ಶಿವಮೊಗ್ಗ: ಮಕ್ಕಳು ಜಂಕ್ ಫುಡ್ ಆಹಾರಗಳ ಸೇವನೆಯಿಂದ ದೂರವಿರುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮಕ್ಕಳ ತಜ್ಞ, ಐಎಂಎ ಖಜಾಂಚಿ ಡಾ. ರಾಜಾರಾಮ್.ಯು.ಎಚ್. ಹೇಳಿದರು.
ಅವರು ಜಯನಗರದ ಸರ್ವೋದಯ ಶಾಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘ, ಫ್ರೆಂಡ್ಸ್ ಸೆಂಟ್ರರ್ ಸಹಯೋಗದೊಂದಿಗೆ ಚಿಣ್ಣರೊಂದಿಗೆ ಚಂದದ ಸಮಯ ವಿಷಯ ಕಾರ್ಯಕ್ರಮದಲ್ಲಿ ಮಾತನಾಡಿ, ಜಂಕ್ ಫುಡ್‌ಗಳ ಸೇವನೆಯಿಂದ ಬೊಜ್ಜು, ಪಿಸಿಒಡಿ, ರಕ್ತದೊತ್ತಡ ಮುಂತಾದ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ತಿಳಿಸಿದರು.
ಮನೊರೋಗ ತಜ್ಞ ಡಾ. ಶಶಿಧರ್.ಎಚ್.ಎಲ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ಜತೆ ಕೌಶಲ್ಯಗಳು ಸಹ ಮುಖ್ಯ. ಗುಣಮಟ್ಟದ ಜೀವನಕ್ಕೆ ಅನುಕೂಲ ಮಾಡಿಕೊಡುತ್ತವೆ. ಒತ್ತಡ ನಿರ್ವಹಣೆಗೆ ಸಮತೋಲನ ಆಹಾರ, ಸರಿಯಾದ ನಿದ್ರಾಕ್ರಮ, ನಿತ್ಯ ವ್ಯಾಯಾಮ, ಆಪ್ತರೊಡನೆ ಸಮಾಲೋಚನೆ, ಸಮಯ ಪಾಲನೆಯಂಹ ಅಂಶಗಳು ನೆರವಾಗುತ್ತವೆ ಎಂದರು.
ಲೇಖಕಿ ಶ್ರೀರಂಜಿನಿ ದತ್ತಾತ್ರಿ ಸ್ವಚ್ಚ ಭಾರತ ಮಕ್ಕಳ ಜವಾಬ್ದಾರಿ ಕುರಿತು ಮಾತನಾಡಿ, ಶಾಲೆ, ಮನೆ ಸುತ್ತಮುತ್ತ, ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ಪರಿಸರ ಕಾಪಾಡುವ ಜವಾಬ್ದಾರಿ ನಮ್ಮದೆ ಆಗಿದೆ. ಮುಂದಿನ ಪೀಳಿಗೆಗೂ ಶುದ್ಧ, ಶುಭ್ರ, ಸಂಪದ್ಭರಿತ ಸಮಾಜ ಕಾಪಾಡುವ ಜವಾಬ್ದಾರಿ ನಮ್ಮದು ಎಂದರು.
ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಶ್ರೀಧರ್ ಮಾತನಾಡಿ, ಮಕ್ಕಳಿಗೆ ಶಾಲೆಗಳಲ್ಲಿ ಶಿಕ್ಷಣ ನೀಡುವುದರ ಜತೆಗೆ ಆರೋಗ್ಯದ ಮಾಹಿತಿ ಅವಶ್ಯಕತೆ ಇದೆ. ಮಕ್ಕಳ ಕೌಶಲ್ಯ ವೃದ್ಧಿಸುವ ಚಟುವಟಿಕೆಗಳು ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗಲಿವೆ ಎಂದು ಹೇಳಿದರು.
ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಮಾತನಾಡಿ, ಅತಿಯಾದ ಮೊಬೈಲ್ ಬಳಕೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಖು. ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಪೂರಕವಾಗಿ ಮಾರ್ಗದರ್ಶನ ನೀಡಬೇಕು ಎಂದರು.
ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ಕಾರ್ಯದರ್ಶಿ ಡಾ. ವಿನಯಾ ಶ್ರೀನಿವಾಸ್ ಮಾತನಾಡಿ, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಿವಿಧ ವರ್ಗದ ಜನರಿಗೆ ಮನೋ-ಸಾಮಾಜಿಕ-ದೈಹಿಕ ಆರೋಗ್ಯ ಸಂಬಂಧಿತ ಜಾಗೃತಿ ಮೂಡಿಸುವಲ್ಲಿ ಐಎಂಎ ಸದಾ ಸಿದ್ಧ ಎಂದರು.
ವಿದುಷಿ ಸಹನಾ ಚೇತನ್ ಅವರು ಭಾವಭಂಗಿಗಳು ಹಾಗೂ ನವರಸಗಳ ಅಭಿವ್ಯಕ್ತಿ ಕುರಿತು ವಿವರಣೆ ನೀಡಿದರು. ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಸುನೀತಾ ಮೋಹನ್ ಗಿಡಮೂಲಿಕೆಗಳಿಂದ ಆರೋಗ್ಯಕರ ಪಾನೀಯ ಕುರಿತು ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು.
ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳಿಗೆ ದುಂಡಕ್ಷರ ಬರವಣಿಗೆ ಮತ್ತು ಕಾಗದ ಕೌಶಲ್ಯ ಸ್ಪರ್ಧೆ ಏರ್ಪಡಿಸಿ ಶಾಲೆಯ ಎಲ್ಲ ಮಕ್ಕಳಿಗೂ ಬಹುಮಾನ ವಿತರಿಸಲಾಯಿತು.
ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ನಾಗರಾಜ್, ಖಜಾಂಚಿ ರಮೇಶ್ ಬಾಬು, ಕಾರ್ಯದರ್ಶಿ ರವೀಂದ್ರನಾಥ ಐತಾಳ್, ಮೋಹನ್.ಎಲ್.ಎಂ.. ಸರ್ವೋದಯ ಪಿಯು ಕಾಲೇಜಿನ ಪ್ರಾಚಾರ್ಯ ರವಿಕುಮಾರ್, ಸರ್ವೋದಯ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಪಿ.ನಳಿನಿ ಉಪಸ್ಥಿತರಿದ್ದರು.