
ಸೊರಬ ತಾಲ್ಲೂಕು ಆಸ್ಪತ್ರೆಗೆ ತಜ್ಞ ವೈದ್ಯರು, ಕ್ಷ ಕಿರಣ ಯಂತ್ರ, ಡಯಾಲಿಸಿಸ್ ಯಂತ್ರ ಸೇರಿದಂತೆ ಅಗತ್ಯವಿರುವ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸುತ್ತೇನೆ ಎಂದು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಭರವಸೆ ನೀಡಿದರು.
ಸೊರಬದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ತಾಲ್ಕೂಕು ಆರೋಗ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು ಸೇರಿದಂತೆ ಇತರೆ ತಜ್ಞರನ್ನು ನೇಮಿಸಲು ಸೂಕ್ತ ಕ್ರಮ ವಹಿಸಬೇಕು. ತಜ್ಞರೋರ್ವರು ದೀರ್ಘ ರಜೆಯಲ್ಲಿದ್ದಾರೆ. ಖಾಲಿ ಎಂದು ತೋರಿಸಿದರೆ ಮಾತ್ರ ಕೌನ್ಸೆಲಿಂಗ್ ನಲ್ಲಿ ಬೇರೆ ತಜ್ಞ ವೈದ್ಯರನ್ನು ನೇಮಿಸಬಹುದು. ಆದ್ದರಿಂದ ಈ ಕುರಿತು ಸೂಕ್ತವಾದ ಕ್ರಮಕೈಗೊಳ್ಳಬೇಕೆಂದು ಡಿಹೆಚ್ಓ ರವರಿಗೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿರುವ ಪ್ರಸ್ತುತ ಎಕ್ಸ್ ರೇ ಮಷೀನ್ ಹಾಳಾಗಿದ್ದು ಸುಮಾರು ರೂ. ೧೬ ರಿಂದ ೧೭ ಲಕ್ಷ ವೆಚ್ಚದ ಎಕ್ಸ್ ರೇ ಮಷೀನ್ ಅಗತ್ಯವಿದೆ. ಅದನ್ನು ಸಿಎಸ್ ಆರ್ ಫಂಡ್ ಲ್ಲಿ ಖರೀದಿಸಲು ಕ್ರಮ ವಹಿಸಲಾಗುವುದು ಎಂದರು.

ಹಾಗೆಯೇ ದಂತ ಚಿಕಿತ್ಸೆಗೆ ಅಗತ್ಯವಿರುವ ಪೋರ್ಟಬಲ್ ಕ್ಷಕಿರಣ ಯುನಿಟ್ ನ್ನು ತರಿಸಲು ಸಹ ಸಭೆಯಲ್ಲಿ ಚರ್ಚಿಸಲಾಯಿತು.
ಡಯಾಲಿಸಿಸ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸ್ತುತ ೩ ಶಿಫ್ಟ್ ಲ್ಲಿ ಫುಲ್ ಲೋಡ್ ಇದೆ. ಹೆಚ್ಚುವರಿಯಾಗಿ ೨ ಮಷಿನ್ ಅವಶ್ಯಕತೆ ಇದ್ದು ಇದನ್ನು ಖರೀದಿಸಲು ಹಾಗೂ ಆಸ್ಪತ್ರೆ ಯಲ್ಲಿ
೨ ಆಂಬುಲೆನ್ಸ್ ಇದ್ದು ಸಾಕಾಗುತ್ತಿಲ್ಲ. ಹೆಚ್ಚುವರಿಯಾಗಿ ೧ ಆಂಬುಲೆನ್ಸ್ ಬೇಕೆಂದು ಕೇಳಿದ್ದು, ಇವುಗಳನ್ನು ಖರೀದಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇನೆ ಎಂದರು.

ಆಸ್ಪತ್ರೆಯಲ್ಲಿ ಹೆಚ್ ಟಿ ಕ್ಯುಬಿಕಲ್ ಅಳವಡಿಕೆ ಹಾಗೂ ಆಸ್ಪತ್ರೆ ವಸತಿಗೃಹ ವಿದ್ಯುತ್ ಸಂಪರ್ಕದ ಸಮಸ್ಯೆ ಸರಿಪಡಿಸಲು ಅಗತ್ಯವಿರುವ ಅಂದಾಜು ವೆಚ್ಚ ಸಿದ್ದಪಡಿಸಿ ನೀಡುವಂತೆ ತಿಳಿಸಿದರು.
೮ ವಸತಿಗೃಹಗಳು ಬೇಕೆಂದು ವೈದ್ಯಾಧಿಕಾರಿಗಳು ತಿಳಿಸಿದ್ದು ಇದಕ್ಕೆ ಅಗತ್ಯವಿರುವ ಅಂದಾಜು ನೀಡಿರಿ, ಇಲಾಖೆಯ ಅಧಿಕಾರಿಗಳೊಂದಿಗೆ ನಾನೇ ವೈಯಕ್ತಿಕವಾಗಿ ಮಾತನಾಡುತ್ತೇನೆ ಎಂದರು.
ಪಾರ್ಕಿಂಗ್, ವಿಶ್ರಾಂತಿಕೊಠಡಿ. ಉಗ್ರಾಣ ಸೇರಿದಂತೆ ೧೨ ಕೋಟಿ ವೆಚ್ಚದ ಅಂದಾಜು ಸಿದ್ದವಿದೆ.
ಕೊಳೆ ಬಟ್ಟೆ ಸ್ವಚ್ಚಗೊಳಿಸಿ ಡ್ರೈಯಿಂಗ್ ಮಾಡುವ ಲಾಂಡ್ರಿ ಸರ್ವಿಸ್ ಯೂನಿಟ್ ಅವಶ್ಯಕತೆ ಇದೆ ಎಂದು ತಿಳಿಸಿದ್ದು, ಅಂದಾಜು ಪಟ್ಟಿ ಸಿದ್ದಪಡಿಸಿ ನೀಡುವಂತೆ ತಿಳಿಸಿದ ಅವರು ಆಸ್ಪತ್ರೆಗೆ ಅಗತ್ಯವಾಗಿ ಬೇಕಾಗಿರುವ ಸೇವೆ ಸೌಲಭ್ಯಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು, ಸರ್ಕಾರದೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಒದಗಿಸುವುದಾಗಿ ತಿಳಿಸಿದರು.
ಡಿಹೆಚ್ಒ ಡಾ.ನಟರಾಜ್, ತಾಲ್ಲೂಕು ವೈದ್ಯಾಧಿಕಾರಿ ಡಾ.ನವೀನ್, ಎಎಂ ಓ ಡಾ.ಪ್ರಭು ಸಾಹುಕಾರ್, ತಾಲ್ಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಹಾಜರಿದ್ದರು.