ಶಿವಮೊಗ್ಗ: ಬದುಕನ್ನು ಬದಲಿಸುವ ಶಕ್ತಿ ಪುಸ್ತಕಕ್ಕಿದೆ. ಬದುಕನ್ನು ಬದಲಿಸುವ ಶಕ್ತಿಯೂ ಪುಸ್ತಕಕ್ಕೆ ಇದೆ ಎಂದು ಖ್ಯಾತ ಶಿಕ್ಷಣ ತಜ್ಞ, ವಾಗ್ಮಿ ಡಾ.ಗುರುರಾಜ ಕರ್ಜಗಿ ಹೇಳಿದರು.
ಅವರು ಇಲ್ಲಿಯ ಪೋದಾರ್ ಇನಂಟರ್ನ್ಯಾಷನಲ್ ಸ್ಕೂಲ್ ಆಯೋಜಿಸಿದ್ದ ವಿದ್ವಾನ್ ಶ್ರೀಧರ ಭಟ್ ನಿಟ್ಟೂರು ಅವರ ನಿರೂಪಣೆಯಲ್ಲಿ ಶಾಲೆಯ ವಿದ್ಯಾರ್ಥಿಗಳ ರಜಾ ಸಮಯದ ಅನುಭವದ ಲೇಖನಗಳನ್ನಾಧರಿಸಿದ ’ಬುಗುರಿ’ ರಜೆಯ ರಸಾಯನ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.

ಇತಿಹಾಸವನ್ನು ಭವಿಷ್ಯಕ್ಕೆ ಜೋಡಿಸುವ ಕೆಲಸ ಬರಹದಿಂದಾಗುತ್ತದೆ. ಅತ್ಯಂತ ಗಂಭೀರವಾಗಿ ಬರೆಯುವುದರ ಮೂಲಕ ಎಲ್ಲರೂ ಭೈರಪ್ಪನವೇ ಆಗಬೇಕೆಂದೇನೂ ಇಲ್ಲ. ತಮಾಷೆಯ ವಸ್ತುವನ್ನು ಬಳಸಿ ಬರೆಯುವುದರ ಮೂಲಕ ಬೀಚಿನೂ ಆಗಬಹುದು. ಮನಸ್ಸಿನ ವಿಸ್ತಾರ, ಮನಸ್ಸನ್ನು ಬಲಪಡಿಸುವ, ಕಲ್ಪನಾ ಶಕ್ತಿ ಮತ್ತು ಸೃಜನಶೀಲತೆ ಬೆಳೆಸುವ, ಮತ್ತೊಬ್ಬರ ಬಗ್ಗೆ ಸಂಯಮ, ಅನುಕಂಪ ಹುಟ್ಟಿಸುವ ಹಾಗೂ ಪ್ರೇರೇಪಣೆ ನೀಡುವ ಪ್ರಯೋಜನ ಪುಸ್ತಕ ಓದುವುದರಿಂದ ಆಗುತ್ತದೆ ಎಂದರು.
ವಿದ್ಯಾರ್ಥಿಗಳು ತಾವು ಕಂಡದ್ದನ್ನು ಅನುಭವಿಸಿ ಲೇಖನಗಳ ರೂಪದಲ್ಲಿ ಬರೆದು ಪುಸ್ತಕವನ್ನಾಗಿಸಿದ್ದು ಅಭಿನಂದನೀಯ ಕಾರ್ಯವಾಗಿದೆ. ಈ ಮೂಲಕ ಸಾಹಿತಿಗಳ ಬೀಜ ಬಿತ್ತನೆಯಾಗಿದೆ. ಈಗ ಬರೆದ ಲೇಖನ ಕೊನೆಯಾಗಬಾರದು. ಜೀವನ ಯಶಸ್ಸಿಗೇ ಹೊರತು ಸೋಲಿಗೆ ಅಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಮಹಾತ್ಮಾ ಗಾಂಧೀಜಿಯ ಆತ್ಮಕಥನ, ಮಾಸ್ತಿಯವರ ಭಾವ, ಕುವೆಂಪು ಅವರ ರಾಮಾಯಣ ದರ್ಶನ, ಡಾ.ಎಪಿಜೆ ಅಬ್ದುಲ್ ಕಲಾಂ ಅವರ ವಿಂಗ್ಸ್ ಆಫ್ ಫೈಯರ್ ಅಂಥಹ ಪುಸ್ತಗಳನ್ನು ಓದಬೇಕು. ಒಂದು ಲೇಖನ ಪ್ರಕಟವಾದಾಗ ಇನ್ನೊಂದು ಲೇಖನ ಬರೆಯಲು ಪ್ರಚೋದನೆಯಾಗುತ್ತದೆ ಎಂದ ಅವರು ಚೆನ್ನಾಗಿ ಬರೆಯುತ್ತಿದ್ದೇವೆ ಅಂತಾ ಬರೆಯುದನ್ನು ನಿಲ್ಲಿಸಬೇಡಿ ಎಂದ ಅವರು, ಇನ್ನೊಂದು ಪುಸ್ತಕ ಬರೆಯಿರಿ ಎಂದು ಸಲಹೆ ನೀಡಿದರು.

