ಡಿಎಸ್ಎಸ್ ದೂರಿಗೆ ಸ್ಪಂದಿಸಿದ ದೊಡ್ಡಪೇಟೆ ಪಿಐ ರವಿಪಾಟೀಲ್ ಟೀಮ್/ ಪ್ರಭಾವಿಗಳಿಗೆ ಮಣಿಯಿತೇ ತುಂಗಾನಗರದ ಖಡಕ್ ಪಿಐ ಗುರುರಾಜ್ ಟೀಮ್
ಹುಡುಕಾಟದ ವರದಿ
ಶಿವಮೊಗ್ಗ, ಜ.8:
ಶಿವಮೊಗ್ಗ ನಗರದಲ್ಲಿ ಹೆಚ್ಚುತ್ತಿರುವ ಓಸಿ ಹಾಗೂ ಇಸ್ಪೀಟ್ ದಂಧೆಯ ಬಗ್ಗೆ ಸಾಕಷ್ಟು ಆರೋಪಗಳು ನಿರಂತರವಾಗಿ ಕೇಳಿಬಂದಿವೆ. “ತುಂಗಾತರಂಗ’ ಪತ್ರಿಕೆ ಸೇರಿದಂತೆ ಮಾಧ್ಯಮಗಳು ಸಹ ಈ ಅಕ್ರಮ ದಂಧೆಗಳ ಕುರಿತಂತೆ ನಿರಂತರವಾಗಿ ವರದಿಗಳನ್ನು ನೀಡುತ್ತಲೇ ಬಂದಿವೆ. ಪೊಲೀಸರ ಒಂದಿಷ್ಟು ಹಿಡಿತ ಕಂಡುಬರುತ್ತಿದೆ. ಆದರೂ ಸಹ ಬಹಳಷ್ಟು ಕಡೆ ಪ್ರಭಾವಿಗಳ ದೊಡ್ಡವರ ಮರ್ಜಿಗೆ ಖಡಕ್ ಎನಿಸಿಕೊಂಡ ಅಧಿಕಾರಿಗಳೇ ಮೌನಿಯಾಗಿದ್ದಾರಾ? ಅಥವಾ ಸುಮ್ಮನಿದ್ದಾರಾ ಎಂಬ ಪ್ರಶ್ನೆ ಗಂಭೀರವಾಗಿ ಕೇಳಿ ಬಂದಿದೆ.
ಇತ್ತೀಚೆಗಷ್ಟೇ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ಸಾಗರ ರಸ್ತೆಯ ಕಾಸ್ಮೊಕ್ಲಬ್, ಮರ್ಚೆಂಟ್ ರಿಕ್ರಿಯೇಶನ್ ಕ್ಲಬ್, ಹಾಗೂ ಗಾರ್ಡನ್ ಏರಿಯಾದ ಭೈರವ ಕ್ಲಬ್‌ನ ಬಗ್ಗೆ ಗಂಭೀರವಾದ ದೂರು ನೀಡಿ ಇಲ್ಲಿ ಬೆಳಗ್ಗೆ ೧೧ ರಿಂದ ರಾತ್ರಿ ೧೧ ರವರೆಗೆ ಭಾರೀ ಪ್ರಮಾಣದ ಹಣಕಟ್ಟಿ ಜೂಜಾಡುವ ಇಸ್ಪೀಟ್ ದಂಧೆ ನಡೆಯುತ್ತಿದೆ. ಹಾಗೆಯೇ ಇದರೊಂದಿಗೆ ಅಲ್ಲಿಯೇ ಓ ಸಿ ವ್ಯವಹಾರ ಸಹ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದರು.
ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿಗಳು ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಮರ್ಚೆಂಟ್ ಹಾಗೂ ಭೈರವ ಕ್ಲಬ್‌ಗಳ ಬಗ್ಗೆ ಕ್ರಮ ಕೈಗೊಳ್ಳಲು ಇನ್ಸ್‌ಸ್ಪೆಕ್ಟರ್ ರವಿ ಪಾಟೀಲ್ ಅವರಿಗೆ ಸೂಚಿಸಿದ್ದರು. ಅಂತೆಯೇ ತುಂಗಾನಗರ ವ್ಯಾಪ್ತಿಯ ಮಹಿಳೆಯರು, ಮಕ್ಕಳು ಸೇರುವ ರಂಜನೆಯ ಉದ್ದೇಶದಿಂದ ಆರಂಭಗೊಂಡಿದ್ದ ಕಾಸ್ಮೊಕ್ಲಬ್ ಬಗ್ಗೆ ಕ್ರಮಕೈಗೊಳ್ಳಲು ಖಡಕ್ ಅಧಿಕಾರಿ ಎಂದೇ ಹೆಸರಾದ ಸಾಕಷ್ಟು ಅಕ್ರಮಗಳನ್ನು ಬಯಲಿಗೆಳೆದ ತುಂಗಾನಗರ ಇನ್ಸ್‌ಸ್ಪೆಕ್ಟರ್ ಗುರುರಾಜ್ ರವರ ತಂಡಕ್ಕೆ ತಿಳಿಸಿದ್ದರು.
