ವಾರದ ಅಂಕಣ- 25
- ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ನಾವು ನಮ್ಮ ನಡುವಿನ ಸ್ಥಿತಿಗತಿಗಳನ್ನು, ನಡೆಯುವ ಘಟನೆಗಳನ್ನು ತಿಳಿದುಕೊಳ್ಳಲು ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳನ್ನು ಬಳಸಿಕೊಳ್ಳುತ್ತೇವೆ. ಮನೋರಂಜನೆಗಾಗಿ ಟಿವಿ ಚಾನೆಲ್ ಗಳನ್ನು, ನಾಟಕಗಳನ್ನು, ನೃತ್ಯ, ಸಂಗೀತ ಸಿನಿಮಾಗಳನ್ನು ವೀಕ್ಷಿಸುವ ಹವ್ಯಾಸವನ್ನು ಸಹಜವಾಗಿ ಹೊಂದಿದ್ದೇವೆ. ಇದರಲ್ಲಿ ನ್ಯೂಸ್ ಚಾನೆಲ್ ಗಳ ಹಾಗೂ ಧಾರಾವಾಹಿಗಳಲ್ಲಿ ನೆಗಿಟೀವ್ ವಿಷಯಗಳೇ ಮುಖ್ಯವಾಗಿರುತ್ತದೆ ಇಂದಿನ ನೆಗಿಟೀವ್ ಥಿಂಕಿಂಗ್ ಅಂಕಣದ ವಿಷಯ.
ನಮ್ಮ ನಡುವಿನ ನ್ಯೂಸ್ ಚಾನೆಲ್ ಗಳ ಅಬ್ಬರ ಒಂದಕ್ಕಿಂತ ಒಂದು ಹೆಚ್ಚೆಂಬಂತೆ ನ್ಯೂಸ್ ಗಳನ್ನು ನೀಡುತ್ತಾ ನಮ್ಮ ನಡುವೆ ಬಹುಮುಖ್ಯ ಮಾಹಿತಿ ಕೇಂದ್ರವಾಗುತ್ತಿದೆ. ಆದರೆ ನಂಬುವುದು ಮಾತ್ರ ಮುದ್ರಣ ಮಾಧ್ಯಮದ ಬರಹಗಳನ್ನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಹೌದು.
ಅಂತೆಯೇ ಈ ಟಿವಿ ಚಾನಲ್ ಗಳಲ್ಲಿ ನ್ಯೂಸ್ ಒಂದೆಡೆಯಾದರೆ, ಮತ್ತೊಂದೆಡೆ ರಂಜನೆಗಾಗಿ ಸಿನಿಮಾ ಹಾಗೂ ಧಾರವಾಹಿಗಳು ನಮ್ಮ ನಡುವೆ ಕೆಲ ಬಾಂಧವ್ಯಗಳನ್ನು ಬೆಸೆದುಕೊಂಡಿವೆ. ಸಹಜವಾಗಿ ಬಹಳಷ್ಟು ಹೆಣ್ಣು ಮಕ್ಕಳು ಧಾರವಾಹಿಗಳ ಮೊರೆ ಹೋಗಿರುತ್ತಾರೆ ಎಂಬುದು ಕಂಡಿರುವ ಸತ್ಯ ಹಾಗೂ ಜಗದಮಾತು. ಆ ಸಮಯದ ಟಿವಿ ಧಾರಾವಾಹಿಗಳಿಗೆ ತಮ್ಮದೇ ಚೌಕಟ್ಟನ್ನು ಹಾಕಿಕೊಂಡಿದ್ದರೂ ರಿಮೋಟ್ ಗಾಗಿ ಮನೆಯಲ್ಲಿ ಕಿತ್ತಾಡುವ ಸಾಕಷ್ಟು ಪ್ರಸಂಗಗಳು ನಮ್ಮ ನಡುವೆ ಈಗಲೂ ಕಾಣಿಸಿಕೊಳ್ಳುತ್ತಿವೆ ಅಲ್ಲವೇ?. ನ್ಯೂಸ್ ಚಾನೆಲ್ ಗಳ ಅಬ್ಬರ ಹೇಗಿದೆ ಎಂದರೆ, ಪಾಸಿಟಿವ್ ಅಂದರೆ ಸಕಾರಾತ್ಮಕ ವಿಷಯಗಳನ್ನು ಒಂದೆಡೆ ಬಿತ್ತರಿಸುತ್ತಿದ್ದರೆ, ಅದಕ್ಕೆ ನೋಡುಗರ ಸಂಖ್ಯೆ ಅತಿ ಕಡಿಮೆ ಎಂಬಂತೆ ಕಾಣಿಸುತ್ತದೆ.
