ಶಿವಮೊಗ್ಗ,ಡಿ18 :ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ(ಸಾಸ್) ಶಿವಮೊಗ್ಗ ನಗರ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಶಬರಿಮಲೈ ಸನ್ನಿಧಾನಕ್ಕೆ ಬರುವ ಸ್ವಾಮಿ ಮಾರಗಳಿಗೆ ಅನ್ನದಾನಕ್ಕಾಗಿ ಪ್ರತಿ ಮನೆಯಿಂದ ಒಂದು ಮುಷ್ಟಿ ಅಕ್ಕಿ ಹಾಗೂ ಇತರ ಸಾಮಗ್ರಿಗಳ ಸಂಗ್ರಹ ಅಭಿಯಾನಕ್ಕೆ ಇಂದು ಬೊಮ್ಮನಕಟ್ಟೆ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಆದಿಚುಂಚನಗಿರಿ ಶಾಖಾಮಠದ ಶ್ರೀ ಸಾಯಿನಾಥ ಶ್ರೀಗಳು ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಶ್ರೀಗಳು ಆಶೀರ್ವಚನ ನೀಡಿ ಇದೊಂದು ಪವಿತ್ರವಾದ ಕಾರ್ಯಕ್ರಮ. ಅನ್ನದಾನ ಶ್ರೇಷ್ಠದಾನವಾಗಿದೆ. ನಾವು ಅರಿತೋ ಅರಿಯದೆಯೋ ಮಾಡಿದ ಪಾಪ ಕರ್ಮಗಳು ದೂರವಾಗಬೇಕಾದರೆ ದಾನಗಳನ್ನು ಮಾಡಲೇಬೇಕು. ದಾನದ ಮುಖ್ಯ ಉದ್ದೇಶ ಕರ್ಮಗಳನ್ನು ತೊಳೆದುಕೊಳ್ಳುವುದು. ಅಕ್ಕಿ ದಾನ ವಿವಿಧ ಕಡೆಗಳಲ್ಲಿ ವಿವಿಧ ರೂಪ ತೆಗೆದು ಕೊಳ್ಳುತ್ತದೆ. ದೇವಾಲಯಗಳಲ್ಲಿ ಪ್ರಸಾದ ಎಂದೆನಿಸುತ್ತದೆ. ಅಕ್ಕಿಗೆ ಅರಸಿನ ಬೆರೆಸಿದರೆ ಅದು ಅಕ್ಷತೆಯಾಗುತ್ತದೆ. ನಾನಾ ರೂಪಗಳಲ್ಲಿ ಅಕ್ಕಿಯನ್ನು ಬಳಸುತ್ತಾರೆ. ಸನಾತನ ಸಂಸ್ಕೃತಿಯಲ್ಲಿ ದಾನಕ್ಕೆ ಬಹಳ ಮಹತ್ವವಿದೆ. ಹಸಿವನ್ನು ನೀಗಿಸುವುದು ಶ್ರೇಷ್ಠ ಕಾರ್ಯ ಈ ಕಾರ್ಯ ಯಶಸ್ವಿಯಾಗಲಿ ಎಲ್ಲರ ಮನಸಾಭಿಷ್ಟ ಸಿದ್ಧಿಯಾಗಲಿ ಎಂದು ಹಾರೈಸಿದರು.
ಸಾಸ್ನ ಪ್ರಮುಖರಾದ ಕೆಇ ಕಾಂತೇಶ್ ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಶಬರಿಮಲೆ ಭಕ್ತರಿಗೆ ಯಾವುದೇ ಕೊರತೆಯಾಗಬಾರದು ಎಂಬ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಾರ್ವಜನಿಕರು ಕೈ ಜೋಡಿಸಿದ್ದಾರೆ. ಸುಮಾರು ಎರಡು ಲಾರಿ ಎಷ್ಟು ಅಕ್ಕಿ ಮತ್ತು ಇತರ ವಸ್ತುಗಳು ಸಂಗ್ರವಾಗುತ್ತಿದ್ದು ಶಬರಿಮಲೆ ಸನ್ನಿಧಾನಕ್ಕೆ ಕಳುಹಿಸಿ ಕೊಡುತ್ತಿದ್ದೇವೆ. ಈ ಬಾರಿ ಇಲ್ಲಿನ ವಿವಿಧ ಕಡೆಯಿಂದ ಹೋಗುವ ಶಬರಿಮಲೆ ಭಕ್ತರಿಗೆ ಉಪಯೋಗಕ್ಕಾಗಿ ಒಂದು ಲಾರಿಯನ್ನು ಬಳಸಿ ಇನ್ನೊಂದು ಲಾರಿಯನ್ನು ಶಬರಿಮಲೆಗೆ ಕಳಿಸುತ್ತೇವೆ. ಸಾರ್ವಜನಿಕರು ಈ ಪುಣ್ಯದ ಕಾರ್ಯದಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಬಳಿಕ ಗುರುಗಳು ಸೇರಿದಂತೆ ಮನೆ ಮನೆಗೆ ತೆರಳಿ, ಅಕ್ಕಿ ಹಾಗೂ ಇತರ ಸಾಮಾಗ್ರಿಗಳನ್ನು ಸಂಗ್ರಹ ಮಾಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಈ ವಿಶ್ವಾಸ್ ಮಂಜುನಾಥ್. ಸಂತೋಷ್ ಶಿವಕುಮಾರ್. ಪಿ ಶಂಕರ್ ಸುವರ್ಣ ಶಂಕರ್. ಜಾದವ್ ಅನಿತಾ. ಹಾಗೂ ಸಾಸನ ಪ್ರಮುಖರು ಮತ್ತು ಅನ್ನಪೂರ್ಣೇಶ್ವರಿ ದೇವಾಲಯದ ಸಮಿತಿಯ ಸದಸ್ಯರು ಹಾಗೂ ಅರ್ಚಕರು ಉಪಸ್ಥಿತರಿದ್ದರು.