ಶಿವಮೊಗ್ಗ; ಕುವೆಂಪು ವಿವಿಯು ಮುಚ್ಚುವ ದಿನಗಳು ದೂರವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಆತಂಕ ವ್ಯಕ್ತಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕುವೆಂಪು ವಿವಿಯಲ್ಲಿ ಭ್ರಷ್ಟಾಚಾರ ಸೇರಿದಂತೆ ಅನೇಕ ಅಧ್ವಾನಗಳು ನಡೆಯತೊಡಗಿವೆ. ಈ ಬಗ್ಗೆ ಸರ್ಕಾರವಾಗಲೀ ಅಲ್ಲಿನ ಕುಲಪತಿಗಳಾಗಳಿ ಕಿಂಚಿತ್ತೂ ಯೋಚಿಸುತ್ತಿಲ್ಲ. ಹೀಗೆ ಮುಂದುವರೆದರೆ ಕುವೆಂಪು ವಿವಿ ಮುಚ್ಚುವ ದಿನಗಳು ಹತ್ತಿರ ಬರುತ್ತವೆ. ಅದಕ್ಕೂ ಮುಂಚೆ ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದರು.
ಇತ್ತೀಚೆಗೆ ಕುವೆಂಪು ವಿವಿಯಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯಿತು. ಅಂದು ಸಾವಿರಾರು ವಿದ್ಯಾರ್ಥಿಗಳಿಗೆ ಸಂಭ್ರಮದ ದಿನವಾಗಿತ್ತು, ರ್ಯಾಂಕ್ ಬಂದವರು ತಮ್ಮ ಪೋಷಕರ ಜೊತೆಗೆ ಬಂದಿದ್ದರು. ಇಂತಹ ಒಂದು ಸಂಭ್ರಮದ ಕಾರ್ಯಕ್ರಮವೊಂದು ಅಲ್ಲಿನ ಅವ್ಯವಸ್ಥೆಗಳಿಗೆ ಸಾಕ್ಷಿಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಈ ಎಲ್ಲಕ್ಕಿಂತ ಮುಖ್ಯವಾಗಿ ಈ ಸಮಾರಂಭಕ್ಕೆ ಉನ್ನತ ಶಿಕ್ಷಣ ಸಚಿವರು ಬರಬೇಕಿತ್ತು. ಇಲ್ಲಿನ ಸಮಸ್ಯೆಗಳ ಬಗ್ಗೆ ಆಲಿಸಬೇಕಿತ್ತು. ನಾವು ಕೂಡ ಅವರು ಬರುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರು ಬರಲಿಲ್ಲ. ಕಳೆದ ವರ್ಷವೂ ಅವರು ಬಂದಿರಲಿಲ್ಲ. ಕುವೆಂಪು ವಿವಿ ಬಗ್ಗೆ ಯಾಕಿಷ್ಟು ಅನಾದರ ಎಂದು ಅರ್ಥವಾಗುತ್ತಿಲ್ಲ. ರಾಜ್ಯಪಾಲರು ಕಾರ್ಯಕ್ರಮಕ್ಕೆ ಬರುತ್ತಾರೆ ಎಂಬ ಕಾರಣಕ್ಕೆ ಅವರು ಬರಲಿಲ್ಲ ಎಂಬ ಅನುಮಾನ ನಮಗಿದೆ. ಅವರು ಹೇಳಿದ ದಿನಾಂಕವನ್ನೇ ಗೊತ್ತುಪಡಿಸಲಾಗಿತ್ತು. ಆದರೂ ಕೂಡ ಅವರು ಬರಲಿಲ್ಲ ಎಂದರು.
ಇದೇ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದವರೇ ಆದ ಹಿರಿಯ ಮುತ್ಸದ್ಧಿ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಿದರು. ಇದಕ್ಕಾದರೂ ಅವರು ಬರಬಹುದಿತ್ತು. ಆದರೆ, ಬರಲಿಲ್ಲ. ಏನಾಗಿದೆ ಅವರಿಗೆ ಎಂದು ಗೊತ್ತಿಲ್ಲ. ಇದು ವಿದ್ಯಾರ್ಥಿಗಳಿಗೆ ಮತ್ತು ವಿಶ್ವವಿದ್ಯಾಲಯಕ್ಕೆ ಮಾಡಿದ ಅವಮಾನ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿಯೂ ಒಂದು ಪ್ರತಿ ವರ್ಷ ಕುವೆಂಪು ವಿವಿ ವ್ಯಾಪ್ತಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪಡೆಯುತ್ತಾರೆ. ಆದರೆ ಅವರಿಗೆ ಯುವನಿಧಿಗೆ ಅರ್ಜಿ ಹಾಕಲು ಕೂಡ ಬರುವುದಿಲ್ಲ. ಕಾರಣ ಕುವೆಂಪು ವಿವಿಯಲ್ಲಿರುವ ಅವ್ಯವಸ್ಥೆ. ಅವರಿಗೆ ಇದುವರೆಗೂ ಅಂಕಪಟ್ಟಿಯೇ ಬಂದಿಲ್ಲ. ಒಂದು ಅಂಕಪಟ್ಟಿ ಕೊಡಲು ಇವರಿಗೆ ವರ್ಷಗಳು ಬೇಕೇ ಎಂದ ಅವರು ಈ ಬಗ್ಗೆ ಕುಲಪತಿಗಳನ್ನು ಕೇಳಿದರೆ ಅವರ ಉತ್ತರವೇ ಒಂದು ರೀತಿಯ ದರ್ಪವಾಗಿರುತ್ತದೆ. ಬೇರೆ ದೇಶದಿಂದ ಬಂದವರಂತೆ ಅವರು ಕಾಣುತ್ತಾರೆ ಎಂದು ದೂರಿದರು.
