ಶಿವಮೊಗ್ಗ,ಮಾ.೦೧: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಓರ್ವ ಬಹುಮುಖ ಪ್ರತಿಭೆಯುಳ್ಳವರಾಗಿದ್ದರು ಎಂದು ಕರ್ನಾಟಕ ವಿಧಾನ ಪರಿಷತ್ನ ಮಾಜಿ ಸಭಾಪತಿಗಳೂ, ಬಿಜೆಪಿಯ ಹಿರಿಯ ಮುಖಂಡರು ಆದ ಡಿ.ಹೆಚ್.ಶಂಕರಮೂರ್ತಿ ಬಣ್ಣಿಸಿದರು.
ಅವರು ಇಂದು ಅಟಲ್ಜೀ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಅಡಿಯಲ್ಲಿ ಅಟಲ ಬಿಹಾರಿ ವಾಜಪೇಯಿ ಅವರೊಂದಿಗೆ ಒಡನಾಟದ ಕುರಿತು ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು.

ಅಟಲ ಬಿಹಾರಿ ವಾಜಪೇಯಿ ಸಾಮಾನ್ಯ ಕಾರ್ಯಕರ್ತರಾಗಿ ಭಾರತೀಯ ಜನತಾ ಪಕ್ಷವನ್ನು ಕಟ್ಟುವುದರಲ್ಲಿ ವಯಿಸಿದ ಪಾತ್ರ ದೊಡ್ಡದು. ಅವರು ವಿದೇಶಾಂಗ ಸಚಿವರಾದಾಗ ಶಿವಮೊಗ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿಯೇ ವಾಸ್ತವ್ಯ ಮಾಡುತ್ತಿದ್ದರು. ಮಲೆನಾಡಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಿಯೇ ಸಾರ್ವಜನಿಕ ಸಭೆಯಿದ್ದರು ಅವು ಮುಗಿದ ನಂತರ ವಾಪಾಸ್ಸು ಬಂದು ತಮ್ಮ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರು ಎಂದು ಸ್ಮರಿಸಿದರು.

ವಾಜಪೇಯಿಯವರು ಸುಲಭಕ್ಕೆ ಅರ್ಥ ಮಾಡಿಕೊಳ್ಳುವ ವ್ಯಕ್ತಿತ್ವವುಳ್ಳವರಾಗಿರಲಿಲ್ಲ. ಅವರೊಬ್ಬ ಅದ್ಭುತ ವ್ಯಕ್ತಿಯಾಗಿದ್ದರು. ವಾಜಪೇಯಿ ಅವರನ್ನು ಅರ್ಥ ಮಾಡಿಕೊಳ್ಳವುದೇಂದರೆ ಕುರುಡರು ಆನೆಯನ್ನು ಮುಟ್ಟಿ ನೋಡಿದಾಗೆ ಎಂದು ಮಾರ್ಮಿಕವಾಗಿ ನುಡಿದರು.
ಅಟಲಬಿಹಾರಿ ವಾಜಪೇಯಿ ಅವರು ಸರಳ,ಸಜ್ಜನಿಕೆಯ ಹಾಗೂ ಎಲ್ಲರನ್ನೂ ಏಕಭಾವದಿಂದ ನೋಡುವ ವ್ಯಕ್ತಿಯಾಗಿದ್ದರು. ವಿರೋಧಿಗಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುವವರಾಗಿದ್ದರು. ಅದಕ್ಕಾಗಿಯೇ ಅವರನ್ನು ಅಜಾತ ಶತ್ರು ಎಂದು ಕರೆಯಲಾಗುತ್ತಿತ್ತು.
ಕರ್ನಾಟಕಕ್ಕೆ ಆಗಮಿಸಿದಾಗ ಅವರು ಎಲ್ಲಾ ಸಾರ್ವಜನಿಕ ಸಭೆಗಳಲ್ಲಿ ಅವರ ಭಾಷಣಗಳನ್ನು ತಾವೇ ಕನ್ನಡಕ್ಕೆ ತರ್ಜುಮೆ ಮಾಡಬೇಕು ಎಂಬುವುದು ಅಟಲಜೀಯವರ ಅಭಿಲಾಷೆಯಾಗಿತ್ತು ಎಂದು ಶಂಕರಮೂರ್ತಿ ನೆನಪಿಸಿಕೊಂಡರು.
