
ದುರ್ಗಿಗುಡಿ ಒನ್ವೇ ದೂರು ಹಾಕಿದ್ದು ಸರಿಯೇ..? ಇದು ಜನರ ಪ್ರಶ್ನೆ

ಶಿವಮೊಗ್ಗ ಸಂಚಾರಿ ಪೊಲೀಸ್ ವಿಭಾಗದ ಎರಡು ಪೊಲೀಸ್ ಠಾಣೆಗಳು ಅತ್ಯಂತ ವ್ಯವಸ್ಥಿತವಾಗಿ ಕೆಲಸ ನಿರ್ವಹಿಸುತ್ತಿವೆ. ಅದೆಷ್ಟೋ ಪೊಲೀಸರು ಕಾನೂನು ಹಾಗೂ ಸಂಚಾರಿ ನಿಯಮಗಳ ಪಾಲಿಗೆ ಮುಖ ನೋಡದೇ ಬಿಲ್ ಜಡಿದು ನಿಯಮ ಉಲ್ಲಂಘಿಸುವವರಿಗೆ ಜಾಡಿಸುತ್ತಿದ್ದಾರೆ.
ಅಬ್ಬಾ. ಈ ಪೊಲೀಸರ ವರ್ತನೆಗೆ, ಕಾರ್ಯಕ್ಕೆ ಹ್ಯಾಟ್ಸಪ್ ಹೇಳಲೇ ಬೇಕು. ಆ ರೀತಿಯಲ್ಲಿ ಹ್ಯಾಟ್ಸಪ್ ಹೇಳಿದ ಘಟನೆ ಇಂದು ಬೆಳಗ್ಗೆ ಶಿವಮೊಗ್ಗ ದುರ್ಗಿಗುಡಿ ರಸ್ತೆಯ ಶನೇಶ್ವರ ದೇವಾಲಯದ ಬಳಿ ನಡೆಯಿತು.
ದುರ್ಗಿಗುಡಿ ರಸ್ತೆ ಅಗಲವಾಗುವ ಮಾತು ಒತ್ತಟ್ಟಿಗಿರಲಿ. ಅದು ಅಗಲವಾಗುವ ಕನಸು ಕಾಣುವುದು ವ್ಯಾಪಾರಸ್ಥರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಕುಚುಕುಚು ಮಾತುಗಳು ಮುರಿದು ಬಿದ್ದಾಗ ಮಾತ್ರ ಎಂದು ಸಾರ್ವಜನಿಕರೇ ಆರೋಪಿಸುತ್ತಿದ್ದಾರೆ.

ಇಂದಿನ ಘಟನೆಗೆ ಬರೋಣ. ಬೆಳಗ್ಗೆ ೧೧ರಹೊತ್ತಿಗೆ ದೇಶ ಕಾಯುವ ಸೈನಿಕರಂತೆ ದುರ್ಗಿಗುಡಿಯ ಒನ್ ವೇ ಮಾರ್ಗದಿಂದ ಬರುತ್ತಿದ್ದ ಎಲ್ಲಾ ವಾಹನಗಳಿಗೆ ಓರ್ವ ಎಎಸ್ಐ ಹಾಗೂ ಮತ್ತೋರ್ವ ಕಾನ್ಸ್ಟೆಬಲ್ ದಂಡ ಹಾಕುತ್ತಿದ್ದರು. ಆ ಮಾರ್ಗವಾಗಿ ಬಂದ ವಾಹನಗಳ ಸಂಖ್ಯೆ ಇಂದು ನಿರೀಕ್ಷೆಗಿಂತ ಜಾಸ್ತಿ ಇತ್ತು. ಸಿಕ್ಕಿದ್ದೇ ಶಿವ ಎಂದು ಎಲ್ಲಾ ವಾಹನಗಳನ್ನು ಅಡ್ಡಡ್ಡ ನಿಲ್ಲಿಸಿ ಕೇಸು ಬರೆದದ್ದೇ ಬರೆದದ್ದು. ಯಾಕೆ ಅಷ್ಟೊಂದು ಜನ ಒನ್ವೇ ಮಾರ್ಗದಲ್ಲಿ ಬಂದರು ಎಂಬ ಚಿಕ್ಕ ಯೋಚನೆ ಮಾಡದ ಈ ಪೊಲೀಸಪ್ಪರು ಇವತ್ತು ಸರ್ಕಾರಕ್ಕೆ ಬಹುದೊಡ್ಡ ದಂಡ ಕೊಡಿಸಿದ್ದಾರೆ.
ದುರಂತ ಗೊತ್ತೇ..? ದುರ್ಗಿಗುಡಿಯ ಒನ್ವೇ ನಿಯಮ ಪಾಲನೆ ಒತ್ತಟ್ಟಿಗಿರಲಿ. ಮಾನವೀಯ ನೆಲೆಗಟ್ಟಿನಲ್ಲಿ ಪಕ್ಕದ ಎಲ್ಎಲ್ಆರ್ ರಸ್ತೆ ಸಂಪೂರ್ಣ ಬಂದ್ ಆಗಿರುವುದನ್ನು ( ಕಾಮಗಾರಿ ಉದ್ದೇಶದಿಂದ) ಮನಗಂಡು ಕನಿಷ್ಠ ದ್ವಿಚಕ್ರ ವಾಹನಗಳಿಗೆ ಓಡಾಡಲು ಅನುವು ಮಾಡಿಕೊಡಬಹುದಿತ್ತು. ಕಾನೂನಿಗಿಂತ ಮಿಗಿಲಾದ ಈ ಮಾನವೀಯತೆ ಈ ಪೊಲೀಸಪ್ಪರಗೆ ಅದು ಸಿನ್ಸಿಯರ್ ದಂಡ ಹಾಕುವ ಈ ಟ್ರಾಫಿಕ್ ಠಾಣೆಯ ಪೊಲೀಸರಿಗೆ ಅರ್ಥವಾಗುವುದಾದರೂ ಯಾವಾಗ..? ಹಿರಿಯ ಅಧಿಕಾರಿಗಳೇ ಒಂದಿಷ್ಟು ಮಾನವೀಯತೆಯನ್ನು ಹೇಳಿಕೊಡಿ. ಇಲ್ಲಿ ದಂಡ ಹಾಕಿದ್ದು ಹೆಲ್ಮೆಟ್ಗಲ್ಲ. ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕಲ್ಲ, ಡಿಎಲ್ ಚೆಕಪ್ಗಲ್ಲ, ಓನ್ಲಿ ಒನ್ವೇ..? ಪೊಲೀಸ್ ಅಧಿಕಾರಿಗಳೇ ಇತ್ತ ಗಮನಿಸಿ ಎಂಬುದು ಸಾರ್ವಜನಿಕರ ಅಹವಾಲು.