ಶಿವಮೊಗ್ಗ : ಜನವರಿ 20 :: ಸಮಾಜವಾದಿ ಚಿಂತಕ, ಮುತ್ಸದ್ದಿ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ಹರ್ಷಿವೆನಿಸುತ್ತದೆ ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಅವರು ಹೇಳಿದರು.
ಅವರು ಇಂದು ನವುಲೆಯ ಕೆಳದಿ ಶಿಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಕಾಗೋಡು ತಿಮ್ಮಪ್ಪನವರು ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸುವಲ್ಲಿ ಮಾಡಿದ ಸೇವೆ, ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅಭಿವೃದ್ಧಿಪಡಿಸುವಲ್ಲಿ ಅವರು ತೋರಿದ ಕಾಳಜಿ ಹಾಗೂ ಶ್ರಮವನ್ನು ಪರಿಗಣಿಸಿ, ಪದವಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದವರು ನುಡಿದರು.
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ೯ನೇ ಘಟಿಕೋತ್ಸವಕ್ಕೆ ಜನವರಿ ೨೨ರಂದು ಇರುವಕ್ಕಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದು, ರಾಜ್ಯದ ಘನತೆವೆತ್ತ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಚಾಲನೆ ನೀಡುವರು ಹಾಗೂ ಪದವಿ ಪೂರ್ಣಗೊಳಿಸಿದ ಪ್ರತಿಭಾವಂತರಿಗೆ ಪದವಿ ಪ್ರದಾನ ಮಾಡಲಿರುವರು. ಈ ಸಮಾರಂಭದಲ್ಲಿ ರಾಜ್ಯ ಕೃಷಿ ಮತ್ತು ತೋಟಗಾರಿಕೆ ಸಚಿವ ಹಾಗೂ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳಾಗಿರುವ ಎಸ್.ಚೆಲುವರಾಯಸ್ವಾಮಿ ಅವರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರ ಮತ್ತು ರತನ್ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ, ಬೆಂಗಳೂರು ಒಂಬತ್ತನೇ ಘಟಿಕೋತ್ಸವ ಭಾಷಣ ಮಾಡುವರು ಎಂದರು.
ಈ ಘಟಕೋತ್ಸವದಲ್ಲಿ ೯೯೪ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ೭೯೩ವಿದ್ಯಾರ್ಥಿಗಳು ಕೃಷಿ ಮತ್ತು ತೋಟಗಾರಿಕೆ, ಅರಣ್ಯ ವಿಭಾಗಗಳಲ್ಲಿ ಪದವಿ ಹಾಗೂ ೧೭೬ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಹಾಗೂ ೨೫ವಿದ್ಯಾರ್ಥಿಗಳು ಪಿ.ಹೆಚ್ಡಿ., ಪದವಿ ಪಡೆಯುತ್ತಿದ್ದಾರೆ. ಇವರಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಡಿದ ೧೭ಪದವಿ ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಅವರಿಗೆ ಒಟ್ಟು ೩೧ಚಿನ್ನದ ಪದಕಗಳನ್ನು ನೀಡಲಾಗುವುದು. ೨೮ಎಂ.ಎಸ್ಸಿ., ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಬಾಜನರಾಗಿದ್ದಾರೆ. ಅವರಿಗೆ ಒಟ್ಟು ೩೩ಚಿನ್ನದ ಪದಕಗಳು ನೀಡಲಾಗುತ್ತಿದೆ. ಅಲ್ಲದೇ ೧೦ಪಿ.ಹೆಚ್ಡಿ., ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯುತ್ತಿದ್ದು, ಅವರಿಗೆ ೧೨ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ೫ತಳಿಗಳ ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿದೆ. ಹಲಸಂದಿಯ ಸಹ್ಯಾದ್ರಿ ಸಮೃದ್ಧಿ, ತಂಬಾಕು-ಸಹ್ಯಾದ್ರಿ ಸ್ವರ್ಣ ತಳಿಗಳು ಪ್ರಮುಖವಾಗಿವೆ. ಇವಲ್ಲದೆ ಸೇಂಗಾ-ಸಹ್ಯಾದ್ರಿ ದುರ್ಗ, ರಾಗಿ ತಳಿ ಹಾಗೂ ಭತ್ತದ ತಳಿಗಳನ್ನು ಬಿಡುಗಡೆಗೆ ಶಿಫಾರಸ್ಸು ಮಾಡಲಾಗಿದೆ ಎಂದ ಅವರು, ವಿಶ್ವವಿದ್ಯಾಲಯದ ಭತ್ತ, ಹೆಸರು, ರಾಗಿ, ನೆಲಗಡಲೆ ಮತ್ತು ತಂಬಾಕಿನ ಐದು ಹೊಸ ತಳಿಗಳನ್ನು ಸಮಿತಿಯಿಂದ ಬಿಡುಗಡೆಗೊಳಿಸಲು ಅನುಮೋದಿಸಲಾಗಿದೆ ಎಂದರು.
