ಶಿವಮೊಗ್ಗ: ಕುಟುಂಬದ ಸದಸ್ಯರು ಪ್ರತಿ ನಿತ್ಯ ಮನೆಯಲ್ಲಿ, ಉದ್ಯೋಗಿಗಳು ಕೆಲಸ ಮಾಡುವ ಸ್ಥಳಗಳಲ್ಲಿ, ವಿದ್ಯಾರ್ಥಿಗಳು ಶಾಲಾ-ಕಾಲೇಜಿನ ಭೋಜನ ಸಂದರ್ಭದಲ್ಲಿ, ಮದುವೆ, ನಾಮಕರಣ, ಗೃಹಪ್ರವೇಶ ಮತ್ತಿತರೆ ಶುಭಕಾರ್ಯ ಸೇರಿದಂತೆ ಮತ್ತಿತರೆಡೆ ಆಹಾರ ವ್ಯರ್ಥ ಮಾಡುವುದು ಕಂಡು ಬರುತ್ತದೆ. ಹಸಿವು ನೀಗಿಸುವ ಅನ್ನ ಪರಬ್ರಹ್ಮ. ಆಹಾರವೇ ದೇವರು. ಆದ್ದರಿಂದ ಆಹಾರ ವ್ಯರ್ಥ ಮಾಡಬಾರದು ಎಂದು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಎಂ.ವಿ. ನಾಗೇಶ್ ಮನವಿ ಮಾಡಿದರು.
ತಾಲೂಕಿನ ಕುಂಚೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ್ಯಾದ್ರಿ ಇಕೋ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ಅಬ್ಬಲಗೆರೆ ಬಳಿಯ ಈಶ್ವರವನದಲ್ಲಿ ೧೩-೧೨-೨೦೨೪ರ ಶುಕ್ರವಾರ ಮಧ್ಯಾಹ್ನ ೧ ಗಂಟೆಗೆ ಹಮ್ಮಿಕೊಂಡಿದ್ದ ನಿಸರ್ಗ ನಡಿಗೆ ಸಂದರ್ಭದಲ್ಲಿ ವನ ಭೋಜನ ಏರ್ಪಡಿಸಿದ್ದ ಅವರು ಮಕ್ಕಳಿಗೆ ಆಹಾರ ವ್ಯರ್ಥ ಮಾಡದಿರುವ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ದೇಶದಲ್ಲಿ ಹಲವಾರು ಮಂದಿ ಒಂದು ಹೊತ್ತಿ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದಾರೆ. ಶೇ. ೩೦ ಮಂದಿ ಮೂರು ಹೊತ್ತು ಊಟ ಮಾಡಲೂ ಸಾಧ್ಯವಾಗದಂತಹ ಸ್ಥಿತಿಯಲ್ಲಿದ್ದಾರೆ. ಶೇ. ೧೦ ಮಂದಿ ಒಪ್ಪತ್ತಿನ ಊಟ ಮಾಡುತ್ತಿದ್ದಾರೆ. ಒಂದೆಡೆ ಹಸಿವು ನೀಗಿಸಿಕೊಳ್ಳಲು ಜನರು ಪರದಾಡುತ್ತಿದ್ದರೆ, ಮತ್ತೊಂದೆಡೆ ಹಾಕಿಸಿಕೊಂಡ ಆಹಾರವನ್ನು ಸಂಪೂರ್ಣವಾಗಿ ತಿನ್ನದೆ ವ್ಯರ್ಥ ಮಾಡಿ ಕಸದ ತೊಟ್ಟಿಗೆ ಬಿಸಾಡಲಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ನಮ್ಮ ತಿನ್ನುವ ಸಾಮರ್ಥ್ಯ ಮತ್ತು ಹಸಿವು ಎಷ್ಟಿದೆಯೋ ಅಷ್ಟು ಪ್ರಮಾಣದಲ್ಲಿ ಆಹಾರವನ್ನು ತಟ್ಟೆಗೆ ಬಡಿಸಿಕೊಳ್ಳಬೇಕು. ಕಡಿಮೆ ಆಹಾರ ಸೇವಿಸುವವರು, ಹೆಚ್ಚು ತಿನ್ನುವವರಿಗಿಂತ ಆರೋಗ್ಯವಂತರೂ ದೀರ್ಘಾಯುಷಿಗಳೂ ಆಗಿರುತ್ತಾರೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ ಎಂದು ತಿಳಿಸಿದರು.
