– ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಎರಡು ದಿನಗಳ ದಕ್ಷಿಣ ಭಾರತದ ಅತಿದೊಡ್ಡ ವಿಜ್ಞಾನ ಮೇಳ “ಸೈನ್ಸ್ ಇನ್ ಆಕ್ಷನ್” ಗೆ ಚಾಲನೆ
ಬೆಂಗಳೂರು, ಡಿ, 14; ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋ ಡಿಜಿಟಲ್ ತಂತ್ರಜ್ಞಾನ ವಲಯದಲ್ಲಿ ಮಹತ್ವದ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವ ಜೊತೆಯಲ್ಲೇ, ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕ ಸಂಸ್ಥೆಯಾಗಿಯೂ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ವಿಜ್ಞಾನಿ ಡಾ.ಟಿ.ಕೆ ಅನುರಾಧ ಅಭಿಪ್ರಾಯಪಟ್ಟರು.
ಜಯನಗರದ ನ್ಯಾಷನಲ್ ಕಾಲೇಜಿನ ಡಾ. ಎಚ್.ಎನ್. ಮಲ್ಟಿ ಮೀಡಿಯಾ ಹಾಲ್ ನಲ್ಲಿ ಆಯೋಜಿಸಿರುವ ದಕ್ಷಿಣ ಭಾರತದ ಅತಿದೊಡ್ಡ ವಿಜ್ಞಾನ ಮೇಳ “ಸೈನ್ಸ್ ಇನ್ ಆಕ್ಷನ್” ನಲ್ಲಿ “ಸುಸ್ಥಿರತೆಯಲ್ಲಿ ನಾವೀನ್ಯತೆ” ಕುರಿತು ಮಾತನಾಡಿದ ಅವರು, ಇಸ್ರೋ ಬಗ್ಗೆ ವಿಜ್ಞಾನ ಸಂಸ್ಥೆಗಳು, ಪ್ರತಿಷ್ಠಿತ ವ್ಯಕ್ತಿಗಳು ಸಹ ಅಧ್ಯಯನ ಮಾಡುತ್ತಿದ್ದಾರೆ. ಇಸ್ರೋ ಎಲ್ಲವನ್ನೂ ಒಳಗೊಂಡಿದೆ. ಜಾಗತಿಕ ರಾಜತಾಂತ್ರಿಕ ಕ್ಷೇತ್ರದಲ್ಲೂ ಹೊಸ ಆಯಾಮವನ್ನು ಪಡೆದುಕೊಡು ಮುನ್ನಡೆಯುತ್ತಿದೆ ಎಂದರು.
ಇಸ್ರೋ ರಸ್ತೆ, ಸೇತುವೆಗಳಂತಹ ಭೌತಿಕ ಸಂಪರ್ಕ ವ್ಯವಸ್ಥೆ ಕಲ್ಪಿಸದೇ ಇರಬಹುದು. ಆದರೆ ಜನರ ಸುಗಮ ಜೀವನ, ದೇಶ ರಕ್ಷಣೆ, ಡಿಜಿಟಲ್ ತಂತ್ರಜ್ಞಾನದ ಸಂಬಂಧ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಅರಣ್ಯ, ಸಾಗರ ಸೇರಿ ಪ್ರತಿಯೊಂದು ವಲಯದ ಮೇಲೂ ಕಣ್ಗಾವಲು ವ್ಯವಸ್ಥೆಯನ್ನು ನಿರ್ಮಿಸಿದೆ. ಗಡಿಗಳಲ್ಲಿ ಯೋಧರಿಗೆ ಸಂದೇಶ ರವಾನಿಸುತ್ತಿದ್ದು, ದೂರ ಸಂವೇದಿ ತಂತ್ರಜ್ಞಾನದ ಮೂಲಕ ರೈತರು, ಮೀನುಗಾರರು, ಇತರೆ ವ್ಯಾಪಾರ ವಲಯಗಳಿಗೆ ಹಲವಾರು ಸಮಗ್ರ ಸೇವೆಗಳನ್ನು ಒದಗಿಸುತ್ತಿದೆ. ಇ ಕಾಮರ್ಸ್, ಬ್ಯಾಂಕಿಂಗ್ ಸಂಪರ್ಕ ವಲಯದಲ್ಲಿ ಕೆಲಸ ಮಾಡುತ್ತಿದೆ. 6 ಸಾವಿರಕ್ಕೂ ಅಧಿಕ ಹಳ್ಳಿಗಳಿಗೆ ಉಪಗ್ರಹಗಳ ಮೂಲಕ ನೇರ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಮೂಲ ಸಮಗ್ರ ಸೇವೆ ಒದಗಿಸುತ್ತಿವೆ ಎಂದರು.