ಕಳೆದ ನಾಲ್ಕು ದಿನಗಳಿಂದ ಮರ್ಚೆಂಟ್ ಹಾಗೂ ಭೈರವ ಕ್ಲಬ್‌ಗಳ ಆಟಗಳು ಸಂಪೂರ್ಣ ನಿಂತಿವೆ. ಆದರೆ ಕಾಸ್ಮೋದ ಪ್ರಭಾವಿಗಳ ಮಾತಿಗೆ ಗುರುರಾಜ್ ತಂಡ ಬಗ್ಗೀತೇ? ಇಲ್ಲಿ ಇಸ್ಪೀಟ್ ದಂಧೆ ನಡೆಸುವ ತಂಡದ ಬಹಳಷ್ಟು ಪ್ರಮುಖರು ಓಸಿ ಜೂಜಿನಲ್ಲೂ ಸಖತ್ ಫೇಮಸ್ ಎಂಬ ಆರೋಪ ಗಂಭೀರವಾಗಿ ಕೇಳಿಬಂದಿದೆ.
ರಾಜ್ಯ ಉಚ್ಚ ನ್ಯಾಯಾಲಯದ ಎನ್ ಸಿ ೨೦೨೩: ಕೆಸಿಎಚ್ ೩೭೪೯೦: ಡಬ್ಲ್ಯೂಪಿ ನಂ. ೨೨೩೧೬-೨೦೨೩ ರ ಅನ್ವಯ ಯಾವುದೇ ಕ್ಲಬ್‌ಗಳು ರಂಜನಾತ್ಮಕವಾಗಿ, ಮನರಂಜನೆ ಉದ್ದೇಶದಿಂದ ರಮ್ಮಿ ಅಂತಹ ಇಸ್ಪೀಟ್ ಆಡಿಸಲು ಅವಕಾಶ ನೀಡಿದೆ. ಆದರೆ ಯಾವುದೇ ಕಾರಣಕ್ಕೂ ಹಣದ ಪ್ರಮಾಣ ಮಿತಿಮೀರುವಂತಿಲ್ಲ. ಹಾಗೂ ಮನರಂಜನೆ ಉದ್ದೇಶದಿಂದ ಈ ಕ್ರೀಡೆಯನ್ನು ಮಾತ್ರ ಬಳಸಿಕೊಳ್ಳಬೇಕು ಎಂದು ಸೂಚಿಸಿದೆ.
ಆದರೆ ಪತ್ರಿಕೆ ಮೂಲಗಳ ಪ್ರಕಾರ ಈ ಕಾಸ್ಮೊಕ್ಲಬ್‌ನಲ್ಲಿ High stakes ಆಟ ಆಡುತ್ತಿದ್ದು ೪, ೮, ೧೬ ಸಾವಿರದಷ್ಟು ಹಣ ಪ್ರತಿ ಆಟಕ್ಕೆ ಕಟ್ಟಿ ಆಡುತ್ತಾರೆಂದು ಗಂಭೀರವಾಗಿ ಆರೋಪಿಸಲಾಗಿದೆ. ಬೆಳಗ್ಗೆ ೧೧:೦೦ ರಿಂದ ಹಲವು ಟೇಬಲ್‌ಗಳು ತುಂಬಿರುತ್ತವೆ. ಮಧ್ಯಾಹ್ನ ಸಖತ್ ಬಿಜಿ ಎಂದು ಹೇಳಲಾಗುತ್ತಿದೆ. ಮತ್ತೊಂದು ಮೂಲಗಳ ಪ್ರಕಾರ ಈ ಇಸ್ಪೀಟ್ ಆಟವನ್ನು ಆಡಿಸಲು ಕಾಸ್ಮೋಕ್ಲಬ್ ಬೇರೆಯವರಿಗೆ ಗುತ್ತಿಗೆ ನೀಡಿದ್ದು ಅದರ ವ್ಯವಹಾರವನ್ನು ಒಂದಿಷ್ಟು ಜನ ಮಾಮೂಲಿಯನ್ನಾಗಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಈ ಕ್ಲಬ್‌ನ ಇಸ್ಪೀಟ್ ಅಡ್ಡೆಯನ್ನು ದತ್ತು ಪಡೆದಿರುವವರಲ್ಲಿ ಕೆಲವರು ಈಗಾಗಲೇ ಹಲವು ಅಕ್ರಮ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು ಎನ್ನುವ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಒಟ್ಟಾರೆ ಭಗವಂತ ದತ್ತ ದೇವೋಭವ ಇಲ್ಲಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಇದು ಕಣ್ಣಾರೆ ಕಂಡ ಹಲವರ ಅಭಿಪ್ರಾಯ.
