ಶಿವಮೊಗ್ಗ: ಮಹಾಕುಂಭಮೇಳದ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಅನೂರ್ಜಿತಗೊಳಿಸಬೇಕು ಎಂದು ಬಿಜೆಪಿ ನಗರ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳವು ಇಡೀ ವಿಶ್ವದ ಗಮನಸೆಳೆದಿದೆ. ಅಲ್ಲಿ ಸ್ನಾನ ಮಾಡುವುದು ಹಿಂದೂಗಳ ಪವಿತ್ರ ನಂಬಿಕೆಯಾಗಿದೆ. ಆದರೆ, ಮಲ್ಲಿಕಾರ್ಜುನ ಖರ್ಗೆಯವರು ಗಂಗೆಯಲ್ಲಿ ಮುಳುವುದರಿಂದ ಬಡತನ
ನಿರ್ಮೂಲನೆಯಾಗುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇದು ಖಂಡನೀಯ ಎಂದರು.
ಒಂದು ಜನಾಂಗದ ಓಲೈಕೆಗೆ ಹಾಗೂ ಹೈಕಮಾಂಡ್ ತೃಪ್ತಿಪಡಿಸಲು ಈ ರೀತಿಯ ಮಾತುಗಳನ್ನು ಕಾಂಗ್ರೆಸ್ ನಾಯಕರು ಆಡುತ್ತಿದ್ದಾರೆ.
ಇವರಿಗೆ ಧೈರ್ಯವಿದ್ದರೆ ಮೆಕ್ಕಾ ಯಾತ್ರೆಯನ್ನು ಕೂಡ ಟೀಕಿಸಲಿ. ಆದರೆ, ಅದನ್ನು ಅವರು ಮಾಡುವುದಿಲ್ಲ. ಹಿಂದೂಗಳ ಭಕ್ತಿ ಮತ್ತು ಶ್ರದ್ಧೆಗೆ ಧಕ್ಕೆ ತರುತ್ತಾರೆ. ಆದ್ದರಿಂದ ಖರ್ಗೆಯವರನ್ನು ರಾಜ್ಯಸಭಾ ಸ್ಥಾನದಿಂದ ಅನೂರ್ಜಿತಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ನಗರ ಅಧ್ಯಕ್ಷೆ ರಶ್ಮಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಯಶೋದಾ ವೈಷ್ಣವ್, ನಿರ್ಮಲಾ, ಪ್ರಮುಖರಾದ ಡಾ. ಶಾಂತಾ ಸುರೇಂದ್ರ, ಅನಿಲಾ ಮೋಹನ್, ಮಾಲಾ ಸುಬ್ರಹ್ಮಣ್ಯ, ಯಶೋದಾ ಲೋಕೇಶ್, ಮಹಾಲಕ್ಷ್ಮಿ, ಪ್ರೇಮಾ ಹೆಗಡೆ, ರಾಜೇಶ್ವರಿ, ಚೈತ್ರಾ ಪೈ, ನಂದಿನಿ ಶೆಟ್ಟಿ ರೇಖಾ ಸೇರಿದಂತೆ ಹಲವರಿದ್ದರು.