಯದ ಇತರೆ ವಿಶ್ವ ವಿದ್ಯಾಲಯಗಳನ್ನು ಸರಿಗಟ್ಟುವ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆಯ ವಿಷಯ. ಆದರೆ ಇದನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಿನ ಅಧಿಕಾರಿಗಳಿಗೆ, ಉಪನ್ಯಾಸಕರಿಗೆ ನಾನ್ ಟೀಚಿಂಗ್ ವಿಭಾಗದ ನೌಕರರಿಗೆ ಅನಗತ್ಯವಾಗಿ ಸುಳ್ಳು ದೂರುಗಳ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಕುವೆಂಪು ವಿವಿ ಕುಲಪತಿ ಪ್ರೋ.ವೀರಭದ್ರಪ್ಪ ತಿಳಿಸಿದರು.
ಅವರು ಇಂದು ಬೆಳಗ್ಗೆ ಕುವೆಂಪು ವಿವಿಯ ಸಿಂಡಿಕೇಟ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ವಿದ್ಯಾರ್ಥಿಗಳ ಉತ್ಕೃಷ್ಠ ಕಲಿಕೆ, ಸಂಶೋಧನೆ, ಪದವಿ, ಫಲಿತಾಂಶದ ನಿಖರತೆ ಮತ್ತು ಭದ್ರತೆಗಾಗಿ ವಿವಿ ಕಾಲ ಕಾಲಕ್ಕೆ ತಕ್ಕಂತೆ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಲೋಪರಹಿತ, ವಿದ್ಯಾರ್ಥಿಸ್ನೇಹಿ ಪದ್ಧತಿಯನ್ನು ಅಳವಡಿಸಿದೆ. ಈ ವಿವಿ ನ್ಯಾಕ್ ಎ ಗ್ರೇಡ್, ಎನ್ಐಆರ್ಎಫ್ ೭೩ನೇ ರ್ಯಾಂಕ್, ಸೈಮ್ಯಾಗೋ ರ್ಯಾಂಕ್ ಹಾಗೂ ಇತರೆ ಪುರಸ್ಕಾರಗಳಿಗೆ ಭಾಜನವಾಗಿದೆ ಎಂದರು.
ಪರೀಕ್ಷಾ ಪದ್ಧತಿಯಲ್ಲಿ ಅಳವಡಿಸಲಾಧ ನೂತನ ತಂತ್ರಜ್ಞಾನ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ವಸತಿ ಇನ್ನಿತರೆ ಅನುಕೂಲಗಳನ್ನು ಕಲ್ಪಿಸಿರುವುದಕ್ಕೆ, ಸಂಬಂಧಿಸಿದಂತೆ ಅಪೂರ್ಣ ಹಾಗೂ ಸತ್ಯಕ್ಕೆ ದೂರವಾದ ಮಾಹಿತಿಯೊಂದಿಗೆ ಒಂದೆರಡು ಸಂಘನೆಗಳು ನಮ್ಮ ಮೇಲೆ ಪೊಲೀಸ್ ಇಲಾಖೆ ಹಾಗೂ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಇದು ವಿವಿಯ ಘನತೆಗೆ ಚ್ಯುತಿ ತರುತ್ತಿರುವುದರಿಂದ ಆ ಸಂಘಟನೆಗಳ ವಿರುದ್ಧ ವಿವಿ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದರು.
ಒಂದು ದೊಡ್ಡ ವಿಶ್ವ ವಿದ್ಯಾನಿಲಯ ಬೆಳೆಯುತ್ತಿರುವ ಬಗೆಯನ್ನು ಗಂಭೀರವಾಗಿ ಪರಿಗಣಿಸದೇ ಕಪ್ಪು ಮಸಿ ಬಳಿಯಲು ಯತ್ನಿಸಿದರೆ ನೋವಾಗುತ್ತದೆ. ಸುಳ್ಳು ದೂರುಗಳನ್ನು ನೀಡುವ ಬದಲು ನನ್ನ ಜತೆ ಚರ್ಚಿಸಿ. ಆಧಾರ ರಹಿತವಾದ ಇಂತಹ ಆರೋಪಗಳನ್ನು ಮಾಡದೀರಿ ಎಂದು ವೀರಭದ್ರಪ್ಪ ಕಿವಿ ಮಾತು ಹೇಳಿದರು
ಸುದ್ದಿಗೋಷ್ಠಿಯಲ್ಲಿ ಕುಲ ಸಚಿವರಾದ ಪ್ರೋ.ಎಸ್.ಎಸ್.ಪಾಟೀಲ್, ಪ್ರೋ.ಬಿ.ಕಣ್ಣನ್, ಅಧ್ಯಾಪಕರ ಸಂಘದ ಅಧ್ಯಕ್ಷ ಜೆ.ಕೇಶವಯ್ಯ ಹಾಗೂ ಇತರರಿದ್ದರು.