ಸುಸ್ಥಿರತೆ ಎಂಬುದು ಜಾಗತಿಕ, ಸಾಂಸ್ಥಿಕ ಮತ್ತು ವೈಯಕ್ತಿಕ ಮಟ್ಟದಲ್ಲಿಯೂ ಅಗತ್ಯವಾಗಿದೆ. ಇಸ್ರೋ ಕಾರ್ಯಕ್ರಮಗಳು ನಾವೀನ್ಯತೆಯಿಂದ ಕೂಡಿದ್ದು, ವಿಕ್ರಮ್ ಸಾರಭಾಯಿ ಅವರ ನಾವೀನ್ಯತೆಯ ಚಿಂತನೆಗಳನ್ನು ಇಸ್ರೋ ಮುಂದುವರೆಸುತ್ತಿದೆ. ಉತ್ತಮ ಸಮಾಜ ನಿರ್ಮಿಸುವುದು ನಮ್ಮ ಗುರಿಯಾಗಿದ್ದು, ಬಾಹ್ಯಾಕಾಶ ವಲಯದಲ್ಲಿ ಭಾರತ ಸ್ವಾವಲಂಬಿಯಾಗಿದೆ. ಚಂದ್ರನಲ್ಲಿಗೆ ಮಾನವನ್ನು ಕಳುಹಿಸುವ ಕಾರ್ಯಕ್ರಮ ಬಗ್ಗೆ ಇಡೀ ಜಗತ್ತಿನ ಗಮನ ಸೆಳೆದಿದೆ ಎಂದರು.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸ್ಸಿ) ಬಾಹ್ಯಾಕಾಶ ಇಂಜನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಪಿ.ಜೆ ರೆಡ್ಡಿ ಮಾತನಾಡಿ , ಶಿಕ್ಷಣವನ್ನು ವಿಭಿನ್ನವಾಗಿ ನೋಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಉತ್ಸುಕತೆ ಅಳವಡಿಸಿಕೊಳ್ಳಬೇಕು. ಬರುವ 2047 ರ ವೇಳೆಗೆ ಭಾರತವನ್ನು ಸೂಪರ್ ಪವರ್ ದೇಶವನ್ನಾಗಿ ಮಾಡಲು ಯುವ ಸಮೂಹ ಸನ್ನದ್ಧವಾಗಬೇಕು. ಇದಕ್ಕಾಗಿ ದೇಶಾದ್ಯಂತ ಅತ್ಯುತ್ತಮ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕಾಗಿದೆ ಎಂದರು.
ಡಾ.ಬಿ.ವಿ. ಜಗದೀಶ್ ಮಾತನಾಡಿ , ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ. ಈ ಸಂಸ್ಥೆ ಹಲವಾರು ಸಾಧನೆಗಳಿಗೆ ಬುನಾದಿ ಹಾಕಿದೆ. ಅತ್ಯುತ್ತಮ ಕಲಾವಿದರು, ಸಂಗೀತ, ಸಾಹಿತ್ಯ, ಕ್ರೀಡಾ ವಲಯಕ್ಕೂ ಮಹತ್ವದ ಕೊಡುಗೆ ನೀಡಿದೆ ಎಂದರು.
