![eee](https://tungataranga.com/wp-content/uploads/2025/02/eee-1024x472.jpg)
ಶಿವಮೊಗ್ಗ : ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿಯುತ್ತಿದ್ದು, ಆರ್ಥಿಕವಾಗಿಯೂ ಅವಳು ಸಶಕ್ತಳಾಗುವೆಡೆ ನಿಗಾ ವಹಿಸಬೇಕೆಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮಹಿಳೆಯರಿಗೆ ಕಿವಿಮಾತು ಹೇಳಿದ್ದಾರೆ. ಭಾನುವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಿಂಗುಲಾಂಬಿಕಾ ಮಹಿಳಾ ವಿಕಾಸ ವೇದಿಕೆಯ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಮಹಿಳೆ ಎಲ್ಲಾ ಕೆಲಸಗಳನ್ನು ನಿಭಾಯಿಸಲು ಸಶಕ್ತಳಾಗಿದ್ದಾಳೆ. ಮಗಳಾಗಿ, ಸೊಸೆಯಾಗಿ, ತಾಯಿಯಾಗಿ ವಿವಿಧ ಸ್ತರಗಳಲ್ಲಿ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ. ಆದರೆ, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ಭಾರತದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
![](http://tungataranga.com/wp-content/uploads/2023/04/Screenshot_2023_0226_070755-1.jpg)
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಪ್ರಭಾವಕ್ಕೆ ಒಳಗಾಗಿ ಹಲವಾರು ಮಹಿಳೆಯರು, ತೊಂದರೆಗೆ ಸಿಲುಕುತ್ತಿದ್ದಾರೆ. ಹಲವಾರು ಅವಘಢಗಳು ಸಂಭವಿಸುತ್ತಿವೆ. ನಾವು ಬಹಳಷ್ಟು ಎಚ್ಚರಿಕೆಯಿದ ಇರಬೇಕು ನಮ್ಮ ಸಂಸ್ಕೃತಿ ಉಳಿಸುವೆಡೆ ಎಚ್ಚರಿಕೆ ವಹಿಸಬೇಕೆಂದು ಆಶಯ ವ್ಯಕ್ತ ಪಡಿಸಿದರು. ಮದುವೆಗಿಂತ ಮೊದಲು ಮಹಿಳೆಯರು ತಂದೆ, ತಾಯಿ ಕುಟುಂಬ ನೋಡಿಕೊಳ್ಳುವುದು, ಮದುವೆಯಾದ ಬಳಿಕ ಪತಿ, ಪತಿ ಕುಟುಂಬ, ಮಕ್ಕಳು ನೋಡಿಕೊಳ್ಳುವ ಜವಾಬ್ದಾರಿ ಇರುತ್ತದೆ. ಇದರಿಂದಾಗಿ ಎಷ್ಟೋ ಮಹಿಳೆಯರು ತಮ್ಮ ಬಗ್ಗೆ ತಾವು ಯೋಚನೆ ಮಾಡುವುದಿಲ್ಲ. ಆರೋಗ್ಯದ ಕಡೆ ನಿಗಾ ವಹಿಸುವುದಿಲ್ಲ. ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಯೋಗ ಧ್ಯಾನಕ್ಕೆ ನಮಗೆ ನಾವು ಸಮಯ ನೀಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
![](http://tungataranga.com/wp-content/uploads/2025/02/IMG_20250125_140612-1.jpg)
ಇನ್ನು ನಗರ ವ್ಯಾಪ್ತಿಯ ಮಹಿಳೆಯರಿಗೆ ಆರ್ಥಿಕವಾಗಿ ಸಬಲರಾಗಲು, ಸ್ವಂತ ವ್ಯವಹಾರ ಆರಂಭಿಸಲು, ಪಾಲಿಕೆಯಿಂದ ಯೋಜನೆ ಮೂಲಕ ಹಣ ಸಹಾಯ ಮಾಡುತ್ತೇವೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು
ಈ ವೇಳೆ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚಿನ ಅಂಕ ಪಡೆದ ಭಾವಸಾರ ಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಹಿಂಗುಲಾಂಬಿಕಾ ಮಹಿಳಾ ವೇದಿಕೆ ಅಧ್ಯಕ್ಷೆ ಕವಿತಾ ಫಟ್ಕೆ, 2025- 26 ಸಾಲಿನ ಅಧ್ಯಕ್ಷೆ ಅನಿಷಾ ಸತೀಶ್, ಕಾರ್ಯದರ್ಶಿ ವಿಭಾ ತೇಲ್ಕರ್, ಸಹ ಕಾರ್ಯದರ್ಶಿ ಅರ್ಚನಾ ನಾಜ್ರೆ, ಖಜಾಂಚಿ ಸುಮಾ ಶೇಖರ್, ನಂದಾ ಜಗದೀಶ್ ಸೇರಿದಂತೆ ಇತರರಿದ್ದರು.