ಶಿವಮೊಗ್ಗ, ಜ. 10
ಮಂಗನ ಕಾಯಿಲೆ(ಕೆಎಫ್ಡಿ) ಕುರಿತು ಎಲ್ಲ ಪಂಚಾಯತ್ಗಳಲ್ಲಿ ಅರಿವು ಮೂಡಿಸಬೇಕು. ಹಾಗೂ ಮಲೆನಾಡಿನ ಭಾಗದಲ್ಲಿ ಜನರು ಕಾಡಿಗೆ ಹೋಗುವ ವೇಳೆ ಉಣ್ಣೆಗಳಿಂದ ರಕ್ಷಣೆ ಪಡೆಯಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಕೆಎಫ್ಡಿ ಪ್ರಕರಣಗಳು ವರದಿಯಾಗಿಲ್ಲ. ಆದರೆ ರೋಗ ಲಕ್ಷಣಗಳಿದ್ದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ ಈ ನಾಲ್ಕು ತಾಲ್ಲೂಕುಗಳಲ್ಲಿ ಇಲಾಖೆಯಿಂದ ಡೇಪಾ ತೈಲ ನೀಡಲಾಗಿದೆ. ಸಾರ್ವಜನಿಕರು ಕಾಡಿಗೆ ಹೋಗುವ ಮುನ್ನ ಇದನ್ನು ಕೈ ಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು. ಹಾಗೂ ಪಶುಸಂಗೋಪನೆ ಇಲಾಖೆಯಿಂದ ಜಾನುವಾರುಗಳಿಗೆ ಉಣ್ಣೆಯಿಂದ ರಕ್ಷಿಸಿಕೊಳ್ಳಲು ಅಗತ್ಯವಾದ ಲಸಿಕೆಯನ್ನು ನೀಡಬೇಕು ಎಂದು ತಿಳಿಸಿದ ಅವರು ಎಲ್ಲ ಪಂಚಾಯ್ತಿಗಳಲ್ಲಿ ಕೆಎಫ್ಡಿ ಕುರಿತು ಪೋಸ್ಟರ್, ಮಾಹಿತಿ, ಶಿಕ್ಷಣದ ಮೂಲಕ ಅರಿವು ಮೂಡಿಸಬೇಕು ಎಂದರು.
ಡಿಎಸ್ಓ ಡಾ.ನಾಗರಾಜ್ ನಾಯ್ಕ್ ಮಾತನಾಡಿ, ಕಾಡಿನಲ್ಲಿರುವ ಸೋಂಕು ಪೀಡಿತ ಉಣ್ಣೆಗಳು ಕಚ್ಚುವುದರಿಂದ ಮಂಗನ ಕಾಯಿಲೆ ಬರುತ್ತದೆ. ಹಾಗೂ ಕಾಡಿನಲ್ಲಿ ಮಂಗಗಳು ಸಾಯುವುದೇ ಈ ಕಾಯಿಲೆಯ ಲಕ್ಷಣವಾಗಿದೆ. ಆದ್ದರಿಂದ ಮಂಗ ಸತ್ತಿರುವುದು ಕಂಡ ಬಂದರೆ ಆರೋಗ್ಯ ಇಲಾಖೆ ಅಥವಾ ಸ್ಥಳೀಯ ಗ್ರಾ.ಪಂ, ಅರಣ್ಯ ಇಲಾಖೆಗೆ ತಿಳಿಸಬೇಕು. ಹಾಗೂ ಆ ಪ್ರದೇಶಕ್ಕೆ ಸಾರ್ವಜನಿಕರು ಹೋಗಬಾರದು.
ಇಲಾಖೆಯ ವತಿಯಿಂದ ನೀಡಲಾಗುವ ಡೇಪಾ ತೈಲವನ್ನು ಕೈಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು. ಮಂಗನ ಕಾಯಿಲೆ ಲಕ್ಷಣಗಳಾದ ಜ್ವರ, ವಿಪರೀತ ತಲೆನೋವು, ಕಣ್ಣು ಕೆಂಪಾಗುವುದು, ನಿಶ್ಯಕ್ತಿ, ಇತರೆ ರೋಗ ಲಕ್ಷಣ ಕಂಡು ಬಂದ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು.
2024 ರಲ್ಲಿ ಮಂಗನ ಕಾಯಿಲೆ 12215 ಪರೀಕ್ಷೆ ನಡೆಸಲಾಗಿದ್ದು 63 ಪಾಸಿಟಿವ್ ಪ್ರಕರಣ ದಾಖಲಾಗಿ, 01 ಸಾವು ಸಂಭವಿಸಿತ್ತು. ಪ್ರಸಕ್ತ ಸಾಲಿನಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ.
