ಶಿವಮೊಗ್ಗ ಜ.07 ಜಿಲ್ಲೆಗೆ ನಾಲ್ಕು ವರ್ಷಗಳ ಹಿಂದೆ ಮಂಜೂರಾಗಿರುವ ಇಎಸ್‌ಐ ಆಸ್ಪತ್ರೆಯ ನಿರ್ಮಾಣ ಕಾರ್ಯ ಶೀಘ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಕರೋನಾ ನಂತರ ಉದ್ಯಮ ಕ್ಷೇತ್ರ ನಷ್ಟಕ್ಕೆ ಸಿಲುಕಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಣ್ಣ, ಮಧ್ಯಮ ಕೈಗಾರಿಕಾ ಉದ್ಯಮಗಳಿಗೆ ಬಂಡವಾಳಕ್ಕೆ ಉತ್ತೇಜನ, ಸಹಾಯಧನ, ವಿಶೇಷ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಕಾರ್ಮಿಕರಿಗೆ 21 ಸಾವಿರ ರೂ. ವೇತನ ದಾಟಿದ ನಂತರ ಇಎಸ್‌ಐ ಸೌಲಭ್ಯ ಸಿಗುತ್ತಿಲ್ಲ. ತುಂಬಾ ಹಳೇಯ ನಿಯಮ ಆಗಿದ್ದು, ವೈದ್ಯಕೀಯ ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ 40 ಸಾವಿರ ರೂ.ವರೆಗೂ ವೇತನ ಪಡೆಯುವ ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೆಲ ಕಾಯಿಲೆಗಳಿಗೆ ಇಎಸ್‌ಐ ಸೌಲಭ್ಯ ಬರುವುದಿಲ್ಲ. ಹಣ ಪಾವತಿಸಲು ಸೂಚಿಸುತ್ತಾರೆ. ಇಎಸ್‌ಐ ದಾಖಲಾತಿ ನೀಡಿದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಅಗತ್ಯ ವೈದ್ಯಕೀಯ ಸೇವೆ ಸಿಗುವಂತೆ ಆಗಬೇಕು. ಕಾರ್ಮಿಕರು ಹಾಗೂ ಕುಟುಂಬದವರ ಹಿತದೃಷ್ಟಿಯಿಂದ ಅನೇಕ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇಎಸ್‌ಐ ಆಸ್ಪತ್ರೆಗಳಲ್ಲಿ ಮಾರಣಾಂತಿಕ ಕಾಯಿಲೆಗಳಾದ ಹೃದಯ ರೋಗ, ಮಧುಮೇಹ, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ರೋಗಗಳು ಇತ್ಯಾದಿಗಳಿಗೆ ಔಷಧಗಳು ಲಭ್ಯ ಇರುವುದಿಲ್ಲ. ಆದ್ದರಿಂದ ಕೂಡಲೇ ಗಮನಿಸಿ ಔಷಧಗಳು ಲಭ್ಯವಾಗುವಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಕಾರ್ಮಿಕರ ಹಿತದೃಷ್ಟಿಯಿಂದ ಅವಶ್ಯವಿರುವ ಎಲ್ಲ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸಚಿವ ಸಂತೋಷ್ ಲಾಡ್ ಬೇಡಿಕೆಗಳ ಈಡೇರಿಕೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಲಾಯಿತು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ನಿರ್ದೇಶಕರಾದ ಪ್ರದೀಪ್ ವಿ.ಯಲಿ, ಲಕ್ಷ್ಮೀದೇವಿ ಗೋಪಿನಾಥ್, ಬಿ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಜಿ.ಬೆನಕಪ್ಪ ಅವರು ಕನಿಷ್ಟ ವೇತನದ ಬಗ್ಗೆ ಕಾರ್ಮಿಕ ಸಚಿವರ ಗಮನ ಸೆಳೆದರು. ಕಾರ್ಯದರ್ಶಿ ರಾಜೇಶ್ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.
ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್ ಹಾಗೂ ಕಾರ್ಯದರ್ಶಿ ವಿಶ್ವೇಶ್ವರಯ್ಯ ಅವರು ಕಾರ್ಮಿಕರಿಗೆ ಅನುಕೂಲವಾಗುವಂತೆ ವಸತಿಗೃಹ ವಸತಿ ಸಮುಚ್ಚಯ ನಿರ್ಮಾಣದ ಬಗ್ಗೆ ಮಾತನಾಡಿ ಸಚಿವರ ಗಮನ ಸೆಳೆದರು.
ಜವಳಿ ವರ್ತಕರ ಸಂಘದ ಅಧ್ಯಕ್ಷ ಬಿ.ಸುರೇಶ್ ಕುಮಾರ್, ಕಾರ್ಯದರ್ಶಿ ಪ್ರಭಾಕರ್ ಮತ್ತು ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ದೇವರಾಜ್, ಕಾರ್ಯದರ್ಶಿ ಗಿರೀಶ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.