ಎನ್.ಇ.ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಚ್.ಎನ್. ಸುಬ್ರಮಣ್ಯ ಮಾತನಾಡಿ , ಸೈನ್ಸ್ ಇನ್ ಆಕ್ಷನ್ ವಿಜ್ಞಾನ ಪ್ರದರ್ಶನ ವಿದ್ಯಾರ್ಥಿಗಳ ಜೊತೆಗೆ ಬೋಧಕ ಸಮುದಾಯಕ್ಕೂ ಸಹ ಅತ್ಯಂತ ಅಗತ್ಯವಾಗಿದ್ದು, ಇದನ್ನು ಉನ್ನತ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಎಂದರು.
ಎನ್.ಇ.ಎಸ್ ಸಂಸ್ಥೆ ಕಾರ್ಯದರ್ಶಿ ವೆಂಕಟಶಿವ ರೆಡ್ಡಿ ಮಾತನಾಡಿ , ಪ್ರತಿವರ್ಷ, ಪ್ರತಿ ದಶಕದಲ್ಲಿ ದೇಶ ಮಹೋನ್ನತ ಗುರಿಗಳನ್ನು ಇರಿಸಿಕೊಂಡು ಕಾರ್ಯನಿರ್ವಹಿಸುತ್ತದೆ. ಇದೇ ರೀತಿಯಲ್ಲಿ ವಿದ್ಯಾರ್ಥಿಗಳು ಸಹ ತಮ್ಮ ಶೈಕ್ಷಣಿಕ ಗುರಿಗಳನ್ನು ನಿಗದಿಪಡಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಇನ್ನು ಎರಡು ದಿನಗಳ ಕಾಲ ನಡೆಯುವ ವಿಜ್ಞಾನ ಮೇಳದಲ್ಲಿ ನೂರಾರು ಸಂವಾದಾತ್ಮಕ ವಿಜ್ಞಾನ ಮಾದರಿಗಳು, ವಿದ್ಯಾರ್ಥಿಗಳೇ ತಯಾರಿಸಿರುವ ಹಲವು ಕ್ರಿಯಾತ್ಮಕ ಮಾದರಿಗಳು, ಇಸ್ರೋದ ಉಪಗ್ರಹಗಳ ಸ್ಕೇಲ್ಡ್ ಮಾದರಿಗಳ ಪ್ರದರ್ಶನ ಇರಲಿದೆ.
ಕಾರ್ಯಕ್ರಮದಲ್ಲಿ ಎನ್ಇಎಸ್ ಕರ್ನಾಟಕ ಕಾರ್ಯದರ್ಶಿ ಬಿ.ಎಸ್ ಅರುಣ್ ಕುಮಾರ್, ಖಚಾಂಚಿ ತಲ್ಲಂ ದ್ವಾರಕಾನಾಥ್, ಜಂಟಿ ಕಾರ್ಯದರ್ಶಿ ಸುಧಾಕರ್ ಎಸ್ತೂರಿ, ಜಯನಗರ ನ್ಯಾಷನಲ್ ಕಾಲೇಜಿನ ಅಧ್ಯಕ್ಷರಾದ ಡಾ. ಪಿ. ಎಲ್ ವೆಂಕಟರಾಮರೆಡ್ಡಿ, ವರ್ಕ್ಸ್ ಕಮಿಟಿ ಅಧ್ಯಕ್ಷರಾದ ಜಿ ಎಂ ರವೀಂದ್ರ, ಪ್ರಾಂಶುಪಾಲರಾದ ಡಾ. ಪಿ ಎಲ್ ರಮೇಶ್, ಪ್ರೊ. ಎಸ್ ಮಮತಾ ಉಪಸ್ಥಿತರಿದ್ದರು.