
ಶಿವಮೊಗ್ಗ: ಅನಂತ ಲಲಿತ ಕಲಾ ಫೌಂಡೇಷನ್, ವನಿತಾ ವಿದ್ಯಾಲಯ ಕೀರ್ತಿನಗರ ಇವರ ಸಂಯುಕ್ತಾಶ್ರಯದಲ್ಲಿ ಕೀರ್ತಿ ನಗರದಲ್ಲಿರುವ ವನಿತಾ ವಿದ್ಯಾಲಯದಲ್ಲಿ ಆಡು ಆಟ ಆಡು ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ’ಭೀಮ’ ಚಿತ್ರದ ಗಿರಿಜಾ ಖ್ಯಾತಿಯ ಪ್ರಿಯಾ ಶಠಮರ್ಷಣ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಶಿಬಿರವು ಉಚಿತವಾಗಿದೆ. ಸುಮಾರು ೩೦೦ ಮಕ್ಕಳಿಗೆ ಅವಕಾಶವಿದೆ. ಪ್ರಮುಖವಾಗಿ ರಂಗಭೂಮಿ ಚಿತ್ರಕಲೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವುದು, ದೇಸಿಯ ಚಟುವಟಿಕೆಗಳಿಗೆ ಆದ್ಯತೆ ಕೊಡುವುದು, ವ್ಯಕ್ತಿತ್ವ ವಿಕಸನ, ಮಕ್ಕಳ ಮಾನಸಿಕ ಬೆಳವಣಿಗೆಗೆ ಅನುಕೂಲವಾಗುವಂತಹ ಆಟಗಳನ್ನು ಆಡಿಸುವುದೇ ಆಗಿದೆ. ಮಕ್ಕಳು ಇದರ ಪ್ರಯೋಜನ ಪಡೆಯಬೇಕು ಎಂದರು.
ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಖ್ಯಾತಿಯ ಅವಿನಾಶ್ ಶಠಮರ್ಷಣ ಮಾತನಾಡಿ, ಈ ಶಿಬಿರದಲ್ಲಿ ಮುಖ್ಯವಾಗಿ ರಂಗಭೂಮಿ ಅಲ್ಲದೇ ಚಲನಚಿತ್ರದ ಬಗ್ಗೆ ಬೇಸಿಕ್ ಜ್ಞಾನವನ್ನು ಕೂಡ ಪರಿಚಯ ಮಾಡಿಕೊಡುತ್ತೇವೆ. ೮ ವರ್ಷದಿಂದ ೧೪ ವರ್ಷದ ಮಕ್ಕಳು ಇದರಲ್ಲಿ

ಭಾಗವಹಿಸಬಹುದು. ಆದರೆ, ಅದಕ್ಕಿಂತ ಹಿರಿಯರು ಕೂಡ ಆಸಕ್ತಿ ವಹಿಸಿ ಶಿಬಿರಕ್ಕೆ ಬಂದರೆ ಅವರಿಗೂ ಕೂಡ ರಂಗಭೂಮಿ, ಸಿನಿಮಾ ಹೀಗೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಶಿಬಿರದ ಸಂಚಾಲಕಿ ರಾಜ್ಯಪ್ರಶಸ್ತಿ ವಿಜೇತೆ, ರಂಗೋಲಿ ಕಲಾವಿದೆ ರಮ್ಯಾ ಮಾತನಾಡಿ, ಈ ಶಿಬಿರವು ಏ. ೧೦ರಿಂದ ಮೇ ೧ರವರೆಗೆ ಮತ್ತು ಎರಡನೇ ಬ್ಯಾಚ್ ಮೇ ೫ರಿಂದ ೨೬ರವರೆಗೆ ನಡೆಯಲಿದೆ. ೨೧ ದಿನಗಳ ಶಿಬಿರವಿದು. ಬೆಳಗ್ಗೆ ೯.೩೦ರಿಂದ ಮಧ್ಯಾಹ್ನ ೩.೩೦ರವರೆಗೆ

ಇರುತ್ತದೆ. ಮಧ್ಯಾಹ್ನದ ಊಟವನ್ನು ಮಕ್ಕಳೇ ತರಬೇಕು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳ ಮುಖಾಮುಖಿ ಇರುತ್ತದೆ. ರಂಗಗೀತೆ, ಜಾನಪದ ಗೀತೆ, ನೃತ್ಯ, ಯಕ್ಷಗಾನ, ಕೋಲಾಟ, ರಂಗೋಲಿ ಹೀಗೆ ಹಲವು ಆಟಗಳು ಜೊತೆಗೆ ಪಾಠ, ಪಾತ್ರಾಭಿನಯ ಎಲ್ಲವೂ ಇರುತ್ತದೆ. ಮುಖ್ಯವಾಗಿ ಅವಿನಾಶ್ ಶಠಮರ್ಷಣ ಅವರು ಇದರ ಜವಾಬ್ದಾರಿ ಹೊತ್ತಿದ್ದು ಹೆಚ್ಚಿನ ಮಾಹಿತಿಗಾಗಿ ೯೪೪೯೮ ೮೪೭೪೮, ೭೩೫೩೨ ೪೧೯೮೯, ೯೭೪೩೭ ೦೭೩೨೮ ಅನ್ನು ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೈಕೆಲ್ ಕೆನತ್ ಇದ್ದರು.