
ಶಿವಮೊಗ್ಗ, ಏ. 9: ವರದಕ್ಷಿಣೆ ವಿಚಾರಕ್ಕೆ ಸಂಬಂಧಿಸಿದಂತೆ, ಚೂರಿಯಿಂದ ಇರಿದು ಪತ್ನಿಯ ಹತ್ಯೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಶಿವಮೊಗ್ಗದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿನ್ನೆ ಮಹತ್ತರ ತೀರ್ಪು ನೀಡಿದೆ.

ಶಿವಮೊಗ್ಗ ತಾಲೂಕು ದುಮ್ಮಳ್ಳಿ ಗ್ರಾಮದ ನಿವಾಸಿ ಕರುಣಾಕರ (36) ಶಿಕ್ಷೆಗೊಳಗಾದ ಪತಿ ಎಂದು ಗುರುತಿಸಲಾಗಿದೆ. ಜೀವಾವಧಿ ಶಿಕ್ಷೆಯ ಜೊತೆಗೆ 1. 85 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಶಿವಮೊಗ್ಗದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಪಲ್ಲವಿ ಬಿ ಆರ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪುಷ್ಪಾ ಪಿ ಓ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : ವರದಕ್ಷಿಣೆ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾದ ಕರುಣಾಕರನು, ಪತ್ನಿ ಅಮಿತಾ (27) ಅವರಿಗೆ ಕಿರುಕುಳ ನೀಡುತ್ತಿದ್ದ. ಇದೇ ವಿಚಾರವಾಗಿ 20-9-2022 ರಂದು ಪತ್ನಿಗೆ ಹಿಂಸೆ ನೀಡಿ ಚೂರಿಯಿಂದ ಇರಿದು ಕೊಲೆ ಮಾಡಿದ್ದ.

ಈ ಕುರಿತಂತೆ ಮೃತ ಅಮಿತಾ ಅವರ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಡಿವೈಎಸ್ಪಿ ಬಾಲರಾಜ್, ಇನ್ಸ್’ಪೆಕ್ಟರ್ ಮಂಜುನಾಥ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.