ಆದರೆ ಇದೇ ವಿಕಾರಾತ್ಮಕ ವಿಷಯಗಳನ್ನು ಸಾಕಷ್ಟು ವೀಕ್ಷಣೆ ಮೂಲಕ ತನ್ನ ಟಿ ಆರ್ ಪಿ ಯನ್ನು ಹೆಚ್ಚಿಸಿಕೊಳ್ಳಬಹುದೆಂಬ ಸತ್ಯ ಎಲ್ಲಾ ಟಿವಿ ಚಾನಲ್ ಗಳಿಗೆ ಗೊತ್ತಿದೆ. ಹಾಗಾಗಿ ಯಾವುದೋ ಜಗಳ, ಯಾರೋ ಒಬ್ಬ ಇನ್ನೊಬ್ಬರ ಜೊತೆ ಓಡಿ ಹೋದ ಪ್ರೇಮ ಅಲ್ಲಿ ಶುರುವಾದ ಹೊಡದಾಟ ಬಡಿದಾಟ, ಹಾಗೆಯೇ ವಿಧಾನ ಮಂಡಲದಲ್ಲಿ ಅಥವಾ ಲೋಕಸಭೆಯಲ್ಲಿ ನಡೆಸುವ ಸಕಾರಾತ್ಮಕ ಚಿಂತನೆಗಳಿಗಿಂತ ವಿಕಾರಾತ್ಮಕವಾಗಿ ಕೂಗಾಡುವ, ಒಬ್ಬರಿಗೊಬ್ಬರನ್ನು ನಿಂದಿಸುವ ವಿಷಯ ಮುಖ್ಯವಾಗುತ್ತ.ದೆ ಅದೇ ವಿಷಯ ಸಾರ್ವಜನಿಕ ವಲಯದಲ್ಲಿ ಅತಿ ಹೆಚ್ಚಿನ ಚರ್ಚೆಯಾಗುತ್ತದೆ.
ಐಶ್ವರ್ಯ ರೈ ಗರ್ಭಿಣಿಯಾಗಿದ್ದ ಕೊನೆಯ ದಿನಗಳಲ್ಲಿ ಅದೆಷ್ಟರ ಮಟ್ಟಿಗೆ ಎಲ್ಲಾ ಟಿವಿ ಚಾನಲ್ ಗಳಲ್ಲಿ ಎಷ್ಟುಬಾರೀ ಬಂದಿತ್ತು ಎಂಬುದು ಆ ಭಗವಂತನಿಗೆ ಗೊತ್ತು. ಹಾಗೆಯೇ ದರ್ಶನ್ ಘಟನೆ ಈಗಲೂ ಓಡುತ್ತಿದೆ. ಪ್ರಜ್ವಲ್ ವಿಷಯ ಅಲ್ಲಲ್ಲಿ ಮತ್ತೆ ಮತ್ತೆ ನೆನಪು ಮಾಡುತ್ತಿವೆ. ಅದೇ ಯಾರೋ ಒಬ್ಬ ವಿಜ್ಞಾನಿ ಅಥವಾ ತಿಳಿದುಕೊಂಡವನು ಯಾವುದಾದರೂ ಒಂದು ಸಾಧನೆ ಮಾಡಿದರೆ ಅವರ ವಿಷಯ ಒಂದೇ ಒಂದು ಬಾರಿ ನೆಪ ಮಾತ್ರಕ್ಕೆ ಬಂದು ಹೋಗುತ್ತದೆ. ಸಾಧನೆ ಹಾಗೂ ಸಕಾರಾತ್ಮಕ ಚಿಂತನೆಗಳು ವಾಹಿನಿಗಳಲ್ಲಿ ಅತಿ ಹೆಚ್ಚು ಪ್ರಚಾರವಾಗದಿರಲು ಕಾರಣ ನೋಡುಗರ ಮನಸ್ಸು ಎಂದರೆ ತಪ್ಪಾಗಲಿಕ್ಕಿಲ್ಲ.
