

ನೆಗಿಟೀವ್ ಥಿಂಕಿಂಗ್
ವಾರದ ಅಂಕಣ- 40
ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ: ಅರಹತೊಳಲು, ಭದ್ರಾವತಿ)
ಕೆಲವರು ‘ಸೌಂಡ್ ಲೆಸ್’ ಆಗೋದ್ಯಾಕೆ ಗೊತ್ತಾ?



ಹಿಂದಿನ ಅಂಕಣಗಳಿವೆ ಓದಿ
ಈ ಜಗತ್ತಲ್ಲಿ ಎಲ್ಲರೂ ಕಿರಿಕಿರಿಗಳಿಂದ ಮುಕ್ತವಾಗಿ ನೆಮ್ಮದಿಯ ಬದುಕು ಕಾಣಬೇಕೆಂದು ಬಯಕೆ ಪಡುತ್ತಾರೆ. ಆದರೆ ಆ ಕಿರಿಕಿರಿ ರಹಿತ ನೆಮ್ಮದಿಯ ಬದುಕೆಂಬುದೇ ಭ್ರಮೆ ಎಂಬ ವಿಷಯ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣ.
ನಮ್ಮಲ್ಲಿ ಎಲ್ಲವೂ ಇರುತ್ತೆ. ಕಸುಬು ಸಹ ಇರುತ್ತೆ. ಕಾಸು ಸಹ ಓಡಾಡುತ್ತೆ, ಸೋಮಾರಿತನವಿಲ್ಲದ ದುಡಿಮೆಯ ನಡುವೆ ಮನುಷ್ಯ ಸಹಜವಾಗಿ ಎಲ್ಲರೂ ಹುಡುಕುವುದು ನೆಮ್ಮದಿ.

ಈ ನೆಮ್ಮದಿ ಅಂದರೆ ಆತ್ಮತೃಪ್ತಿ ಅಷ್ಟೇ ಅಲ್ಲ, ಅದು ಮನಸ್ಸಿನ ಗೊಂದಲಗಳನ್ನ ಅಳಿಸಿ ಮನಸನ್ನ ಪ್ರಶಾಂತವಾಗಿಡುವ ಒಂದು ಪರಿಕಲ್ಪನೆ. ಮನೆಯ ಒಳಗಾಗಲಿ ಹೊರಗಾಗಲಿ ಎಲ್ಲರೂ ಹುಡುಕುವ ನೆಮ್ಮದಿ ಕ್ಷಣಮಾತ್ರದಲ್ಲಿ ಬಂದು ಹೋಗುತ್ತದೆಯೇ ಹೊರತು ಅದು ಪರಮನೆಂಟ್ ಆದ ವಿಷಯವೇ ಅಲ್ಲ. ಏಕೆಂದರೆ ಏನಾದರೂ ಒಂದು ಕಿರಿಕಿರಿ ಮಾಮೂಲಿಯಾಗಿ ಎಲ್ಲರ ಮನೆ, ಮನದೊಳಗೆ ಕಾಣಿಸಿಕೊಂಡು ಅದರ ಉತ್ತರ ಹುಡುಕಾಟದ ವೇಳೆ ಮತ್ತದೇ ದುಗುಡ, ಆತಂಕ, ಹಿಂಜರಿಕೆ, ಅಸಮಾಧಾನ, ಕೋಪ, ವ್ಯಾಘ್ರತೆ ನಮ್ಮನ್ನು ನಮಗೆ ಗೊತ್ತಿಲ್ಲದಂತೆ ಆವರಿಸಿ ಬಿಡುತ್ತದೆ.
ನೆಮ್ಮದಿ ಎಂಬುದಿಲ್ಲಿ ಕನಸಷ್ಟೆ., ಒಟ್ಟಾರೆಯಾಗಿ ಅದನ್ನು ಭ್ರಮೆ ಎಂದು ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಂದಿನಂತೆ ಹೊತ್ತು ಮೂಡುತ್ತದೆ, ಅಂದಿನ ಕಾಯಕದೊಳಗೆ ಮನಸ್ಸು ಮಗ್ನವಾಗುತ್ತದೆ. ಹಾಗೆಯೇ ಬಿಡುವಿಲ್ಲದ ಮನದ ಚಂಚಲತೆ ಸದ್ದಿಲ್ಲದಂತೆ ಮನಸೊಳಗೆ ಗೊಂದಲಗಳ ಗೂಡನ್ನು ಕಟ್ಟಿ ಬಿಡುತ್ತದೆ. ಧ್ಯಾನ, ಯೋಗ, ವ್ಯಾಯಾಮ, ವಾಕಿಂಗ್, ಸಂಗೀತ ಕೇಳುವುದು, ಸಾಹಿತ್ಯ ಓದುವುದು, ಕ್ರೀಡೆಗಳ ಜೊತೆಗೆ ತಲ್ಲೀನರಾಗುವುದು ಒಂದಿಷ್ಟು ಕ್ಷಣದ ಮನದ ಭಾವನೆಯ ಜೊತೆ ಮಗ್ನವಾಗುವ ನೆಮ್ಮದಿಯ ಕ್ಷಣ ಎನ್ನಬಹುದಾದರೂ ಸಹ ಅದೇ ಹೊತ್ತಿನಲ್ಲಿ ಮೂಡುವ ಕಿರಿಕಿರಿಗಳು ಆ ನೆಮ್ಮದಿಯನ್ನೇ ಚಿಲ್ಲರೆನ್ನಾಗಿ ಮಾಡಿಬಿಡುತ್ತದೆ, ನಮಗದು ಸಿಗದಂತೆ ನೋಡಿಕೊಳ್ಳುತ್ತದೆ ಅಲ್ಲವೇ?
ಅಂದಿನ ದುಡಿಮೆ ಅಂದಿನ ಹೊಟ್ಟೆಪಾಡಿಗೆ ಎನ್ನುವ ಅದೆಷ್ಟೋ ಜನ ನೆಮ್ಮದಿಯಾಗಿ ಖುಷಿಯಾಗಿ ಇದ್ದಾರೆ ಎನ್ನುವ ಆಲೋಚನೆ ನಮ್ಮ ನಡುವೆ ಕಾಣಿಸಿಕೊಳ್ಳುತ್ತದೆ ಅತಿಯಾದ ದುರಾಸೆಯ ಹಣ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ ಆದರೆ ಎರಡು ಕಡೆ ಈ ನೆಮ್ಮದಿ ಎಂಬುದು ಗಗನಚುಕ್ಕಿಯೇ ಹೌದು, ಒಂದೆಡೆ ಅಂದಿನ ದುಡಿಮೆಯಾಗದಿದ್ದರೆ ಹೊಟ್ಟೆಯ ಚಿಂತೆಗೆ ಯೋಚಿಸುವ ಜನ ಒಂದೆಡೆಯಾದರೆ ಮತ್ತೊಬ್ಬನ ಬಳಿ ಬೇಕಾದಷ್ಟು ಆಸ್ತಿ ಸಂಪತ್ತು ಇದ್ದರೂ ಸಹ ಅದನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬ ಚಿಂತೆ ಮನದ ನೆಮ್ಮದಿಯನ್ನು ನುಂಗಿ ನೀರು ಕುಡಿಯುತ್ತದೆ ಅಲ್ಲವೇ?