ಮೆಣಸಿನ ಕಾಯಿಯಲ್ಲಿ ಡಬಲ್ ಹ್ಯಾಪ್ಲಾಯ್ಡ್ಗಳ ಉತ್ಪಾದನೆಗೆ ಇನ್ವಿಟ್ರೋ ಆಂಡ್ರೋಜೆನೆಸಿಸ್ ವಿಧಾನ ಮತ್ತು ಸೇಂಗಾ ಸುಲಿಯುವ ಯಂತ್ರ ಸೇರಿದಂತೆ ಒಟ್ಟು ೨ಪೇಟೆಂಟ್ಗಳನ್ನು ಪಡೆಯಲಾಗಿದೆ. ತಳಿ ಅಭಿವೃದ್ಧಿ, ಬೆಳೆ ಉತ್ಪಾದನೆ, ಸಸ್ಯಸಂರಕ್ಷಣೆ, ತೋಟಗಾರಿಕೆ ಮತ್ತು ಯಾಂತ್ರೀಕೃತ ಬೇಸಾಯಗಳಲ್ಲಿ ೯ತಾಂತ್ರಿಕತೆಗಳನ್ನು ಸುಧಾರಿತ ಬೇಸಾಯ ಪದ್ದತಿಗಳ ಕೈಪಿಡಿಗೆ ಸೇರಿಸಲಾಗಿದೆ. ಅಲ್ಲದೇ ೧೮ ತಾಂತ್ರಿಕತೆಗಳನ್ನು ರೈತರ ಜಮೀನಿನಲ್ಲಿ ಕ್ಷೇತ್ರ ಪ್ರಯೋಗಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ವಿವಿ ವ್ಯಾಪ್ತಿಯ ೭ಜಿಲ್ಲೆಗಳ ೨೮ಅತ್ಯುತ್ತಮ ರೈತರು ಹಾಗೂ ರೈತ ಮಹಿಳೆಯರನ್ನು ಗುರುತಿಸಿ, ಗೌರವಿಸಲಾಗಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು ೩೦೦ ರೈತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸುಮಾರು ೧೩,೦೦೦ರೈತರು, ಯುವಜನರಿಗೆ ಎರೆಹುಳು ಗೊಬ್ಬರ ಉತ್ಪಾದನೆ, ಸಮಗ್ರ ಕೃಷಿ ಪದ್ದತಿ, ಜೇನು ಕೃಷಿ, ಕುರಿ ಮತ್ತು ಮೇಕೆ ಸಾಕಾಣಿಕೆ, ಕಾಂಪೋಸ್ಟ್ ತಯಾರಿಕೆ ವಿಷಯಗಳಲ್ಲಿ ತರಬೇತಿ ನೀಡಲಾಗಿದೆ. ಇದೇ ಅವಧಿಯಲ್ಲಿ ೨೮ತಂತ್ರಜ್ಞಾನಾಧಾರಿತ ಪರಿಶೀಲನಾ ಪ್ರಯೋಗಗಳನ್ನು ೮೭ರೈತರ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಪರೀಕ್ಷೆಯಲ್ಲಿ ವಿವಿಯ ೫ವಿದ್ಯಾರ್ಥಿಗಳು ಕೃಷಿ ವಿಜ್ಞಾನಿಗಳಾಗಿ , ಓರ್ವ ವಿದ್ಯಾರ್ಥಿ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾದ್ಯಾಪಕರಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದ ಸಂತೋಷವೆನಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ನಿರ್ದೇಶಕ ಡಾ|| ಹೇಮ್ಲಾನಾಯ್ಕ್, ವಿಸ್ತರಣಾ ನಿರ್ದೇಶಕ ಡಾ.ಕೆ.ಟಿ.ಗುರುಮೂರ್ತಿ, ಕುಲಸಚಿವರ ಡಾ|| ಶಶಿಧರ್, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ|| ನಾರಾಯಣ ಎಸ್.ಮಾವರ್ಕರ್, ಸಂಶೋಧನಾ ನಿರ್ದೇಶಕ ಡಾ|| ದುಶ್ಯಂತ್ ಮತ್ತು ಗ್ರಂಥಪಾಲರ ಶಿವಣ್ಣ ಇವರು ಉಪಸ್ಥಿತರಿದ್ದರು.