ಅಟಲಜೀ ಅವರು ಎಂದೆಂದಿಗೂ ವಿರೋಧಿಗಳನ್ನು ಅವಾಚ್ಯ ಶಬ್ದದಿಂದ ಬೈದಿದ್ದಾಗಲೀ, ಏಕವಚನದಿಂದ ಸಂಭೋದಿಸಿದ್ದಾಗಲಿ ಇಲ್ಲವೇ ಇಲ್ಲ ಎಂದು ತಿಳಿಸಿದ ಅವರು ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದಾಗ ಜೈಲು ವಾಸ ಅನುಭವಿಸಿದ ವಾಜಪೇಯಿಯವರು ಜೈಲಿನಲ್ಲಿಯೇ ಅಧ್ಯಯನ, ಅಧ್ಯಾಪನ, ಬರವಣಿಗೆ ಇತ್ಯಾದಿಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದರು.
ಇದಕ್ಕೂ ಮೊದಲು ಮಾತನಾಡಿದ ಅಟಲ್ಸ್ಮೃತಿ ಸಂಕಲನ ಯೋಜನೆಯ ರಾಜ್ಯ ಸಂಚಾಲಕರಾದ ಡಾ.ಶಿವಯೋಗಿ ಸ್ವಾಮಿ ಅಟಲ್ಜೀ ಅವರ ಕಾರ್ಯಗಳನ್ನು ದಾಖಲಿಸಲು ಜ.೧೫ರಿಂದ ಫೆ.೨೮ರವರೆಗೆ ರಾಜ್ಯಾದಾದ್ಯಂತ ಅಟಲ್ಜೀ ಒಡನಾಡಿಗಳೊಡನೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದಕ್ಕಾಗಿ ರಾಜ್ಯಮಟ್ಟದಲ್ಲಿ ೧೨ಜನರ ತಂಡವನ್ನು ರಚಿಸಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ೪ಜನ ಪಕ್ಷದ ಪ್ರಮುಖರನೊಳ್ಳಗೊಂಡ ಸಮಿತಿಗಳನ್ನು ರಚಿಸಲಾಗಿತ್ತು. ಪ್ರತಿ ಮಂಡಲದಲ್ಲೂ ೩ಜನರ ತಂಡ ಸಂಘಟಿಸಲಾಗಿತ್ತು. ಅದರ ಅಂಗವಾಗಿ ಇಂದು ಅವರೊಡನೆ ನಿಕಟ ಸಂಪರ್ಕ ಹೊಂದಿದ್ದ ಡಿ.ಹೆಚ್.ಶಂಕರಮೂರ್ತಿ ಮತ್ತು ಅವರ ಸಹೋದರ ಡಿ.ಹೆಚ್.ಸುಬ್ಬಣ್ಣ ಅವರೊಡನೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಇವರೆಲ್ಲರ ಅನುಭವದ ಮಾತುಗಳನ್ನು ಸಂಕಲಿಸಿ, ವರದಿ ತಯಾರಿಸಿ ಕೇಂದ್ರ ಸಮಿತಿಗೆ ಕಳುಹಿಸಿಕೊಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಡಿ.ಹೆಚ್.ಶಂಕರಮೂರ್ತಿಯವರನ್ನು ರಾಜ್ಯ ಸಮಿತಿ ವತಿಯಿಂದ ಜಿಲ್ಲಾ ಪ್ರಮುಖರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ಅಟಲ್ಸ್ಮೃತಿ ಸಂಕಲನ ಸಮಿತಿಯ ಸಂಚಾಲಕರಾದ ಲಕ್ಷ್ಮೀಅಶ್ವಿನ್ಗೌಡ, ಶಾಸಕ ಡಿ.ಎಸ್.ಅರುಣ್ ಪ್ರಮುಖರಾದ ಗಿರೀಶ್ ಪಟೇಲ್, ಆರ್.ಕೆ. ಸಿದ್ದರಾಮಣ್ಣ, ಎಸ್.ದತ್ತಾತ್ರಿ, ಮೋಹನ್ರೆಡ್ಡಿ, ಎನ್.ಕೆ.ಜಗದೀಶ್, ಮಾಲತೇಶ್, ಸುರೇಖಾ ಮುರುಳೀಧರ್ ಮೊದಲಾದವರು ಇದ್ದರು.