
ನೆಗಿಟೀವ್ ಥಿಂಕಿಂಗ್..!
ವಾರದ ಅಂಕಣ- 42
- ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ಮನೆ, ಮನ ನೆಮ್ಮದಿಯಾಗಿದ್ದರೆ, ಬದುಕು ಸುಂದರ. ಮನೆಯೊಳಗಿನ ನೆಮ್ಮದಿ ಸಮಾಜದ ಎಲ್ಲಾ ಸ್ತರಗಳಲ್ಲಿ ಬೆಳೆಸುತ್ತದೆ, ಉಳಿಸುತ್ತದೆ. ಆದರೆ ಸದಾ ಸುಖಾ ಸುಮ್ಮನೆ ಪಿರಿಕಿರಿ, ಕಿರಿಕಿರಿ ಮಾಡುವ, ವಟಗುಟ್ಟುವ ಮನೋಭಾವ ಇದ್ದರೆ ಮನೆ, ಮನಸು ಎಕ್ಕುಟ್ಟಿಹೋಗುತ್ತೆ ಎಂಬುದೇ ಈ ವಾರದ ನೆಗಿಟೀವ್ ಥಿಂಕಿಗ್ ಅಂಕಣದ ವಿಷಯ.

ಸಿಕ್ಕಿದರೆ, ಮಾತೆತ್ತಿದರೆ ಎಲ್ಲದಕ್ಕೂ ತಿರುಗುತ್ತರ ನೀಡುವುದೆಷ್ಟು ಸರಿ. ಮಾತು ಮನೆ ಕೆಡಿಸಿತು…., ಎನ್ನುವ ಗಾದೆ ಮಾತು ಇಂತಹ ಕಿರಿಕಿರಿಗಳ ಒಂದು ಮೂಲವಾದರೆ ಮತ್ತೊಂದೆಡೆ ತನಗಾಗದ ಅಸಹಾಯಕತೆಯನ್ನು ಸರಿಪಡಿಸಿಕೊಳ್ಳಲು, ತೋರ್ಪಡಿಸಿಕೊಳ್ಳಲು ಈ ವಟಗುಟ್ಟುವಿಕೆ ಒಂದು ಅಸ್ತ್ರವಾಗಿ ರೂಪಿತಗೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?

ಏಕೆಂದರೆ ನಮ್ಮ ನಡುವೆ ಪರಸ್ಪರ ಭಿನ್ನಾಭಿಪ್ರಾಯಗಳು, ಅಸಹಜವಾದ ಮನೋಅಭಿಲಾಷೆಗಳು, ಮನೋಭಾವನೆಗಳು ಇಂತಹ ಕಿರಿಕಿರಿಯ ಮನೋಭಾವಕ್ಕೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.
ಮನೆಯೊಳಗೆ ಹೋದ ಕ್ಷಣವಾಗಲಿ, ಅಲ್ಲಿಂದ ಹೊರಗೆ ಬಂದ ಕ್ಷಣವಾಗಲಿ, ಖುಷಿಯ ವಾತಾವರಣವಿದ್ದರೆ ಬದುಕು ನೆಮ್ಮದಿ ಹಾಗೂ ಪ್ರೀತಿಯ ಅಂಕಣವಾಗಿರುತ್ತದೆ. ಆದರೆ ಅಲ್ಲಿನ ಕಿರಿಕಿರಿ ಸಮಾಜದ ಮತ್ತೊಂದು ಮುಖದ ಮೇಲೆ ತೋರಿಸಿಕೊಳ್ಳುವ ಅನಿವಾರ್ಯತೆ ನಮ್ಮನ್ನು ಸಮಾಜ ಮತ್ತೊಂದು ದೃಷ್ಟಿಯಲ್ಲಿ ನೋಡುವಂತಹ ವಾತಾವರಣವನ್ನು ಸೃಷ್ಟಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.

ವಟಗುಟ್ಟುವಿಕೆ ಎಂಬ ಪದ ಬಹಳಷ್ಟು ಮಹಿಳಾ ಮಣಿಯರಿಗೆ ಸೇರುತ್ತದೆ ಎನ್ನುವುದು ಸಹಜವಾದ ಮಾತು. ಮನೆಯ ಗೃಹಿಣಿ, ಮನೆಯ ಒಡತಿಯಾಗಿ ಮನೆಯ ಎಲ್ಲರ ಸದುದ್ದೇಶ ಬಯಸುವ ಹಿತ ಚಿಂತಕಿಯಾಗಿದ್ದಾಗ ಮಾತ್ರ ಇಂತಹ ವಟಗುಟ್ಟುವಿಕೆಯ ಕಿರಿಕಿರಿಗಳು ದೂರವಾಗುತ್ತವೆ.
ಆದರೆ ಅದು ಆಕೆಯ ಕೈಲಾಗದ ಅಸಹಾಯಕತೆ ಇಂತಹ ಆಕ್ರೋಶಗಳಿಗೆ ಪಿರಿಪಿರಿಗಳಿಗೆ ಕಾರಣವಾಗಬಹುದಲ್ಲವೇ? ತಗ್ಗಿ ಬಗ್ಗಿ ನಡೆದಾಗ ನಾವು ಅಸ್ತು ಎನಿಸಿಕೊಳ್ಳಬಹುದು. ಆದರೆ ಪದೇ ಪದೇ ತಗ್ಗಿ ಬಗ್ಗಿ ನಡೆಯುವುದು ಮತ್ತೊಂದೆಡೆ ನಮ್ಮನ್ನು ದಾಸ್ಯದ ಕಡೆ ತಳ್ಳಿಬಿಡುತ್ತದೆ. ಹಾಗಾಗಿಯೇ ಕೇಳಿದರೂ ಕೇಳದಂತೆ ಇರಬೇಕೆನ್ನುವ ತಿರುಗಿ ಮಾತನಾಡಬೇಕೆನ್ನುವ ಮನೋಭಾವ ನಮ್ಮ ನಡುವೆ ಕಡಿಮೆಯಾಗುತ್ತಿದ್ದು, ಇಂತಹ ಘಟನೆಗಳಿಗೆ ಪ್ರೇರಣೆ ಹಾಗೂ ಪೂರಕವಾಗುವ ವ್ಯಕ್ತಿಗಳನ್ನು ಸರಿಪಡಿಸುವ ಹಾದಿಯಲ್ಲಿ ಭಗವಂತನೇ ಬರಬೇಕೇನೋ?