ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯ ಲೋಕಕ್ಕೆ, ಧರ್ಮ,ಅಧ್ಯಾತ್ಮ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ ಶ್ರೀಮಠ
ಶಿವಮೊಗ್ಗ ಜಿಲ್ಲೆ ಈ ನಾಡಿನ, ದೇಶದ ನೆಲದ ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಲೋಕಕ್ಕೆ, ಧರ್ಮ, ಅಧ್ಯಾತ್ಮದ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದೆ.
ಇತಿಹಾಸ ಪ್ರಸಿದ್ಧವಾದ ಈ ಜಿಲ್ಲೆಯಲ್ಲಿ ಸಾವಿರಾರು ಸಾಧಕರ ಸಾಧನೆ ಮತ್ತು ಸಂಗತಿಗಳಿವೆ. ಈ ಎಲ್ಲವನ್ನು ಮೆಲುಕು ಹಾಕುತ್ತ ಹೊರಟರೆ ಶಿವಮೊಗ್ಗದ ಶರಾವತಿ ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆ ಮತ್ತು ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಹೆಸರು ಬೆಸೆದುಕೊಳ್ಳುತ್ತದೆ.
೧೯೮೪ ರಲ್ಲಿ ಶಿವಮೊಗ್ಗದ ಶರಾವತಿ ನಗರದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಯು ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥಸ್ವಾಮೀಜಿಯವರ ನೇತೃತ್ವದಲ್ಲಿ ಆರಂಭವಾಯಿತು. ಇಲ್ಲಿಂದ ಸಿಹಿಮೊಗೆಯ ನೆಲದ ಜನರ ಜೀವನಸಾರ ಹೊಸ ರೀತಿಯಲ್ಲಿ ಆರಂಭವಾಯಿತು. ಶಿವಮೊಗ್ಗದ ಜನಮನದ ಜ್ಞಾನಾಭ್ಯುದಯಕ್ಕಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಮುಂಚೂಣಿ ಮಠಗಳಲ್ಲಿ ಗುರುತಿಸಬಹುದಾದ ಮೊದಲ ಹೆಸರು ಶ್ರೀ ಆದಿಚುಂಚನಗಿರಿ ಶಾಖಾಮಠ. ಶ್ರೀ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು. ಪ್ರಸನ್ನವದನರೂ, ಸುಚಿತ್ತ, ಸುಪ್ರಸಿದ್ಧ ವಾಕ್ಚಾತುರ್ಯವುಳ್ಳ ಗುರುಗಳು ಶಿವಮೊಗ್ಗದ ಜಡಕಲ್ಲುಗಳಿಗೆ ಸುಂದರ ಆಕೃತಿ ನೀಡಿದ ಸ್ವಾಮೀಜಿಯವರು ಶಿವಮೊಗ್ಗ ನಗರದ ಹೊಸ ಮನ್ವಂತರಕ್ಕೆ ನಾಂದಿಯಾದರು.
ಕರ್ನಾಟಕದ ಕಾಶ್ಮೀರವೆಂದೇ ಖ್ಯಾತವಾಗಿರುವ ಕೊಡಗು ಜಿಲ್ಲೆಯ ಸಂಪಾಂಜೆ ಎಂಬಲ್ಲಿ ೧೯೬೭ರಲ್ಲಿ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ ಪೂಜ್ಯರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಊರುಬೈಲು ಚೆಂಬುವಿನಲ್ಲಿ ಮುಗಿಸಿದರು. ನಂತರ ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ಪಾಯಶ್ವಿನಿ ಜ್ಯೂನಿಯರ್ ಕಾಲೇಜ್ ಸಂಪಾಂಜೆಯಲ್ಲಿ ಪಡೆದರು.
