
ಶಿವಮೊಗ್ಗ: ಬಹು ವಿವಾದಕ್ಕೆ ಕಾರಣವಾಗಿದ್ದ ಡಿಸಿ ಕಚೇರಿ ಎದುರಿನ ಮೈದಾನದ ಪ್ರಕರಣ ಎಸ್.ಪಿ.ಮಿಥುನ್ ಕುಮಾರ್ ಅವರ ಸಮಯೋಚಿತ ಜಾಣ್ಮೆ, ಮುತ್ಸದ್ದಿತನದಿಂದ ಸುಖಾಂತ್ಯಗೊಂಡಿದೆ.

ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳು ಮಾಹಿತಿ ನೀಡಿ ಕಳೆದ ಕೆಲ ದಿನಗಳಿಂದ ಈ ಮೈದಾನದಲ್ಲಿ ಬ್ಯಾರಿಕೇಡ್ ಅಳವಡಿಸಿ ವ್ಯಾಪಕ ಭದ್ರತೆ ಒದಗಿಸಲಾಗಿತ್ತು. ಜಾಗದ ವಿವಾದದ ಬಗ್ಗೆ ಅನೇಕ ಅಭಿಪ್ರಾಯಗಳು ಮೂಡಿದ್ದರಿಂದ ಬಿಗಿ ವಾತಾವರಣ ಉಂಟಾಗಿತ್ತು. ಸ್ಥಳದಲ್ಲಿ ಹಾಕಿದ್ದ ಬೇಲಿಯನ್ನು ತೆರವುಗೊಳಿಸಿ ಜಿಲ್ಲಾ ಪೋಲಿಸ್ ವತಿಯಿಂದ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಪಾಲಿಕೆ ಜಾಗ ಮತ್ತು ವಕ್ಫ್ ಜಾಗ ಎಂಬ ವಿವಾದ ಉಂಟಾಗಿ ಅಲ್ಲಿ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಅವಕಾಶವನ್ನು ನಿರಾಕರಿಸಿ ಬ್ಯಾರಿಕೇಡ್ ಅಳವಡಿಸಲಾಗಿತ್ತು.

ಬಿಜೆಪಿ ವತಿಯಿಂದ ಏ.೮ರೊಳಗೆ ಬ್ಯಾರಿಕೇಡ್ ತೆರವುಗೊಳಿಸಿ ಎಂದಿನಂತೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂಬ ಎಚ್ಚರಿಕೆಯನ್ನು ನೀಡಲಾಗಿತ್ತು. ಮುಸ್ಲಿಂ ಸಂಘಟನೆಗಳು ಅಲ್ಲಿ ಪ್ರಾರ್ಥನಾ ಸ್ಥಳಕ್ಕೆ ಭದ್ರತೆ ಒದಗಿಸಬೇಕು. ಸ್ವಚ್ಛತೆ ಕಾಪಾಡಬೇಕು. ಸಿಸಿ ಕ್ಯಾಮರಾ ಅಳವಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳು ಎಲ್ಲ ರಾಜಕೀಯ ಪಕ್ಷಗಳ, ಧಾರ್ಮಿಕ ಮುಖಂಡರ ಮತ್ತು ಸಮುದಾಯದ ಮುಖ್ಯಸ್ಥರನ್ನು ಕರೆಸಿ ವಿವಾದವನ್ನು ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಅಲ್ಲದೆ ಅವರ ಮನವೊಲಿಸಿ, ಮೈದಾನದಲ್ಲಿ ೧೪ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಏ.೧೦ರಿಂದ ಬ್ಯಾರಿಕೇಡ್ ತೆರವುಗೊಳಿಸಿ ಬಿಗಿ ಭದ್ರತೆ ಹಿಂಪಡೆದು ಸಾರ್ವಜನಿಕ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಈ ಪ್ರಕರಣ

ಸುಖಾಂತ್ಯಗೊಂಡಿದೆ. ನಗರದಲ್ಲಿ ಶಾಂತಿ ಕಾಪಾಡಲು ಸೌಹಾರ್ದಯುತವಾಗಿ ಸಹಕರಿಸಿದ ಎಲ್ಲರಿಗೂ ಎಸ್.ಪಿ.ಮಿಥುನ್ ಕುಮಾರ್ ಧನ್ಯವಾದ ಅರ್ಪಿಸಿದ್ದಾರೆ.