ಅಂಕಣಗಾರ ಹಾಗೂ ಥಟ್ ಅಂತಾ ಹೇಳಿ ಕಾರ್ಯಕ್ರಮದ ಖ್ಯಾತಿಯ ಡಾ.ನಾ.ಸೋಮೇಶ್ವರ ’ಬುಗರಿ’ ಅವಲೋಕನ ಮಾಡಿ, ಮನುಷ್ಯನಿಗೆ ಸಾಮಾನ್ಯವಾಗಿ ಒಂದೇ ಮೆದುಳು ಇದೆ ಎಂಬುದನ್ನು ನಾವೆಲ್ಲ ತಿಳಿದುಕೊಂಡಿದ್ದೇವೆ. ಆದರೆ ತಲೆಯಲ್ಲಿರುವ ಮೆದುಳಿನ ಹೊರತಾಗಿ
ಹೃದಯದಲ್ಲಿ ಮತ್ತು ಹೊಟ್ಟೆಯಲ್ಲಿಯೂ ಮೆದುಳು ಇರುತ್ತದೆ ಎಂಬುದನ್ನು ಇತ್ತೀಚಿನ ಸಂಶೋಧನೆಗಳು ಹೇಳುತ್ತವೆ. ಒಂದೊಂದು ಮೆದುಳು ಒಂದೊಂದು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂದು ವಿವರಿಸಿದರು.
ಶಿಕ್ಷಣವೇತ್ತರು ಗಣಿತ ಮತ್ತು ವಇಜ್ಞಾನಕ್ಕೆ ಕೊಡುವ ಮಹತ್ವವನ್ನು ಸಾಹಿತ್ಯ, ಸಂಸ್ಕೃತಿಗೆ ನೀಡುತ್ತಿಲ್ಲ. ಸಾಹಿತ್ಯ, ಸಂಗೀತ ಮುಖ್ಯವಾಗಿ ಮನುಷ್ಯನನ್ನು ಮಾನವೀಯನನ್ನಾಗಿ ಮಾಡುತ್ತದೆ. ನಮ್ಮ ಮಕ್ಕಳು ಸವ್ಯಸಾಚಿಯಾಗಿ ಬೆಳೆಯುವ ರೀತಿಯಲ್ಲಿ ಶಿಕ್ಷಣ ಇರಬೇಕು. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಬಾಳೆ ಎಲೆ ಮೇಲೆ ತೆಂಗಿನ ಕಾಯಿ, ಬಳೆ, ಅರಿಶಿಣ-ಕುಂಕುಮ ಬಾಗಿನ ಕುಡುವ ಬದಲು ಪುಸ್ತಕಗಳನ್ನು ಬಾಗಿನ ರೂಪದಲ್ಲಿ ನೀಡಿ ಎಂದರು. ಮಕ್ಕಳಲ್ಲಿ ಬರೆಯುವ ಆಸಕ್ತಿಯನ್ನು ಮೂಡಿಸುವಲ್ಲಿ ಶ್ರಮಿಸಿದ ಪುಸ್ತಕ ನಿರೂಪಕ ಶ್ರೀಧರ್ ಭಟ್ ಮತ್ತು ಅಧ್ಯಾಪಕ ವೃಂದವನ್ನು ಮುಕ್ತ ಕಂಠದಿಂದ ಡಾ.ಸೋಮೇಶ್ವರ ಶ್ಲಾಘಿಸಿದರು.
ಪ್ರಾಂಶುಪಾಲ ಸುಕೇಶ್ ಸೇರಿಗಾರ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ನೇತ್ರಾ ಎಚ್., ಪೋದಾರ್ ಸಂಸ್ಥೆಯ ಜನರಲ್ ಮ್ಯಾನೇಜ್ ರವೀಂದ್ರ ವಂಕೆಲ, ವಿದ್ಯಾನ್ ಶ್ರೀಧರ್ ಭಟ್ ನಿಟ್ಟೂರು, ಯಾಜಿ ಪ್ರಕಾಶನದ ಸವಿತಾ ಯಾಜಿ, ಶ್ರೀಪತಿ, ಶೃತಿ ಮೊದಲಾದವರಿದ್ದರು.