ಸೊರಬ: ಮಿಂಚಿನ ಓಟ ಓಡುತ್ತಿದ್ದ ಹೋರಿಗಳು, ಬಲ ಪ್ರದರ್ಶನ ತೋರಲು ಮುಂದಾಗಿದ್ದ ಪೈಲ್ವಾನರು, ಹೋರಿ ಪ್ರಿಯರ ಹರ್ಷೋದ್ಗಾರದ ನಡುವೆ ಪಟ್ಟಣದ ಹೊರವಲಯದ ಹಳೇಸೊರಬ ಗ್ರಾಮದಲ್ಲಿ ರಾಮೇಶ್ವರ ಯುವಕ ಸಂಘ ಹಾಗೂ ಗ್ರಾಮಾಭಿವೃದ್ಧಿ ಸಮಿತಿಯಿಂದ ಆಯೋಜಿಸಿದ್ದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ ವಿಜೃಂಭಣೆಯಿಂದ ಜರುಗಿತು.
ಹಬ್ಬಕ್ಕೆ ಚಾಲನೆ ನೀಡಿದ ಸಾಗರ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಜನಪದ ಕ್ರೀಡೆಯಾದ ಹೋರಿ ಹಬ್ಬ ಉಳಿಯಬೇಕು ಮತ್ತು ಬೆಳೆಯಬೇಕು. ರೈತ ಸಮುದಾಯದವರು ಸಂಭ್ರಮಿಸುವ ಹಬ್ಬವಾಗಿದೆ. ಯಾವುದೇ ಜಾತಿ ಧರ್ಮವಿಲ್ಲದೇ ಎಲ್ಲರೂ ಒಗ್ಗೂಡಿ ಹಬ್ಬ ಆಚರಿಸುತ್ತಾರೆ. ಹಬ್ಬದಲ್ಲಿ ಪಾಲ್ಗೊಳ್ಳುವವರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.
ಮಲೆನಾಡು ಹಾಗೂ ಬಯಲುಸೀಮೆ ಭಾಗದ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬದ ಅಖಾಡದಲ್ಲಿ ಯಾರ ಕೈಗೂ ಸಿಗದಂತೆ ಓಡುತ್ತಿರುವ ಹೋರಿಗಳನ್ನು ಕಣ್ತುಂಬಿಕೊಳ್ಳಲು ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸಾವಿರಾರು ಹೋರಿ ಹಬ್ಬದ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಶರವೇಗದಲ್ಲಿ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರಲ್ಲಿ ಮೈನವಿರೇಳಿಸಿತು.
ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಟೇಪು, ಬಲೂನುಗಳು ಮತ್ತು ಒಣ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಕೊಬ್ಬರಿ ಹೋರಿ, ಆ್ಯಕ್ಷನ್ ಹೋರಿ, ಪೀಪಿ ಹೋರಿ ಹೀಗೆ ವಿವಿಧ ರೀತಿಯಲ್ಲಿ ಹೋರಿಗಳನ್ನು ವಿಂಗಡಿಸಿ ಓಡಿಸಲಾಯಿತು.
ಅಖಾಡದಲ್ಲಿ ಕುಳಗದ ಹಿಂದೂ ಸಾಮ್ರಾಟ, ಕಪ್ಪಗಳಲೆ ಹಿಂದೂ ದೊರೆ, ಸೊರಬದ ಸೈಕೋ, ಮನೆಮನೆ ಅಧೀರ, ಕುಂಬತ್ತಿ ಆ್ಯಕ್ಷನ್ ಕಿಂಗ್, ಜಕ್ಕನಹಳ್ಳಿ ಛಲಗಾರ, ಹೆಸರಿಯ ದುರಂತ, ಹರೂರು ಜೈ ಹನುಮಾ, ಶಿಗ್ಗಾದ ಮೆಜೆಸ್ಟಿಕ್ ಹುಲಿ, ಹೊನ್ನಾಳಿ ಬ್ರಹ್ಮ, ಕುಂಬತ್ತಿ ಕಲ್ಲೇಶ, ನೇರಲಗಿಯ ಅಂಬಿಗರಡಾನ್, ಮಲೆನಾಡು ಮಹಾರಾಜ, ಚಿಕ್ಕಶಕುನದ ಏಕಲವ್ಯ, ಶರಾವತಿ ಎಕ್ಸ್ಪ್ರೆಸ್, ಹರಗಿ ವಾರಸ್ದಾರ, ಸಾರೇಕೊಪ್ಪ ಸರದಾರ, ಶಿರಾಳಕೊಪ್ಪದ ಎಚ್.ಎಫ್, ಡಾನ್, ಶಿಡ್ಡಿಹಳ್ಳಿ ದೊರೆ, ತಂಡಿಗೆಯ ಈಡಿಗರ ಹುಲಿ, ಓಟೂರಿನ ಮೀಸೆ ದರ್ಬಾರ್, ಶಿಕಾರಿಪುರದ ಕರ್ನಾಟಕ ರತ್ನಾ, ಹಳೇಸೊರಬದ ಹುಚ್ಚಾ, ಅಧೀರ, ರಾಕ್ ಸ್ಟಾರ್ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದವು.
ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲಪ್ರದರ್ಶನ ತೋರಿದ ಪೈಲ್ವಾನರನ್ನು ಸಮಿತಿ ವತಿಯಿಂದ ಗುರುತಿಸಲಾಯಿತು. ಅಖಾಡದ ಎರಡು ಬದಿಯಲ್ಲಿ ಬೇಲಿ ನಿರ್ಮಿಸಿ, ಒಂದೊಂದೆ ಹೋರಿಗಳನ್ನು ಓಡಿಸುವ ಮೂಲಕ ಸಮಿತಿಯವರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು.