
ಶಿವಮೊಗ್ಗ ಡಿ.16 : ಶರಾವತಿ ಸಂತ್ರಸ್ತರ ಭಮಿ ಡಿ ನೋಟಿಫಿಕೇಶನ್ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ರೈತರ ಪರ ಒಲವು ತೋರಿಸಿದ್ದು, ರಾಜ್ಯ ಸರ್ಕಾರ ಪೂರಕ ಪ್ರಕ್ರಿಯೆಗಳನ್ನು ಈಗಲೇ ಆರಂಭಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಆಳಿದ ಸರ್ಕಾರಗಳು ಸೂಕ್ತ ಸಮಯದಲ್ಲಿ ಐತಿಹಾಸಿಕ ನಿರ್ಧಾರಕ್ಕೆ ತನ್ನ ನಿರ್ದಿಷ್ಟ ಇಚ್ಛಾಶಕ್ತಿ ತೋರದೆ ಕಳೆದ ೬೦ ವರ್ಷಕ್ಕೂ ಅಧಿಕ ಸಮಯದಿಂದ ಈ ಗಂಭೀರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಂಡಿದೆ. ಇಲ್ಲಿಯವರೆಗೂ ಎದುರಾದ ತಾಂತ್ರಿಕ ಮತ್ತು ತಾಂತ್ರಿಕೇತರ ಹಾಗೂ ಇನ್ನಿತರ ಆಡಳಿತಾತ್ಮಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಕೆಳ ಹಂತದ ನ್ಯಾಯಾಲಯದಿಂದ ಹಿಡಿದು ಉಚ್ಚ ನ್ಯಾಯಾಲಯ ದಾಟಿಕೊಂಡು ಈಗ ಸರ್ವೋಚ್ಚ ನ್ಯಾಯಾಲಯಕ್ಕೆ ಕೊನೆಯ ಹಂತದ ನ್ಯಾಯಕ್ಕಾಗಿ ಹೋರಾಟ ಪ್ರಾರಂಭವಾಗಿದೆ ಎಂದು ತಿಳಿಸಿದರು.

ಈ ಸಮಯದಲ್ಲಿ ಕೇಂದ್ರ ಸರ್ಕಾರ ಹಾಗೂ ಸಂಬಂಸಿದ ಇಲಾಖೆಯ ಕೇಂದ್ರ ಸಚಿವರು ಮಲೆನಾಡಿನ ಜನರ ಹಿತ ಕಾಪಾಡುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಸೂಕ್ತ ರೀತಿಯಲ್ಲಿ ಹೋರಾಟ ನಡೆಸಿ ಹೊಸ ಮೈಲಿಗಲ್ಲು ಸ್ಥಾಪಿಸುವ ಭರವಸೆ ನಮಗೆಲ್ಲ ಮೂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಡಿಸೆಂಬರ್ ೦೩ ರಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ೯೧೩೬ ಎಕರೆ ಜಮೀನಿನ ಡಿನೋಟಿಫಿಕೇಶನ್ಗೆ ಸಂಬಂಧಿಸಿದಂತೆ ಮಧ್ಯಂತರ ಅರ್ಜಿ ಸಲ್ಲಿಸಿದೆ. ಇದನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೌಹಾರ್ದ ಮಾತುಕತೆ ನಡೆಸಿ ಪರಿಹಾರ ಮಾಡಬಹುದೇ ಎಂದು ಕೇಳಿ ಜನವರಿ ೨೦ ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಈ ಬಗ್ಗೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ನಮ್ಮ ನಿಯೋಗ ಭೆಟಿ ಮಾಡಿ ಮನವರಿಕೆ ಮಾಡಿಕೊಟ್ಟಿದೆ. ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ ಕೂಡ ದೂರವಾಣಿ ಮುಖಾಂತರ ಮಾತನಾಡಿದ್ದಾರೆ. ಕೇಂದ್ರ ಸಚಿವರ ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದರು.
ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿರುವುದು ಸ್ವಾಗತಾರ್ಹ. ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಮುಗಿದು ತೀರ್ಪು ಬರುವುದು ಯಾವಾಗ ಎಂದು ಹೇಳುವುದು ಕಷ್ಟ. ಅಷ್ಟರಲ್ಲಿ ಭೂಮಿ ಹಕ್ಕು ನೀಡಲು ಬೇಕಾದ ಸಿದ್ಧತೆಗಳನ್ನು ರಾಜ್ಯ ಸರ್ಕಾರ ಮಾಡಿಕೊಳ್ಳಬೇಕು. ಕಂದಾಯ-ಅರಣ್ಯ ನಡುವೆ ಜಂಟಿ ಸರ್ವೆ, ಪೋಡಿ, ಪಹಣಿಯಲ್ಲಿ ಬದಲಾವಣೆ ಮೊದಲಾದ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಬೇಕು . ಸಣ್ಣ ರೈತರಿಗೆ ಯಾವುದೇ ರೀತಿಯ ತೊಂದರೆ ಅಧಿಕಾರಿಗಳಿಂದ ಆಗಬಾರದು. ನಾನು ಶೀಘ್ರದಲ್ಲೇ ರಾಜ್ಯ ಅರಣ್ಯ ಸಚಿವರಿಗೆ ಭೇಟಿ ಮಾಡಿ ರೈತರ ಪರ ಮನವಿ ಮಾಡಿ ವಸ್ತು ಸ್ಥಿತಿಯನ್ನು ವಿವರಿಸಲಿದ್ದೇನೆ ಎಂದರು.
ಅಜ್ಜ ಮುತ್ತಜ್ಜನ ಕಾಲದ ಇತಿಹಾಸವಿರುವ ಈ ಸಮಸ್ಯೆಗೆ ೩ನೇ ತಲೆಮಾರಿಗಾದರೂ ನ್ಯಾಯ ಸಿಗುವ ನಿಟ್ಟಿನಲ್ಲಿ ಆಧ್ಯತೆ ನೀಡಿ, ಎರಡು ಸರ್ಕಾರಗಳು ಕೆಲಸ ಮಾಡಬೇಕಾಗಿದೆ ಎಂದರು.

