ಶಿವಮೊಗ್ಗ ಜ.15:: ಶಿವಮೊಗ್ಗ ನಗರದ ವಿವಿಧೆಡೆ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ಮಾರಣಾಂತಿಕ ಹಲ್ಲೆ ಖಂಡಿಸಿ ಗಾಂಧಿ ಬಜಾರ್ ವರ್ತಕರ ಸಂಘದ ವತಿಯಿಂದ ಇಂದು ತಮ್ಮ ಮಳಿಗೆಗಳನ್ನು ಬಂದ್ ಮಾಡಿ ವಹಿವಾಟು ನಿಲ್ಲಿಸಿ ಗಾಂಧಿ ಬಜಾರ್ ನಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ಎಸ್ಪಿಗೆ ಮನವಿ ಸಲ್ಲಿಸಲಾಯಿತು.
ನಿನ್ನೆ ಸಂಜೆ 6 ಗಂಟೆಗೆ ನಾಗಪ್ಪ ಕಾಂಪ್ಲೆಕ್ಸ್ ಕಚೋರಿ ವ್ಯಾಪಾರಿಯಾದ ಹೀರಾಲಾಲ್ ಸೆನ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿಸಿದರು.
ಪ್ರತಿನಿತ್ಯ ಗಾಂಧಿ ಬಜಾರ್ ನ ಚಿನ್ನ ಬೆಳ್ಳಿ ಮತ್ತು ಇತರ ಅಂಗಡಿಗಳಲ್ಲಿ ನಡೆಯುತ್ತಿರುವ ಕಳ್ಳತನಗಳ ಬಗ್ಗೆ ಕ್ರಮ ಕೈಗೊಳ್ಳಬೇಕು. ಹಾಗೂ ಪದೇ ಪದೇ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ಹಲ್ಲೆಯಿಂದ ವಿವಿಧೆಡೆಗಳಿಂದ ಬರುವ ಗ್ರಾಹಕರಲ್ಲಿ ಆತಂಕ ಸೃಷ್ಠಿಯಾಗಿದೆ. 30-35 ವರ್ಷಗಳಿಂದ ಗಾಂಧಿ ಬಜಾರ್ ನಲ್ಲಿ ಉತ್ತಮವಾದ ವ್ಯಾಪಾರ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಕೆಲವು ವರ್ಷಗಳಿಂದ ವ್ಯಾಪಾರ ಇಳಿಮುಖವಾಗಿದೆ. ಮಳಿಗೆಗಳ ಬಾಡಿಗೆ ಮತ್ತು ಅಡ್ವಾನ್ಸ್ ಹೆಚ್ಚಾಗಿದ್ದು, ವ್ಯಾಪಾರ ಕೂಡ ಕಡಿಮೆಯಾಗಿರುವುದರಿಂದ ವ್ಯಾಪಾರಿಗಳು ಜೀವ ನಡೆಸುವುದು ಕಷ್ಟವಾಗಿದೆ. ಫುಟ್ಪಾತ್ ವ್ಯಾಪಾರಿಗಳು ಹಾಗೂ ತಳ್ಳುವ ಗಾಡಿಗಳಿಂದ ತೊಂದರೆಯಾಗುತ್ತಿದ್ದು, ಗ್ರಾಹಕರು ಫುಟ್ಪಾತ್ ವ್ಯಾಪಾರಿಗಳನ್ನು ದಾಟಿ ಅಂಗಡಿಯೊಳಗೆ ಬರುವುದು ಕಷ್ಟವಾಗಿದೆ. ಗಾಂಜಾ ಮತ್ತು ಮಾದಕ ವಸ್ತುಗಳನ್ನು ಸೇವಿಸಿದ ಕೆಲವು ವ್ಯಕ್ತಿಗಳು ವ್ಯಾಪಾರಿಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಗಾಂಧಿ ಬಜಾರ್ ನಲ್ಲಿ ಪೊಲೀಸ್ ಉಪಠಾಣೆ ಸ್ಥಾಪಿಸಬೇಕು. ಹಾಗೂ ನಮ್ಮೆಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದೆ.
ಅಲ್ಲದೇ ನಿನ್ನೆ ನಡೆದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ದೊಡ್ಡ ಮಟ್ಟದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ನಿನ್ನೆಯ ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಇನ್ನೂ ಮೂವರು ಆರೋಪಿಗಳನ್ನು ಕೂಡ ಬಂಧಿಸಲಾಗುವುದು. ಯಾರೂ ಆತಂಕಪಡುವುದು ಬೇಡ. ಘಟನೆ ನಡೆದ ತಕ್ಷಣ ಪೊಲೀಸರ ಗಮನಕ್ಕೆ ತನ್ನಿ ಎಂದರು.
ಈ ಸಂದರ್ಭದಲ್ಲಿ ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷ ದಿನಕರ್, ಮೊದಲಾದವರು ಇದ್ದರು.