ಬೆಂಗಳೂರು: ಪತ್ರಕರ್ತರು ಗೌರವದಿಂದ ಬದುಕಲು ಮತ್ತು ಸ್ವಂತ ಗೂಡುಕಟ್ಟಿಕೊಟ್ಟಲು ಅನುಕೂಲವಾಗುವಂತೆ ಸರ್ಕಾರಿ ಅಥವಾ ಖಾಸಗಿ ಲೇಔಟ್ಗಳಲ್ಲಿ ನಿವೇಶನ ಕಲ್ಪಿಸಲು ಸರ್ಕಾರ ಸದ್ಯದಲ್ಲೇ ಘೋಷಣೆ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ನಗರದ ಐಐಎಸ್ಪಿಯ ಟಾಟಾ ಸಭಾಂಗಣದಲ್ಲಿ ಸೋಮವಾರ ನಡೆದ 2023 ಮತ್ತು 2024ನೇ ಸಾಲಿನ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸರ್ಕಾರವು ಈಗಾಗಲೇ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಹಾಗೂ ಪತ್ರಕರ್ತರಿಗೆ ಆರೋಗ್ಯ ವಿಮೆ ನೀಡುವ ಯೋಜನೆ ರೂಪಿಸಿದೆ. ಹಾಗೆಯೇ ಗ್ರಾಮೀಣ ಮತ್ತು ನಗರ ಪತ್ರಕರ್ತರಿಗೂ ನಿವೇಶನ ನೀಡಲಾಗುವುದು ಎಂದರು.
ಮಾಧ್ಯಮಗಳಿಗೆ ಕರ್ನಾಟಕದಲ್ಲಿ ಇರುವಷ್ಟು ಪತ್ರಿಕಾ ಸ್ವಾತಂತ್ರ್ಯ ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲ. ದಿನ ಬೆಳಗಾದರೆ ನೀವು ನಮಗೆ ಹೊಡೆಯುತ್ತಲೇ ಇರುತ್ತೀರಿ. ಟೀಕಿಸಿ ನಮ್ಮನ್ನು ಹಳ್ಳಕ್ಕೆ ಹಾಕುತ್ತಲೇ ಇರುತ್ತೀರಿ, ನಿಮಗೆ ಸಂತೋಷವಾದರೆ ನಮ್ಮನ್ನು ಮೇಲಕ್ಕೆ ಏರಿಸುತ್ತೀರಿ. ನಿಮ್ಮನ್ನು ಬಿಟ್ಟು ನಾವು ಬದುಕಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ನಾಲ್ಕನೇ ಅಂಗ. ಶಾಸಕಾಂಗ, ಕಾಯಾರ್ಂಗ ಹಾಗೂ ನ್ಯಾಯಾಂಗ ತಪ್ಪು ಮಾಡಿದರೆ ತಿದ್ದುವ ಕೆಲಸವನ್ನು ಮಾಧ್ಯಮ ಮಾಡಲಿದೆ. ಸರ್ಕಾರ ಬದಲಿಸುವ, ನಾಯಕರನ್ನು ಬೆಳೆಸುವ ಶಕ್ತಿಯೂ ಮಾಧ್ಯಮಗಳಿಗಿದೆ. ಆದರೆ, ಸುಳ್ಳು ಸುದ್ದಿಗಳನ್ನು ಯಾವ ರೀತಿ ನಿಯಂತ್ರಿಸುತ್ತೀರಿ ಎಂಬುದನ್ನು ನೀವೇ ಯೋಚಿಸಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಹಿಂದಿನ ಸರ್ಕಾರ ಪ್ರತಿಷ್ಠಿತ
ಟಿಎಸ್ಆರ್ ಪ್ರಶಸ್ತಿ, ಮೊಹರೆ ಹನುಮಂತರಾಯ ಪ್ರಶಸ್ತಿ, ಪರಿಸರ ಪತ್ರಿಕಾ ಪರಿಷತ್ ನೀಡುವ ಪ್ರಶಸ್ತಿಯನ್ನು ಅನೇಕ ವರ್ಷಗಳಿಂದ ನೀಡಿರಲಿಲ್ಲ. ಆ ಎಲ್ಲ ಪ್ರಶಸ್ತಿಗಳನ್ನು ನಮ್ಮ ಸರ್ಕಾರ ನೀಡುತ್ತಿದೆ. ಜತೆಗೆ ರಘುರಾಮ್ ಶೆಟ್ಟಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪ್ರಶಸ್ತಿ ಮೊತ್ತವನ್ನೂ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಡಿಸಿಎಂ ಹೇಳಿದರು.
ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಪತ್ರಿಕಾ ವೃತ್ತಿಯ ಉಸಿರನ್ನು ಕಾಪಾಡಲು ಸಂವಿಧಾನ ಇದೆ. ನಮ್ಮ ಸಂವಿಧಾನ ಕರ್ತೃ ಡಾ.ಅಂಬೇಡ್ಕರ್ ಅವರೇ ಹೇಳಿರುವ ರೀತಿ ಪತ್ರಿಕಾವೃತ್ತಿ ನೈಜ ಪ್ರಾಣವಾಯು ಆಗಿ ಉಳಿಯಬೇಕು. ಈ ದಿಕ್ಕಿನಲ್ಲಿ ಮಾಧ್ಯಮ ಅಕಾಡೆಮಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ವಿನಂತಿಸಿದರು.
ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನಂ ಮಾತನಾಡಿ, ಸುಳ್ಳು ಸುದ್ದಿಗಳು ಮತ್ತು ತಪ್ಪು ಮಾಹಿತಿಗಳನ್ನು ಬಿತ್ತರಿಸುವವರ ವಿರುದ್ಧ ಹೋರಾಟ ಮಾಡಬೇಕಿದೆ. ಇದು ಕೇವಲ ಸುದ್ದಿಮನೆಗಳ ದೃಷ್ಟಿಯಿಂದ ಮಾತ್ರವಲ್ಲದೆ, ಓದುಗರ ದೃಷ್ಟಿಯಿಂದಲೂ ಕಾರ್ಯನಿರ್ವಹಿಸಬೇಕಿದೆ.
ಎಲ್ಲ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. ಜೀವಮಾನ ಸಾಧನೆ ಪ್ರಶಸ್ತಿ ಮೊತ್ತವನ್ನು 50 ಸಾವಿರ ರೂ.ಗಳಿಂದ ಒಂದು ಲಕ್ಷ ರೂ. ಗಳಿಗೆ, ವರ್ಷದ ವ್ಯಕ್ತಿ ಪ್ರಶಸ್ತಿಯನ್ನು 25 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ದತ್ತಿ ಪ್ರಶಸ್ತಿ ಮೊತ್ತ ಹಿಂದಿನಂತೆಯೇ 10 ಸಾವಿರ ರೂ.ಗಳಿರಲಿದೆ ಎಂದು ತಿಳಿಸಿದರು.
ವಿವಿಧ ಮಾಧ್ಯಮಗಳ 60 ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಮತ್ತು 20 ಪತ್ರಕರ್ತರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಿಎಂ ಕಾರ್ಯದರ್ಶಿ ಬಿ.ಬಿ.ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ. ನಿಂಬಾಳ್ಳರ್, ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಮತ್ತು ಸದಸ್ಯ ಶಿವಾನಂದ ತಗಡೂರು ಸೇರಿ ಹಲವರು ಇದ್ದರು.