ಶಿವಮೊಗ್ಗ, ಡಿ.19:
ಇಂದಿನ ವಿಧಾನಪರಿಷತ್ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ರಾಜ್ಯದಲ್ಲಿ ಅನಧಿಕೃತವಾಗಿ ವಾಸವಿರುವ ಪಾಕ್ ಮತ್ತು ಬಾಂಗ್ಲಾ ದೇಶ ಮೂಲಕ ಜನರ ಬಗ್ಗೆ ವಿಧಾನಪರಿಷತ್ ಶಾಸಕ ಡಿ.ಎಸ್.ಅರುಣ್ ಅವರು ಇಂದು ಅಧಿವೇಶನದಲ್ಲಿ ಸರ್ಕಾರವನ್ನು ಪ್ರಶ್ನಿಸಿದರು. Karnataka has become a paradise for unauthorized residents ಎಂದು ಉಲ್ಲೇಖಿಸಿ, ರಾಜ್ಯದಲ್ಲಿ ಹೊರ ದೇಶದವರು ವಾಸ್ತವ್ಯ ಹೂಡಿದ್ದು ಕರ್ನಾಟಕ ಇವರುಗಳಿಗೆ ಆಶ್ರಯತಾಣವಾಗಿದೆ. ಇವರಿಗೆ ಬೇಕಾಗಿರತಕ್ಕ ಆಧಾರ್ಕಾರ್ಡ್ ಸೇರಿದಂತೆ ಚುನಾವಣಾ ಗುರುತಿನ ಚೀಟಿ ಹೀಗೆ ಎಲ್ಲವನ್ನು ಒದಗಿಸುವಂಥ ಒಂದು ತಂಡವೇ ಇದೆ. ರಾಜ್ಯದಲ್ಲಿ ವ್ಯವಸ್ಥಿತ ಗಾಂಜಾ ವ್ಯವಹಾರದ ಹಿಂದೆ ಈ ಆಶ್ರಯವಾಸಿಗಳದ್ದೇ
ಕೈವಾಡವಿರುವಂಥದ್ದು. ಗೃಹಸಚಿವರು 159 ಜನ ಬಾಂಗ್ಲಾ ವಾಸಿಗಳು ಅನಧಿಕೃತವಾಗಿ ರಾಜ್ಯದಲ್ಲಿ ಇದ್ದಾರೆಂದು ಹೇಳುತ್ತಾರೆ ಅವರನ್ನು ಗಡಿಪಾರು ಮಾಡಿಲ್ಲವೇಕೆ? ಪ್ರತಿ ಜಿಲ್ಲೆಗಳಲ್ಲಿ ಟಾಸ್ಕ್ಫೋರ್ಸ್ ಇರುವ ಬಗ್ಗೆ ಮಾಹಿತಿ ಇಲ್ಲ. ಇದರ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಗೃಹಸಚಿವರನ್ನು ಕೋರಿದರು.
ಗೃಹಸಚಿವರು ಉತ್ತರಿಸುತ್ತಾ, ಪಾಕ್ ಮತ್ತು ಬಾಂಗ್ಲಾ ದೇಶದವರು ನಮ್ಮ ರಾಜ್ಯಕ್ಕೆ ಬರುತ್ತಿರುವುದು ಹೊಸದಾಗಿ ಆಗುತ್ತಿರುವಂತಹದ್ದಲ್ಲ. ಭಾರತದ ಗಡಿ ಧಾಟಿ ಲಕ್ಷಾಂತರ ಜನ ಭಾರತಕ್ಕೆ ಬರುತ್ತಿದ್ದಾರೆ. ಅದನ್ನು ತಡೆಗಟ್ಟುವಂಥ ಕೆಲಸವನ್ನು ಕೇಂದ್ರಸರ್ಕಾರದ ಮಿಲಿಟರಿ ಫೋರ್ಸ್ನವರು ಮಾಡುತ್ತಾರೆ. ಇಲ್ಲದಿದ್ದರೆ ಅರ್ಧ ಬಾಂಗ್ಲದೇಶವೇ ಭಾರತಕ್ಕೆ ಬಂದುಬಿಡುತ್ತಿತ್ತು. ಹೀಗೆ ಬಂದಂಥವರು ಎಲ್ಲಾ ರಾಜ್ಯಗಳಲ್ಲೂ ಹರಡಿಕೊಂಡಿದ್ದಾರೆ. ಇದೆಲವನ್ನು ಕೇಂದ್ರದ Foreign Restriction Center ಮೂಲಕ ಎಲ್ಲವನ್ನು ಗಮನಿಸುತ್ತಾರೆ. ಕಾಫಿ ತೋಟಗಳಲ್ಲಿ,