ಜಿಲ್ಲೆಯಲ್ಲಿ ನಾಯಿಕಡಿತ ಮತ್ತು ರೇಬಿಸ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೇಬಿಸ್ ಬಂದ ಮೇಲೆ ಯಾವುದೇ ಚಿಕಿತ್ಸೆ ಇಲ್ಲದ ಕಾರಣ ಮುಂಜಾಗ್ರತಾ ಕ್ರಮ ಅತ್ಯಗತ್ಯ.
ಜಿಲ್ಲೆಯಲ್ಲಿ 2024 ರಲ್ಲಿ 26950 ನಾಯಿಕಡಿತ ಪ್ರಕರಣಗಳಿದ್ದು, 4 ಸಾವು ಸಂಭವಿಸಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ಹಾಗೂ ಸಾರ್ವಜನಿಕರು ತಮ್ಮ ಸಾಕು ನಾಯಿ, ಪ್ರಾಣಿಗಳಿಗೆ ಲಸಿಕೆ ಹಾಕಿಸಬೇಕು. ನಾಯಿ ಇತರೆ ಸಾಕು ಪ್ರಾಣಿ ಕಡಿತದ ತಕ್ಷಣ ಆಸ್ಪತ್ರೆಗೆ ತೆರಳಿ ಆಂಟಿ ರೇಬಿಸ್ ಲಸಿಕೆ ಮತ್ತು ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು.
ಜಿಲ್ಲೆಯಲ್ಲಿ ಹಾವು ಕಡಿತ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಹಾವು ಕಡಿತದಿಂದ ರಕ್ಷಣೆ ಪಡೆಯುವುದು, ಹಾವು ಕಡಿತದ ನಂತರ ಅನುಸರಿಸಬೇಕಾದ ಕ್ರಮಗಳು, ಮುನ್ನೆಚ್ಚರಿಕೆ ಚಿಕಿತ್ಸೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿಗಳು ಮಾತನಾಡಿ, ನಾಯಿ ಕಡಿತದಿಂದಾಗುವ ಪರಿಣಾಮಗಳ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು. ನಗರ ಪ್ರದೇಶದಲ್ಲಿ ಪ್ರದೇಶವಾರು ಸ್ಥಳೀಯ ಸಂಸ್ಥೆಗಳು ಬಿಡಾಡಿ ನಾಯಿಗಳ ಸಂತಾನಹರಣ ಶಸ್ತçಚಿಕಿತ್ಸೆ ಹಾಗೂ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ವಹಿಸಬೇಕು. ಹಾಗೂ ಗ್ರಾಮೀಣ ಭಾಗದಲ್ಲಿಯೂ ನಾಯಿ ಮತ್ತು ಸಾಕು ನಾಯಿ ಕಡಿತದ ಕುರಿತು ಜಾಗೃತಿ ಮೂಡಿಸಬೇಕೆಂದರು.
ಡಬ್ಲುö್ಯಹೆಚ್ಓ ಕನ್ಸಲೆಂಟ್ ಡಾ.ಹರ್ಷಿತ್, ಮಾತನಾಡಿ ಜಿಲ್ಲೆಯಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಎಂಆರ್ 1 ಮತ್ತು ಎಂಆರ್ 2 ಲಸಿಕೆ ಕೆಲವೆಡೆ ಕಡಿಮೆ ಪ್ರಗತಿ ಸಾಧಿಸಲಾಗಿದೆ. 2024 ರಲ್ಲಿ 304 ಜ್ವರ-ದದ್ದು ಪ್ರಕಣ ದಾಖಲಾಗಿದ್ದು 5 ಮೀಸಲ್ಸ್ ಮತ್ತು 6 ರುಬೆಲ್ಲಾ ಪ್ರಕರಣ ದಾಖಲಾಗಿತ್ತು ಎಂದು ಮಾಹಿತಿ ನೀಡಿದರು.
ಆರ್ಸಿಹೆಚ್ ಅಧಿಕಾರಿ ಡಾ.ಮಲ್ಲಪ್ಪ ಮಾತನಾಡಿ, ‘0’ ಡೋಸ್ ಮಕ್ಕಳ ಅಂದರೆ ಒಂದು ವರ್ಷದೊಳಗೆ ಯಾವುದೇ ಲಸಿಕೆ ಪಡೆಯದ ಮಕ್ಕಳಿಗೆ ಲಸಿಕೆ ನಿಡಲು ಡಿ.23 ರಿಂದ 31 ರವರೆಗೆ ವಿಶೇಷ ಅಭಿಯಾನ ಕೈಗೊಳ್ಳಲಾಗಿತ್ತು ಎಂದರು.
