ಶಿವಮೊಗ್ಗ: ನಗರ ಪಿಎಸ್ಐ ತಿರುಮಲೇಶ್ ಅವರ ವರ್ತನೆ ವಿರೋಧಿಸಿ ವಾಹನಗಳ ಚಾಲಕರು ಮತ್ತು ಕಟ್ಟಡ ಕಾರ್ಮಿಕರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ಕಶ ಹಾರ್ನ್ ಹೊಂದಿರುವ ವಾಹನಗಳಿಂದ ತಡೆದು ಪರಿಶೀಲಿಸುವ ನೆಪದಲ್ಲಿ ಚಾಲಕರನ್ನು ಏಕವಚನದಿಂದ ಇಳಿಯೋ, ಬಾರೋ, ಕೆಳಗೆ ಬಗ್ಗೋ ಎಂದು ಹೀನಾಯ ಪದಗಳನ್ನು ಆಡುತ್ತಾ ಚಾಲಕರ ಕೊರಳಪಟ್ಟಿ ವಾಹನದಲ್ಲಿ ಹಾರ್ನ್ ಸೌಂಡ್ ಬರುವ ಜಾಗಕ್ಕೆ ಕೂರಿಸಿ ಕೇಳೋ ಸೌಂಡ್ ಎಂದು ದುರ್ವರ್ತನೆ ತೋರಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಕರ್ಕಶ ಹಾರ್ನ್ ಬಳಸಿದ್ದಲ್ಲಿ ಅಂತಹ ವಾಹನ ಮಾಲೀಕರನ್ನು ಕರೆಸಿ ತಿಳಿವಳಿಕೆ ನೀಡಬೇಕು ಅಥವಾ ದಂಡ ಹಾಕಬೇಕು. ಆದರೆ ಅದನ್ನು ಬಿಟ್ಟು ಚಾಲಕರ ಕೊರಳಪಟ್ಟಿ ಹಿಡಿದು ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ. ಈ ರೀತಿ ಅವಮಾನ ಮಾಡಿದ ಫೋಟೋಗಳು ನಮ್ಮ ಬಳಿ ಇವೆ. ಆದ್ದರಿಂದ ಕೀಳು ಭಾವನೆಯಿಂದ ಚಾಲಕರನ್ನು ಕಂಡು ದುರ್ವರ್ತನೆ ತೋರಿದ ಪಿಎಸ್ಐ ತಿರುಮಲೇಶ್ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಅಲ್ಲದೇ, ಕಟ್ಟಡ ಕಾರ್ಮಿಕರಿಗೆ ಅವರು ಕೆಲಸ ಮಾಡುವ ಸ್ಥಳದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಅವರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕು. ಅವರಿಗೂ ರಕ್ಷಣೆ ಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನಾ ಸ್ಥಳಕ್ಕೆ ಬಂದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ಈಗಾಗಲೇ ತಂದಿದ್ದೇನೆ. ನಿಮ್ಮ ಪರವಾಗಿ ನಮ್ಮ ರಾಷ್ಟ್ರ ಭಕ್ತರ ಬಳಗವಿದೆ ಎಂದರು.
ಪ್ರತಿಭಟನೆಯಲ್ಲಿ ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್. ಸತೀಶ್, ಪ್ರಮುಖರಾದ ಶಿವಪ್ಪ, ಶಿವರಾಜ್, ಪ್ರದೀಪ್, ಕೃಷ್ಣ, ಅಣ್ಣಪ್ಪ, ಸಾಧಿಕ್, ರಂಗಸ್ವಾಮಿ, ಮೊದಲಾದವರಿದ್ದರು.