ತುತ್ತನ್ನು ಬಾಯಿಗಿಡುವ ಮೊದಲು ತಟ್ಟೆಯಲ್ಲಿರುವ ಆಹಾರಕ್ಕೆ ಮನಃಪೂರ್ವಕವಾಗಿ ವಂದಿಸಬೇಕು. ಇದರಿಂದ ಆಹಾರದ ಬಗೆಗೆ ಪೂಜನೀಯ ಭಾವ ಬರುವುದರ ಜೊತೆಗೆ, ತಟ್ಟೆಯಲ್ಲಿ ಆಹಾರವನ್ನು ವ್ಯರ್ಥವಾಗಿ ಬಿಡಲು ಮನಸ್ಸು ಬರುವುದಿಲ್ಲ. ಅಲ್ಲದೆ ಆಹಾರ ಬಡಿಸುವವರು ಊಟಕ್ಕೆ ಕುಳಿತವರಿಗೆ ಹೆಚ್ಚಿಗೆ ತಿನ್ನಲು ಬಲವಂತಪಡಿಸಬಾರದು. ಅವರಿಗೆ? ಬೇಕೋ ಅ?ನ್ನೇ ಕೇಳಿ ಬಡಿಸಬೇಕೆಂದರು.
ಮದುವೆ ಮತ್ತಿತರೆ ಸಾಮಾಜಿಕ ಮತ್ತು ಧಾರ್ಮಿಕ ಸಮಾರಂಭಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಊಟ, ಉಪಾಹಾರ ವ್ಯರ್ಥ ಮಾಡುವುದನ್ನು ಸಂಪೂರ್ಣವಾಗಿ ನಿಬಂಧಿಸಬೇಕು. ಅನ್ನದ ಮಹತ್ವ ಅರಿತು ಹಸಿವಿಗೆ ಅನುಗುಣವಾಗಿ ಆಹಾರ ಸೇವಿಸಿ ಸಾಮಾಜಿಕ ಬದ್ಧತೆ ಕಾಪಾಡುವುದರ ಜೊತೆಗೆ ಆರೋಗ್ಯ ಸಂರಕ್ಷಿಸಿಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆಯೂ ವಿವರಿಸಿದ ಅವರು ಪ್ಲಾಸ್ಟಿಕ್ ಬಳಕೆಯನ್ನು ಬಹುತೇಕವಾಗಿ ಕಡಿಮೆ ಮಾಡಬೇಕು. ತರಕಾರಿ, ಹಣ್ಣು-ಹಂಪಲು, ದಿನಸಿ ಮತ್ತಿತರೆ ವಸ್ತುಗಳನ್ನು ಖರೀದಿಸಲು ಬಟ್ಟೆ ಚೀಲ ಬಳಸುವಂತೆ ಮಕ್ಕಳು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
ಪ್ರಭಾರ ಮುಖ್ಯ ಶಿಕ್ಷಕರಾದ ವಿ.ಜಿ. ಭುವನೇಶ್ವರಿ, ಶಿಕ್ಷಕರುಗಳಾದ ಲೀಲಾ ಡಿ.ಜಿ., ಪ್ರೇಮ್ ಕುಮಾರ್ ಎನ್.ಸಿ. ಭಾಗವಹಿಸಿದ್ದರು.
ನಾನು ವಾರಾನ್ನ ವಿದ್ಯಾರ್ಥಿಯಾಗಿದ್ದೆ: ನಾಗೇಶ
ಬಾಲ್ಯದಲ್ಲಿ ಕಡುಬಡತನದಿಂದಾಗಿ ನನಗೆ ಶಾಲೆಗೆ ಹೋಗುವುದು ಕಷ್ಟವಿತ್ತು. ಆದರೂ ಓದಬೇಕೆಂಬ ಛಲದಿಂದ ಶಾಲೆಗೆ ಹೋಗುತ್ತಿದ್ದೆ. ಒಂದು ಹೊತ್ತಿನ ಊಟಕ್ಕೂ ಕಷ್ಟವಿತ್ತು. ವಾರಾನ್ನದ ವಿದ್ಯಾರ್ಥಿಯಾಗಿ ಶಾಲಾ ಶಿಕ್ಷಣ ಪೂರೈಸಿದೆ. ಕೆಲಸ ಮಾಡುತ್ತಲೇ ಸಂಜೆ ಕಾಲೇಜಿನಲ್ಲಿ ಪದವಿ ಪಡೆದೆ. ಹಸಿವು ನೀಗಿಸುವ ಪ್ರತಿ ಅಗುಳು ಕೂಡ ಅಮೂಲ್ಯ. ಹಸಿವಿನ ಸಂಕಟ ಎಂತಹದ್ದು ಎಂಬುದರ ಅರಿವಿದೆ. ಆದ್ದರಿಂದ ಮನೆ, ಶಾಲಾ ಬಿಸಿಯೂಟ, ಮದುವೆ ಮತ್ತಿತರೆ ಸಮಾರಂಭಗಳಲ್ಲಿ ಆಹಾರವನ್ನು ವ್ಯರ್ಥ ಮಾಡಬಾರದು. ಈ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕಿದೆ. ಮುಂದೆ ಅವರು ದೊಡ್ಡವರಾದಾಗ ಅನ್ನದ ಮಹತ್ವ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಎಂ.ವಿ. ನಾಗೇಶ್ ತಿಳಿಸಿದರು