ರಾಜ್ಯದ ವಿವಿಧೆಡೆಗಳಲ್ಲಿ ಇರುವಂಥವರನ್ನು ತಪಾಸಣೆ ಮಾಡುತ್ತಾರೆ. ರಾಜ್ಯದಲ್ಲಿ ಒಂದು ಟಾಸ್ಕ್ಫೋರ್ಸ್ ಇದ್ದು ಯಾರೇ ಹೊರದೇಶದಿಂದ ಅನಧಿಕೃತವಾಗಿ ಬಂದು ಇಲ್ಲಿ ನೆಲೆಸುವಂಥದ್ದಾದರೆ ಅದನ್ನು ಅವರಿಗೆ ವಹಿಸುತ್ತೇವೆ. ಒಂದು ವರ್ಷದ ಅವಧಿಗೆ ವಿದ್ಯಾರ್ಥಿ ನೆಪದಲ್ಲಿ
ಪಾಸ್ಪೋರ್ಟ್ ಪಡೆದು ಯಾವುದೋ ಕಾಲೇಜಿಗೆ ಪ್ರವೇಶಾತಿಯಾಗಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಪಾಸ್ಪೋರ್ಟ್ ಅವಧಿ ಮುಗಿದ ತರುವಾಯವೂ ಹಾಗೆ ಮುಂದುವರೆಯುತ್ತಾರೆ. ನಮ್ಮ ನಿಧಾನ ತಪಾಸಣೆಯಿಂದ ಅವರುಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಯಾವುದೋ ಏಜೆಂಟ್ಗಳ ಮೂಲಕ ಬಿಪಿಎಲ್ ಕಾರ್ಡ್ ಇತ್ಯಾದಿಗಳನ್ನು ಪಡೆದುಕೊಳ್ಳುತ್ತಾರೆ. ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮಾನಿಟರ್ ಮಾಡುವುದಕ್ಕೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.
ಶ್ರೀ ಅರುಣ್ರವರು ಮಾತನಾಡುತ್ತಾ, ಶಿವಮೊಗ್ಗ ಮತ್ತು ಮಲೆನಾಡು ಭಾಗದಲ್ಲಿ ನೆಲೆಸಿರುವಂಥ ಅನಧಿಕೃತ ವಾಸಿಗಳಿಗೆ ಬಿಪಿಎಲ್ ಕಾರ್ಡ್ ಇನ್ನಿತರೆಗಳನ್ನು ಒದಗಿಸುತ್ತಿರುವ ಏಜೆನ್ಸಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಕಾಫಿ ತೋಟಗಳಲ್ಲಿ ಕೆಲಸಮಾಡುವಂಥ ಕಾರ್ಮಿಕರ ಮಾಹಿತಿಗಳನ್ನು ಆಯಾ ಪೊಲೀಸ್ಠಾಣೆಗಳಲ್ಲಿ ಪಡೆದುಕೊಳ್ಳಬೇಕು. ಜಿಲ್ಲಾ ಕೇಂದ್ರಗಳಲ್ಲಿ, ಎಸ್.ಪಿ. ಕೇಂದ್ರಗಳಲ್ಲಿ ಅಕ್ರಮ ವಾಸಿಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅಕ್ರಮ ಚಟುವಟಿಕೆಗಳ ನಿಯಂತ್ರಣ ಹಾಗೂ ಕಡಿವಾಣಕ್ಕೆ ಸರ್ಕಾರ ಮುಂದಾಗಬೇಕೆಂದು ರಾಜ್ಯದ ಜನರ ಸುರಕ್ಷತೆ ಮತ್ತು ಭದ್ರತೆಗೆ ವಿಶೇಷ ಗಮನ ನೀಡಬೇಕೆಂದು ಸಲಹೆ ನೀಡಿದರು.