ಇನ್ನು ಅಲ್ಲಿನ ಸಾಫ್ಟ್ ವೇರ್ ಹಗರಣ ದೊಡ್ಡದಿದೆ. ಸದ್ಯದರಲ್ಲೇ ಈ ಹಗರಣದ ಬಗ್ಗೆ ತನಿಖೆಯಾಗಲಿದೆ. ಸುಮಾರು ೨೫ ಲಕ್ಷಕ್ಕೂ ಹೆಚ್ಚು ಮೊತ್ತದ ಹಗರಣ ಇದಾಗಿದೆ. ಕುವೆಂಪು ವಿವಿಯಲ್ಲಿ ಎಷ್ಟರಮಟ್ಟಿಗೆ ಅವ್ಯವಹಾರವಾಗುತ್ತಿದೆ ಎಂದರೆ ಘಟಿಕೋತ್ಸವದಂತಹ ಸಮಾರಂಭ ನಿರ್ವಹಿಸಲು ಇವೆಂಟ್ ಮ್ಯಾನೇಜ್ ಮೆಂಟ್ ಗೆ ಗುತ್ತಿಗೆ ನೀಡುತ್ತಾರೆ ಎಂದರೆ ಆಶ್ಚರ್ಯವಾಗುತ್ತದೆ. ಕುವೆಂಪು ವಿವಿಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ನೌಕರರಿದ್ದಾರೆ. ವಿದ್ಯಾರ್ಥಿಗಳಿಂದ ಪಡೆದ ಶುಲ್ಕದಲ್ಲಿ ಅರೆಕಾಲಿಕ ಉದ್ಯೋಗಿಗಳಿಗೆ ವೇತನ ಬಳಸಿಕೊಳ್ಳುತ್ತಾರೆ ಎಂದರೆ ಕುವೆಂಪು ವಿವಿ ಸ್ಥಿತಿ ಎಲ್ಲಿಗೆ ಬಂದಿದೆ ಎಂದು ಅರ್ಥವಾಗುತ್ತದೆ ಎಂದರು.
ರಾಜ್ಯ ಸರ್ಕಾರ ಈಗ ಮತ್ತೊಂದು ನಿರ್ಧಾರ ಕೈಗೊಂಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ಸ್ಥಾಪಿಸಲು ಹೊರಟಿದೆ. ಈ ವಿವಿಗೆ ಮುಖ್ಯಮಂತ್ರಿಗಳು ಕುಲಾಧಿಪತಿಗಳಾಗಿರಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಇದು ಎಷ್ಟರಮಟ್ಟಿಗೆ ಸರಿಯೋ ಅರ್ಥವಾಗುತ್ತಿಲ್ಲ. ಬಹುಶಃ ರಾಜ್ಯಪಾಲರೇ ಕುಲಪತಿಗಳಾಗಬೇಕು ಎಂಬ ಈಗಿರುವ ನಿಯಮದಿಂದ ರಾಜ್ಯ ಸರ್ಕಾರ ಆತಂಕಗೊಂಡಂತೆ ಕಾಣುತ್ತದೆ. ಕೇಂದ್ರದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿಯೇ ಬರುತ್ತದೆ. ಹಾಗಾಗಿ ಅವರ ಪಕ್ಷದವರೇ ರಾಜ್ಯಪಾಲರಾಗುತ್ತಾರೆ ಎಂಬ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ, ಅವರಿಗೆ ನೆನಪಿರಲಿ, ರಾಜ್ಯದಲ್ಲಿಯೂ ಕೂಡ ಬಿಜೆಪಿ ಸರ್ಕಾರ ಬರುತ್ತದೆ ಎಂದರು.
ಸಚಿವ ಮಧು ಬಂಗಾರಪ್ಪ ಅವರು ಸಂಸದರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ ಅರುಣ್, ರಾಜ್ಯ ಹಾಗೂ ಜಿಲ್ಲೆಯ ಪಕ್ಷದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಒಂದು ಶಿಸ್ತು ಇದೆ. ಆ ಶಿಸ್ತಿನ ಪ್ರಕಾರವೇ ನಡೆಯುತ್ತದೆ. ಗೊಂದಲಗಳಿದ್ದರೆ ಹಿರಿಯರು ಅದನ್ನು ಸರಿಪಡಿಸುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಲತೇಶ್, ಅಣ್ಣಪ್ಪ ಕೆ.ವಿ., ಚಂದ್ರಶೇಖರ್, ಇದ್ದರು.