ಇನ್ನು ಟಿವಿ ಧಾರವಾಹಿಗಳ ಕಥೆಗಳನ್ನು ಬಹಳಷ್ಟು ಜನ ಇಷ್ಟಪಡುತ್ತಾರೆ. ಎಲ್ಲಾ ಧಾರವಾಹಿಗಳು ಬಹು ಜನರಿಗೆ ಇಷ್ಟವಾಗಲು ಕಾರಣ ಅದರಲ್ಲಿ ಹುಡುಕುವ ಕಥೆಯೊಳಗಿನ ವಿಕಾರಾತ್ಮಕ, ನೆಗೆಟಿವ್ ಮನಸುಗಳ ವಿಜೃಂಭಣೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದೇ ಇಂತಹ ಬರಹಕ್ಕೆ ಸ್ಪೂರ್ಥಿ ಎಂದರೆ ಆಶ್ಚರ್ಯ ಪಡಬೇಕಿಲ್ಲ. ಏಕೆಂದರೆ ಮಾಮೂಲಿಯಾದ ಬದುಕು ಬರಹವಾದರೆ, ಅದು ಸಾಧನೆಯ ಹಾದಿಯಾಗಿದ್ದರೆ ಅದರೊಳಗೆ ಒಂದಿಷ್ಟು ನೆಗೆಟಿವ್ ಮನಸುಗಳನ್ನು ತುರುಕಿದಾಗ ಮಾತ್ರ ಆ ದಾರವಾಹಿಗಳು ಹೆಚ್ಚು ಬೆಳೆಯಲು ಸಾಧ್ಯ.
ಎಷ್ಟೋ ನಮ್ಮ ನಡುವಿನ ಅಹಿತಕರ ಘಟನೆಗಳಿಗೆ ಇಂತಹ ರಂಜನೆಯ ಕಾರ್ಯಕ್ರಮಗಳು ಪರೋಕ್ಷವಾಗಿ ಕಾರಣವಾಗುತ್ತಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ನಮ್ಮ ನಡುವಿನ ಘಟನೆಗಳೂ ಇಂತಹ ಬರಹಕ್ಕೆ ಕಾರಣವಾಗಿರಬಹುದಲ್ಲವೇ? ಯಾವುದು ಮೊದಲೆಂದರೆ ಕೋಳಿನಾ ಅಥವಾ ಮೊಟ್ಟೆನಾ? ಎನ್ನಬೇಕಾಗುತ್ತೆ.
ಪ್ರತಿ ದಾರವಾಹಿಗಳು ಹೊಸ ಹೊಸ ವಿಷಯಗಳನ್ನು ಹೊತ್ತು ತರುತ್ತದೆ. ಪ್ರತಿ ಸಿನಿಮಾಗಳಂತೆ ಧಾರವಾಹಿಗಳಲ್ಲೂ ನೋಡುಗರನ್ನು ವರ್ಷವಿಡೀ ಒಂದೆಡೆ ಹಿಡಿದಿಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಒಳ್ಳೆಯ- ಕೆಟ್ಟ ಅತ್ತೆ, ಮಾವ, ನಾದಿನಿ, ಅಪ್ಪ, ಅವ್ವ, ತಮ್ಮ, ಅಣ್ಣ, ಅಕ್ಕ-ತಂಗಿ ಎಂಬ ಬಾಂಧವ್ಯಗಳ ನಡುವಿನ ಘಟನೆಗಳಲ್ಲಿ ಬೆರೆತು ಸಾಂಸಾರಿಕ ಬದುಕನ್ನು ಕೊನೆಗೊಂದು ಅರ್ಥವನ್ನು ಹೇಳಿಕೊಡುವ ಇಂತಹ ದೃಶ್ಯ ಮಾಧ್ಯಮದ ವಿಭಾಗದಲ್ಲಿ ಕೊನೆಯ ಸಕಾರಾತ್ಮಕ ಚಿಂತನೆಗಿಂತ ಮೊದಲಿನಿಂದ ಸೆಳೆಯುವ ಒಂದಿಷ್ಟು ಸಿಟ್ಟು ತರಿಸುವ ಪಾತ್ರಗಳೇ ಅತಿ ಮುಖ್ಯ ಅಂಶವಾಗಿ ನೋಡುಗರ ಮನದಲ್ಲಿ ಹುದುಗಿರುವುದು. ಮನದ ಮೂಲೆಯಲ್ಲಿ ಅಡಗಿರುವ ಅಡಗಿಕೊಳ್ಳಬಹುದಾದ ನೆಗೆಟಿವ್ ಥಿಂಕಿಂಗ್ ಅಲ್ಲವೇ?
(ಮುಂದುವರಿಯುತ್ತದೆ)