ಒಂದು ದೇಶ, ಒಂದೇ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕ್ಯಾಬಿನೆಟ್ನಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಚರ್ಚೆ ಪ್ರಾರಂಭವಾಗಿದೆ. ೫ ವರ್ಷಗಳಲ್ಲಿ ೮-೧೦ ಚುನಾವಣೆಗಳು ಬಂದರೆ ಆರ್ಥಿಕ ಹೊರೆ ಜೊತೆಗೆ ಚುನಾವಣಾ ನೀತಿ ಸಂಹಿತೆ ಬರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ ಎಂಬ ದೃಷ್ಟಿಯಿಂದ ಈ ಕಾನೂನನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದರು.

ಪಂಚಮಶಾಲೆ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅನೇಕ ಹೋರಾಟಗಳು ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿರುತ್ತದೆ. ಆದರೆ ಈ ಸರ್ಕಾರ ಬಂದ ಮೇಲೆ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಲಾಠಿ ಚಾರ್ಜ್ ಮತ್ತು ಬ್ಲಾಕ್ಮೇಲ್ ತಂತ್ರಗಾರಿಕೆಯನ್ನು ವಿರೋಧ ಪಕ್ಷಗಳ ಮೇಲೆ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದು ಸರಿಯಲ್ಲ ಎಂದರು.
ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಅನ್ವರ್ ಮಾನಿಪ್ಪಾಡಿ ಈಗಾಗಲೇ ಸಷ್ಟೀಕರಣ ಮಾಡಿದ್ದಾರೆ. ವಿಜಯೇಂದ್ರ ಅವರು ಯಾವುದೇ ಆಮೀಷಾ ಒಡ್ಡಿಲ್ಲ ಎಂದು ಅವರು ತಿಳಿಸಿದ್ದು, ಈ ಆರೋಪ ಮಾಡಿದ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ. ಕಾಂಗ್ರೆಸ್ ಸರ್ಕಾರ ಇರುವಾಗಲೇ ಲಕ್ಷಾಂತರ ಕೋಟಿ ಬೆಲೆಬಾಳುವ ವಕ್ಫ್ ಆಸ್ತಿಯ ಪರಭಾರೆಯನ್ನು ಮುಚ್ಚಿಡಲು ಅನ್ವರ್ ಮಾನಿಪ್ಪಾಡಿ ಅವರಿಗೆ ಆಮೀಷ ನೀಡಿದ್ದರು ಎಂಬುವುದನ್ನು ಅವರು ತಮ್ಮ ವರದಿಯಲ್ಲಿ ಕೇಂದ್ರಕ್ಕೆ ತಿಳಿಸಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವಿಚಾರ ಐಕಮಾಂಡ್ಗೆ ಬಿಟ್ಟಿದ್ದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧಕ್ಷ ಟಿ.ಡಿ.ಮೇಘರಾಜ್, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಅಶೋಕ ನಾಯ್ಕ, ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಜ್ನಾನೇಶ್ವರ್, ಹರಿಕೃಷ್ಣ, ಶಿವರಾಜ್, ಮಾಲತೇಶ್, ಚಂದ್ರಶೇಖರ್ ಮೊದಲಾದವರು ಇದ್ದರು.