ಜಿಲ್ಲಾಧಿಕಾರಿಗಳು, ಸಾರ್ವತ್ರಿಕ ಲಸಿಕಾಕರಣದಲ್ಲಿ ಶೇ.100 ಗುರಿ ಸಾಧಿಸಬೇಕು. ಎಂಆರ್1 ಮತ್ತು 2 ಡೋಸ್ ಲಸಿಕೆ ಬಿಟ್ಟು ಹೋದ ಮಕ್ಕಳಿಗೆ ತಕ್ಷಣ ಲಸಿಕೆ ನೀಡಬೇಕು. ಲಸಿಕೆ ಬಿಟ್ಟು ಹೋದವರನ್ನು ಗುರುತಿಸಲು ನಗರ ಪ್ರದೇಶದಲ್ಲಿ ಸರ್ವೇ ಕೈಗೊಳ್ಳಬೇಕು. ವಿವಿಧ ಇಲಾಖೆಗಳ ಸಹಕಾರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಕಾರ್ಮಿಕ ಅಧಿಕಾರಿಗಳ ಸಹಕಾರದಿಂದ ತಾಲ್ಲೂಕುವಾರು ವಲಸಿಗರ ಮಾಹಿತಿ ಪಡೆದು ಅವರಿಗೂ ಲಸಿಕೆ ಹಾಕಬೇಕು. ಹೆಚ್ಎಂಐಎಸ್ ಪೋರ್ಟಲ್ನಲ್ಲಿ ನಿಯಮಿತವಾಗಿ ಡೇಟಾ ಅಪ್ಡೇಟ್ ಆಗಬೇಕೆಂದು ಸೂಚನೆ ನೀಡಿದರು.
ಹೆಚ್ಎಂಪಿವಿ ನಿಯಂತ್ರಣ ಕ್ರಮಕ್ಕೆ ಸೂಚನೆ : ಹ್ಯೂಮನ್ ಮೆಟಾನ್ಯೂಮೋ ವೈರಸ್ ರೋಗದ ಬಗ್ಗೆ ಭಯ ಬೇಡ. ಆದರೆ ಕೋವಿಡ್ ಸಮಯದಲ್ಲಿ ಅನುಸರಿಸಲಾದ ಮುಂಜಾಗೃತಾ ಕ್ರಮಗಳಾದ ಸ್ಯಾನಿಟೈಸರ್, ಮಾಸ್ಕ್, ಸ್ವಚ್ಚತೆ ಬಗ್ಗೆ ಗಮನ ನೀಡಬೇಕು. ಐಎಲ್ಐ ಮತ್ತು ಎಸ್ಎಎಆರ್ಐ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಜೊತೆಗೆ ಶೀತ, ಜ್ವರದಂತಹ ಲಕ್ಷಣಗಳಿಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕೆಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕೋಟ್ಪಾ ಕಾಯ್ದೆಯಡಿ 48 ತಂಬಾಕು ದಾಳಿ ನಡೆಸಿ, 2140 ಪ್ರಕರಣ ದಾಖಲಿಸಿ, ರೂ.179280 ದಂಡ ಸಂಗ್ರಹಿಸಲಾಗಿದೆ ಎಂದರು.
ಜಿಲ್ಲಾ ಕ್ಷಯ/ಹೆಚ್ಐವಿ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಬಿ ಪಿ ಮಾತನಾಡಿ, ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ನಿಯಮಾನುಸಾರ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಕ್ಷಯರೋಗ ಮುಕ್ತ 100 ದಿನಗಳ ಅಭಿಯಾನವನ್ನು ದಿ: 07-12-2024 ರಿಂದ ಜಿಲ್ಲೆಯಾದ್ಯಂತ ಹಮ್ಮಿಕೊಂಡಿದ್ದು, ಜಾಗೃತಿ, ಪರೀಕ್ಷೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಕ್ಷಯರೋಗದ ಪರೀಕಷೆ ಮತ್ತು ಚಿಕಿತ್ಸೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ.
ಹೆಚ್ಐವಿ ನಿರ್ಮೂಲನೆ ಮಾಡಲು ಸರ್ಕಾರ ಹಾಗೂ ಎನ್ಜಿಓ ಗಳು ಶ್ರಮ ವಹಿಸುತ್ತಿವೆ. ಹೆಚ್ಐವಿ ಕಾಯ್ದೆ 2017 ಜಾರಿಗೆ ಬಂದಿದ್ದು, ಈ ಕಾಯ್ದೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 200 ಹೆಚ್ಐವಿ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 196 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮರಣ ಹೊಂದಿರುತ್ತಾರೆAದು ತಿಳಿಸಿದರು.
ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಸುಜಾತ, ಕೆ ಆರ್, ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ, ಡಿಹೆಚ್ಓ ಡಾ.ನಟರಾಜ್, ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ಸಿದ್ದನಗೌಡ ಪಾಟಿಲ್, ವಿವಿಧ ಜಿಲ್ಲಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.