ಸಾಗರ ಶಿವಮೊಗ್ಗ ಡಿ.21 : : ಸರ್ಕಾರಿ ಸೇವೆ ಬಯಸಿ ಬಂದವರನ್ನು ಸತಾಯಿಸಬೇಡಿ. ಹಳ್ಳಿಗರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುವ ಮೂಲಕ ಉತ್ತಮ ನೌಕರ ಎನ್ನುವ ಪ್ರಶಂಸೆಗೆ ಪಾತ್ರವಾಗಿ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಸಲಹೆ ನೀಡಿದ್ದಾರೆ.
ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘ ಹಾಗೂ ಗ್ರಾಮೀಣಾಭಿವೃದ್ದಿ ಪಂಚಾಯತ್ರಾಜ್ ನೌಕರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಆರ್.ಡಿ.ಪಿ.ಆರ್. ಕ್ರೀಡಾಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ತಾಲ್ಲೂಕಿನಲ್ಲಿ ಆರ್.ಡಿ.ಪಿ.ಆರ್. ಅಧಿಕಾರಿ ನೌಕರರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನಷ್ಟು ಪರಿಣಾಮಕಾರಿಯಾಗಿ ನೀವು ಕೆಲಸ ಮಾಡಿದರೆ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಸೂಕ್ತ ಸಂದರ್ಭದಲ್ಲಿ ತಲುಪಿಸಲು ಸಾಧ್ಯ ಎಂದರು.
ಅಭಿವೃದ್ದಿಯೆ ಮೂಲಮಂತ್ರವಲ್ಲ. ಅಭಿವೃದ್ದಿ ಜೊತೆ ಸ್ಪಂದನೆ ಅತಿಮುಖ್ಯ. ಗ್ರಾಮೀಣ ಭಾಗದಲ್ಲಿ ನಿಮ್ಮ ಮೂಲಕ ಸರ್ಕಾರಿ ಸೇವೆ ಜನರಿಗೆ ತಲುಪುತ್ತಿದೆ. ನಿಮ್ಮ ಆರೋಗ್ಯ ನಮಗೆ ಮುಖ್ಯವಾಗಿರುತ್ತದೆ. ಬೇರೆಬೇರೆ ಕಾರಣಗಳಿಂದ ಹೃದಯಾಘಾತದಿಂದ ಮಧ್ಯವಯಸ್ಸಿನಲ್ಲಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಯಾವುದೇ ಸಂದರ್ಭದಲ್ಲೂ ಅಧಿಕಾರಿ ನೌಕರರು ಒತ್ತಡಕ್ಕೆ ಒಳಗಾಗಬಾರದು. ನಮ್ಮ ಕಡೆಯಿಂದ ನಿಮಗೆ ಯಾವುದೇ ಒತ್ತಡ ನೀಡುವುದಿಲ್ಲ ಎಂದರು.
ಒತ್ತಡದ ನಡುವೆ ಕೆಲಸ ಮಾಡುವಾಗ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಕಾಲಕಾಲಕ್ಕೆ ತೊಡಗಿಸಿಕೊಂಡರೆ ಆರೋಗ್ಯಪೂರ್ಣವಾಗಿ ಕರ್ತವ್ಯ ನಿರ್ವಹಿಸಬಹುದು. ಆರ್.ಡಿ.ಪಿ.ಆರ್. ಇಲಾಖಾ ಅಧಿಕಾರಿ ಸಿಬ್ಬಂದಿಗಳಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ನೌಕರರ ಸಂಘದ ಅಧ್ಯಕ್ಷ ಪ್ರವೀಣಕುಮಾರ್ ಆರ್. ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್, ಗ್ರಾಮೀಣಾಭಿವೃದ್ದಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಗುರುಕೃಷ್ಣ ಶೆಣೈ, ಪ್ರಮುಖರಾದ ಗಣಪತಿ ಮಂಡಗಳಲೆ, ಕಲಸೆ ಚಂದ್ರಪ್ಪ, ಗಂಗಾಧರ ನಾಯಕ್, ಕೇಶವಮೂರ್ತಿ, ರವಿಕುಮಾರ್, ಸುಮ, ಸುಬ್ರಹ್ಮಣ್ಯ ಇನ್ನಿತರರು ಹಾಜರಿದ್ದರು. ಸೌಮ್ಯ ಪ್ರಾರ್ಥಿಸಿದರು. ಮಹ್ಮದ್ ಹನೀಫ್ ಸ್ವಾಗತಿಸಿದರು. ರಾಘವೇಂದ್ರ ಕುಮಾರ್ ನಿರೂಪಿಸಿದರು.