ಎಷ್ಟೇ ಇದ್ದರೂ ಎಷ್ಟೇ ಬಂದರೂ ಇನ್ನಷ್ಟು ಬೇಕು ಎನ್ನುವ ಸಾಕಷ್ಟು ಜನರನ್ನು ನಾವು ನೋಡುತ್ತಲೇ ಬೆಳೆದಿದ್ದೇವೆ ಕೆಲವರಿಗೆ ಮುಂದೆ ಅದನ್ನು ಬೆಳೆಸಿಕೊಳ್ಳುವವರು ಬಳಸುವವರು ಇಲ್ಲ ಎಂದು ಗೊತ್ತಿದ್ದರೂ ಸಹ ಅದನ್ನು ಬಳಸಿಕೊಳ್ಳುವ ಬಗೆಯನ್ನು ದೂರ ಬಿಟ್ಟು ಬೆಳೆಸಿಕೊಳ್ಳುವ ಚಿಂತನೆ ಮಾಡುವುದು ಕಂಡು ಬರುತ್ತದೆ, ಕೈಲಾದ ಮಟ್ಟಿಗೆ ಸೇವೆ, ಉದಾರತೆ, ಕನಿಕರದ ಪ್ರೀತಿ ನಮ್ಮ ನಡುವೆ ಇರಬೇಕಲ್ಲವೇ ದಾನವೇ ಧರ್ಮವಯ್ಯ ಎಂದು ಹೇಳಿದ ಹಿರಿಯರ ಮಾತು ನೆಮ್ಮದಿಯನ್ನು ದಾನದೊಳಗೆ ಹುದುಗಿಸಿಟ್ಟಿರಬಹುದಾ ಎಂಬ ಅನುಮಾನ ಕಾಡುತ್ತದೆ.