ಒಬ್ಬರಿಗೊಂದು ನ್ಯಾಯ, ಮತ್ತೊಬ್ಬರಿಗೆ ಅನ್ಯಾಯನಾ? ಅಕ್ರಮವನ್ನು ಹತ್ತಿಕ್ಕಲು ಮೆಟ್ಟಿನಿಲ್ಲಲು, ನಿಲ್ಲಿಸಲು, ಒಬ್ಬೊಬ್ಬರಿಗೆ ಒಂದೊಂದು ನ್ಯಾಯವಾದರೆ ಈ ಕಾನೂನು, ರಕ್ಷಣೆ, ಆಡಳಿತ ಯಾವುದಕ್ಕೆ ಪ್ರಯೋಜನ ಅಲ್ಲವೇ? ಎಲ್ಲರಿಗೂ ಸಮಾನವಾದ ಅವಕಾಶಗಳಲ್ಲಿ ಆದರೆ ಕೆಲವರಿಗೆ ಮಾತ್ರ ಪ್ರಮುಖರು ಎಂಬ ಕಾರಣಕ್ಕೆ ಮಣೆ ಹಾಕಿದರೆ ಇಲಾಖೆಯ ಗೌರವಕ್ಕೆ ಧಕ್ಕೆ ಬರುವುದಿಲ್ಲವೇ? ಒಟ್ಟಾರೆ ಶಿವಮೊಗ್ಗದ ಇಂತಹ ಅಕ್ರಮ ದಂಧೆಗಳಿಗೆ ಶಾಶ್ವತ ತಿಲಾಂಜಲಿ ಇಡುವುದು ಅಗತ್ಯ. ಎಂಬುದು ಸಾರ್ವಜನಿಕ ಒತ್ತಾಯ.
ಎಸ್ಪಿ ರಿಯಲೀ ಗ್ರೇಟ್ !
ಶಿವಮೊಗ್ಗ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ಕುಮಾರ್ ರವರು ಕೈಗೊಳ್ಳುವ ಸಾಕಷ್ಟು ಕಾರ್ಯಕ್ರಮಗಳು ತನಿಖೆಗಳು ಜನಮಾನಸದಲ್ಲಿ ಪ್ರಶಂಸನೀಯವಾಗಿವೆ. ವಿಶೇಷವಾಗಿ ಜಾತಿ,ಧರ್ಮಗಳ ನಡುವಿನ ಗೊಂದಲಗಳಿಗೆ ಸಹಭಾಳ್ವೆಯ ಬೀಜ ಭಿತ್ತಿದ ಎಸ್ಪಿಯವರು ರೌಡಿಗಳ ವಿಷಯದಲ್ಲಿ ಅವರನ್ನು ಸೆದೆಬಡಿಯುವ ವಿಚಾರದಲ್ಲಿ ಯಾವುದೇ ಮುಲಾಜುಗಳನ್ನು ತೋರದೇ ಕ್ರಮ ಕೈಗೊಂಡದ್ದು, ನಿಜಕ್ಕೂ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸ್ ಇಲಾಖೆಯನ್ನು ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿರಂತರವಾಗಿ ಸರ್ವಜನರ ಸ್ನೇಹಿಯಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಗಾಂಜಾ ಹಾಗೂ ಖಾಲಿ ಬಡಾವಣೆಗಳ ಅಕ್ರಮ ಚಟುವಟಿಕೆಗಳಿಗೆ ತಂಡಗಳನ್ನು ನಿರಂತರವಾಗಿ ಕಲಿಸಿ ಶಾಶ್ವತವಾದ ಪೊಲೀಸ್ ಬೆದರಿಕೆಯನ್ನು ಪೆಡ್ಡೆಗಳ ಮನದಲ್ಲಿ ಹುಟ್ಟಿಸಿರುವುದು ವಿಶೇಷ.
ಈಗ ಹೆಚ್ಚುತ್ತಿರುವ ಓಸಿ ಹಾಗೂ ಇಸ್ಪೀಟ್ ದಂಧೆಗಳು ಶಿವಮೊಗ್ಗ ಸೇರಿದಂತೆ ಹಲವು ಜೈಲುಗಳಲ್ಲಿರುವ ಮತ್ತು ಹೊರಗಿದ್ದು, ನಾನಾ ದೂರು ಹಾಗೂ ವಾರೆಂಟ್ಗಳನ್ನು ಅನುಭವಿಸುತ್ತಿರುವವರಿಗೆ ಇದೊಂದು ಆರ್ಥಿಕ ಮೂಲವಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯ.