ಶಿವಮೊಗ್ಗ: ಚೀನಾದಲ್ಲಿ ಆರಂಭಗೊಂಡ, ಬೆಂಗಳೂರಿನಲ್ಲೂ ಸಹ ಪತ್ತೆಯಾದ ಎಚ್’ಎಂಪಿ ವೈರಸ್ ಶಿವಮೊಗ್ಗದಲ್ಲೂ ಸಹ ಕೆಲವು ತಿಂಗಳುಗಳ ಹಿಂದೆ ಪತ್ತೆಯಾಗಿದೆ ಎಂಬ ವಿಚಾರದಲ್ಲಿ ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಮಕ್ಕಳ ತಜ್ಞ , ವಿಧಾನ ಪರಿಷತ್ ಸದಸ್ಯರೂ ಆಗಿರುವ ಡಾ.ಧನಂಜಯ ಸರ್ಜಿ ಹೇಳಿದ್ದಾರೆ.
ಈ ಕುರಿತಂತೆ ತುಂಗಾ ತರಂಗ ಪತ್ರಿಕೆಯ ಜೊತೆಯಲ್ಲಿ ಮಾತನಾಡಿದ ಡಾ.ಧನಂಜಯ ಸರ್ಜಿ, ಎಚ್’ಎಂಪಿ ಒಂದು ಸಾಮಾನ್ಯ ವೈರಸ್ ಆಗಿದ್ದು, ಇದು ಮಾರಣಾಂತಿಕವಲ್ಲ. ಸಾಮಾನ್ಯ ವೈರಲ್ ಜ್ವರದ ಲಕ್ಷಣಗಳೇ ಇದರಲ್ಲೂ ಸಹ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಆತಂಕಪಡುವ ಅವಶ್ಯತೆಯಿಲ್ಲ ಎಂದು ಸಲಹೆ ನೀಡಿದ್ದಾರೆ.
ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಜ್ವರ ಹಾಗೂ ಶೀತದ ರೀತಿಯಲ್ಲಿಯೇ ಸಾಮಾನ್ಯ ಲಕ್ಷಣಗಳನ್ನು ಪಸರಿಸುವ ಒಂದು ವೈರಸ್ ಆಗಿದೆ. ಎಚ್’ಎಂಪಿ ರೀತಿಯಲ್ಲಿಯೇ ಬಹಳಷ್ಟು ಸಾಮಾನ್ಯ ವೈರಸ್’ಗಳು ಇರುತ್ತವೆ. ಜ್ವರ, ಶೀತ ಬಂದವರಿಗೆ ಪರೀಕ್ಷೆ ಮಾಡಿಸಿದಲ್ಲಿ ಇಂತಹ ಸಾಮಾನ್ಯ ವೈರಸ್’ಗಳು ಪತ್ತೆಯಾಗುತ್ತವೆ. ಅವುಗಳಿಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.
ಕೆಲವು ತಿಂಗಳ ಹಿಂದೆಯೇ ಪತ್ತೆಯಾಗಿತ್ತು
ಇನ್ನು, ಕಳೆದ ಅಕ್ಟೋಬರ್, ನವೆಂಬರ್ ತಿಂಗಳಿನವರೆಗೂ ಶಿವಮೊಗ್ಗದ ಐವರು ಮಕ್ಕಳಲ್ಲಿ ಎಚ್’ಎಂಪಿವಿ ಸೋಂಕು ದೃಢಪಟ್ಟಿತ್ತು. ಸಾಮಾನ್ಯ ಜ್ವರ ಹಾಗೂ ಶೀತದ ಹಿನ್ನೆಲೆಯಲ್ಲಿ ನಮ್ಮ ಆಸ್ಪತ್ರೆಗೆ ಬಂದ ಮಕ್ಕಳಿಗೆ ಪರೀಕ್ಷೆ ನಡೆಸಿದಾಗಿ ವೈರಸ್ ದೃಢಪಟ್ಟಿತ್ತು. ಆದರೆ, ಆ ಮಕ್ಕಳೆಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇದೇನು ಭಯ ಪಡುವ ರೀತಿಯ ಮಾರಣಾಂತಿಕ ವೈರಸ್ ಅಲ್ಲ. ಹೀಗಾಗಿ, ಯಾರೂ ಸಹ ಆತಂಕಪಡುವ ಅವಶ್ಯಕತೆಯೇ ಇಲ್ಲ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದ್ದಾರೆ.
ಚಳಿಗಾಲವಾದ್ದರಿಂದ ನಿಮ್ಮ ಮಕ್ಕಳು ಬೆಚ್ಚಗೆ ಇರುವಂತೆ ಜಾಗ್ರತೆ ವಹಿಸಿ. ನಿಮ್ಮ ಮಕ್ಕಳಿಗೆ ಸ್ವೆಟರ್, ಜಾಕೇಟ್, ಟೋಪಿ, ಸಾಕ್ಸ್ ಹಾಕಿ ಬೆಚ್ಚಗೆ ಇರಿಸಿ. ಹೊರಗಿನ ಆರೋಗ್ಯಕರವಲ್ಲ ತಿಂಡಿ, ತಿನಿಸಿ, ತಂಪು ಪಾನೀಯಗಳಿಂದ ದೂರವಿರಿಸಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಮನೆಯಲ್ಲೇ ತಯಾರಿಸಿದ ಆಹಾರ ಹಾಗೂ ಪಾನೀಯಗಳನ್ನು ಮಕ್ಕಳಿಗೆ ಕೊಡಿ ಎಂದು ಡಾ.ಸರ್ಜಿ ಸಲಹೆ ನೀಡಿದರು.