
ಭದ್ರಾವತಿ, ,ಫೆ. 25 :
ಚಿಕಿತ್ಸೆಗೆಂದು ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಮಹಿಳೆಯೋರ್ವರು ಸೋಮವಾರ ರಾತ್ರಿ ನಿಧನರಾಗರೆಂದು ವೈದ್ಯರು ದೃಢೀಕರಿಸಿದ್ದಾರೆ. ಮಂಗಳವಾರ ಬೆಳಗ್ಗೆ ಅವರ ನಿವಾಸಕ್ಕೆ ದೇಹವನ್ನು ತಂದು ಇಳಿಸುವಾಗ ಕಣ್ತೆರೆದು ಉಸಿರಾಡಿದ ಅಪರೂಪದ ವಿಶಿಷ್ಟ ಘಟನೆ ಗಾಂಧಿ ನಗರದಲ್ಲಿ ನಡೆದಿದೆ.

ಗಾಂಧಿ ನಗರದ ವಾಸಿ ಸಿವಿಲ್ ಕಂಟ್ರಾಕ್ಟರ್ ಸುಬ್ರಮಣಿ ಎಂಬುವರ ಪತ್ನಿ ಮೀನಾಕ್ಷಿ (52 ) ಅವರನ್ನು ಅನಾರೋಗ್ಯ ನಿಮಿತ್ತ ಶಿವಮೊಗ್ಗಾದ ನಾರಾಯಣ ಹೃದಯಾಲಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 11.30 ಕ್ಕೆ ಮೀನಾಕ್ಷಿ ಅವರು ನಿಧನರಾದರೆಂದು ವೈದ್ಯರು ದೃಡಪಡಿಸಿದ್ದರು.
ವಿಷಯ ತಿಳಿದ ಅವರ ಬಂಧು ಬಳಗ ಸೇರಿದಂತೆ ನೂರಾರು ಮಂದಿ ಅವರ ನಿವಾಸದ ಬಳಿ ನೆರೆದಿದ್ದರು. ಮಂಗಳವಾರ ಬೆಳಗ್ಗೆ ಪಾರ್ಥೀವ ಶರೀರವನ್ನು ಗಾಂಧಿನಗರದ ನಿವಾಸಕ್ಕೆ ತಂದು ಇಳಿಸುವಾಗ ಮೃತರಾಗಿದ್ದವರು ಕಣ್ತೆರೆದು ನೋಡಿ ಉಸಿರಾಡಿದ್ದಾರೆ. ಕುಟುಂಬಸ್ಥರು ಅಚ್ಚರಿಗೊಂಡು ನೀರು ಕುಡಿಸಿದ್ದಾರೆ.

ತಕ್ಷಣವೇ ಸಮೀಪದ ಭದ್ರಾ ನರ್ಸಿಂಗ್ ಹೋಂಗೆ ಹೋಗಿ ಪರೀಕ್ಷಿಸಿಕೊಂಡು ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮಲ್ನಾಡ್ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಯಾರಾದರೂ ಮಾತನಾಡಿದರೆ ಉತ್ತರಿಸುತ್ತಾರೆಂದು ಕುಟುಂಬ ಮೂಲಗಳು ತಿಳಿಸಿವೆ.
ನೆರೆದಿದ್ದ ನೂರಾರು ಮಂದಿ ಪುಷ್ಪ ಹಾರಗಳನ್ನು ಹಿಂದಕ್ಕೆ ತರುತ್ತಾ ಭಗವಂತ ಅವರಿಗೆ ಮತ್ತಷ್ಟು ಆಯಸ್ಸು ಕೊಡಲಿ ಎಂದು ಪ್ರಾರ್ಥಿಸುತ್ತಿದ್ದರು.
ಮುಖಂಡರಾದ ವಿ.ಕದಿರೇಶ್, ಆರ್.ಕರಣಾಮೂರ್ತಿ, ಮಂಜುನಾಥ್, ಸ್ವಾಮಿನಾಥನ್, ವಿದ್ಯಾಧರನ್, ಸೋಮಸುಂದರ್ ಮುಂತಾದವರಿದ್ದರು.