ನಂತರ ಜೀವನದಲ್ಲಿ ಏನನ್ನಾದರೂ ಮಹತ್ತರವಾದುದನ್ನು ಸಾಧಿಸಬೇಕೆಂಬ ಸದುದ್ದೇಶದಿಂದ ಐಹಿಕ ಜೀವನದಲ್ಲಿ ವೈರಾಗ್ಯವನ್ನು ಹೊಂದಿ ಪರಮಪೂಜ್ಯ ಜಗದ್ಗುರು ಶ್ರೀ. ಶ್ರೀ. ಶ್ರೀ.ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರಿಂದ ಬ್ರಹ್ಮಚಾರಿ ದೀಕ್ಷೆಯನ್ನು ಪಡೆದುಕೊಂಡರು. ಶ್ರೀ. ಕಾಲಬೈರವೇಶ್ವರ ವೇದ, ಆಗಮ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಶಿಕ್ಷಣವನ್ನು ಪೂರೈಸಿ ಉನ್ನತ ವ್ಯಾಸಾಂಗಕ್ಕಾಗಿ ಬೆಂಗಳೂರಿನ ಕೈಲಾಸ ಆಶ್ರಮದ ಪರಮಪೂಜ್ಯ ಶ್ರೀ.ಶ್ರೀ. ತಿರುಚ್ಚಿ ಮಹಾಸ್ವಾಮೀಜಿ ಅವರ ಬಳಿ ತೆರಳಿದರು. ಅಲ್ಲಿ ಐದು ವರ್ಷಗಳ ಕಾಲ ಸಂಸ್ಕೃತ, ವೇದ, ಆಗಮ ಹಾಗೂ ಜ್ಯೋತಿಷ್ಯವನ್ನು ಅಭ್ಯಾಸಮಾಡಿ ನಂತರ ಶ್ರೀ ಆದಿಚುಂಚನಗಿರಿ ಪಾಠ ಶಾಲೆಯಲ್ಲಿ ವೇದ ವಿದ್ವತ್ತನ್ನು ಪೂರೈಸಿರುತ್ತಾರೆ.
ಪರಮಪೂಜ್ಯರಿಗೆ ಜನುಮದಿನದ ಶುಭಾಶಯಗಳು
ನನ್ನ ಜೀವನದಲ್ಲಿ ನಾ ಕಂಡ ಅಪರೂಪದ, ಜಗದ ಶ್ರೇಯಸ್ಸು ಬಯಸುವ, ಮನುಜಕುಲವನ್ನು ತಿದ್ದಿತೀಡುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಸೇರಿದಂತೆ ಹತ್ತು ಹಲವು ಶಾಖೆಗಳ ನೂರಾರು ಶಾಲಾ-ಕಾಲೇಜುಗಳ ಮೂಲಕ ಲಕ್ಷಾಂತರ ಮಕ್ಕಳಿಗೆ ಸೂಕ್ತ ವಿದ್ಯೆ ಜೊತೆಗೆ ಕ್ರೀಡೆ ಮೂಲಕ ಬದುಕಿಗೆ ದಾರಿದೀಪವಾಗಿ, ಬೆಳಕಿನ ಬದುಕು, ಭಾಂದವ್ಯ ಬೆಳೆಸಿಕೊಟ್ಟಂತಹ, ಬೆಳೆಸುತ್ತಿರುವ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರಿಗೆ ತುಂಬು ಹೃದಯದ, ಭಕ್ತಿಪೂರ್ವಕ ಜನುಮದಿನದ ಶುಭಾಶಯಗಳು. ನಿಮ್ಮಿಂದ ನಾವು 🙏
- ಗಜೇಂದ್ರ ಸ್ವಾಮಿ,
ತುಂಗಾತರಂಗ ದಿನಪತ್ರಿಕೆ,
ಶಿವಮೊಗ್ಗ
ಜ್ಞಾನಪ್ರಸಾರವೇ ಸಮಾಜದ ಉನ್ನತಿಗೆ ಮೂಲಾಧಾರ ಎಂಬುದನ್ನು ಅರಿತ ಗುರುಗಳು ಜ್ಞಾನಪ್ರಸಾರಕ್ಕಾಗಿ ಶಿಕ್ಷಣ ಕ್ಷೇತ್ರವನ್ನು ಆರಿಸಿಕೊಂಡರು ಅಲ್ಲದೆ ಈ ಕ್ಷೇತ್ರದಲ್ಲಿ ಇಂದು ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಇಂದು ಶಿವಮೊಗ್ಗ ಶಾಖಾಮಠ ೩೪ ವರ್ಷವನ್ನು ಪೂರೈಸಿ ಮುಂದೆ ಸಾಗುತ್ತಿರುವ ಸುಸಂದರ್ಭದಲ್ಲಿ ಹಿಂತಿರುಗಿ ನೋಡಿದರೆ ಚೈತನ್ಯದ ಚಿಲುಮೆಯಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಹತ್ತಿಬಂದ ಮೆಟ್ಟಿಲುಗಳು ನೂರಾರು. ಶ್ರೀಮಠವನ್ನು ಸುಜ್ಞಾನ ಹಾಗೂ ವಿಜ್ಞಾನದಿಂದೊಡಗೂಡಿದ ಜ್ಞಾನದ ಮಹಾಮನೆಯನ್ನಾಗಿಸಿ,ಅಜ್ಞಾನದಿಂದ ಕೂಡಿದ ಜನಮನದ ಅಂಧಕಾರವನ್ನು ತೊಲಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಪೂಜ್ಯ ಸದ್ಗುರುಗಳು ಅನ್ನ, ಅಕ್ಷರ,ಅನುಕಂಪ, ಅರಣ್ಯ, ಆಶ್ರಯ,ಆರೋಗ್ಯ,ಆಕಳು,ಅಧ್ಯಾತ್ಮ ಎಂಬ ಅಷ್ಟ ತತ್ತ್ವಗಳನ್ನು ಪರಮಪೂಜ್ಯರಿಂದ ಕಲಿತು ತಾವು ಸಹ ತಮ್ಮ ಶಾಖೆಯಲ್ಲಿ ಇವೆಲ್ಲವುಗಳನ್ನು ಬೆಳೆಸುವ ಪ್ರಯತ್ನದಲ್ಲಿದ್ದಾರೆ . ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಕಾಲಿಟ್ಟ ಕಡೆಯೆಲ್ಲ ಶಿಸ್ತು, ಸ್ವಚ್ಛತೆ ಉತ್ಸಾಹವೇ ತುಂಬಿ ಹರಿದು ಸದೃಢ ಹಾಗೂ ಸ್ವಾವಲಂಬಿ ಸಮಾಜದ ನಿರ್ಮಾಣದ ಅಡಿಗಲ್ಲಾಗಿ ನಿಂತಿದ್ದಾರೆ. ತ್ರಿವಿಧ ದಾಸೋಹಿಗಳೆಂದು ಹೆಸರಾದ ತಮ್ಮ ಪರಮ ಪೂಜ್ಯ ಗುರುಗಳ ಮಾರ್ಗದರ್ಶನದಲ್ಲೇ ಬೆಳೆದು ತಮ್ಮ ದರ್ಶನದೊಂದಿಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಅವಿಸ್ಮರಣೀಯ ಸೇವೆಗಳ ಮೂಲಕ ಶಿವಮೊಗ್ಗದ ನಗರ ಜನತೆಯ ಪ್ರೀತಿ ವಿಶ್ವಾಸ ಗಿಟ್ಟಿಸಿಕೊಂಡಿದ್ದಾರೆ.
ಶ್ರೀ ಆದಿಚುಂಚನಗಿರಿ ಶಿವಮೊಗ್ಗ ಶಾಖಾಮಠದ ಅಡಿಯಲ್ಲಿ ಬರುವ ವಿದ್ಯಾಸಂಸ್ಥೆಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ೧೦,೦೦೦ ಕ್ಕೂ ಹೆಚ್ಚು, ಶಿಕ್ಷಣರಂಗದಲ್ಲಿ ತೀವ್ರವಾದ ಸ್ಪರ್ಧೆಯ ನಡುವೆಯೂ ಸಹ ಪೂಜ್ಯರ ಉತ್ಸಾಹ, ಕಲ್ಪನೆ ಕುತೂಹಲ ಮತ್ತು ಕಾರ್ಯತತ್ಪರತೆಯ ಕುರುಹಾಗಿ ಇಂದಿಗೂ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವಿದ್ಯಾಸಂಸ್ಥೆಗಳು ಸಂಖ್ಯೆ ಹಾಗೂ ಸತ್ವದಲ್ಲಿ ಪೈಪೋಟಿಯಿಂದ ಮುನ್ನುಗುತ್ತಿವೆ.
ಸಮಾಜಮುಖಿ ಕಾರ್ಯಗಳು :
ಶಿವಮೊಗ್ಗ ಜಿಲ್ಲೆ ಹಾಗೂ ಉತ್ತರಕನ್ನಡ ಜಿಲ್ಲೆಯ ಜನರಿಗೆ ಅನುಕೂಲವಾಗುವಂತೆ ಸಾಕಷ್ಟು ಸಮಾಜಮುಖಿ ಕಾರ್ಯಗಳು ಸಹ ಶ್ರೀ ಮಠದ ಶಿವಮೊಗ್ಗ ಶಾಖೆಯಿಂದ ನಡೆಯುತ್ತಿವೆ. ಸಾಮೂಹಿಕ ವಿವಾಹ, ಚುಂಚಾದ್ರಿ ಕಲೋತ್ಸವ, ಮಕ್ಕಳ ಸಾಹಿತ್ಯ ಸಮ್ಮೇಳನಗಳು, ರಸಪ್ರಶ್ನೆ, ವಿಜ್ಞಾನ ವಸ್ತು ಪ್ರದರ್ಶನ , ಮಹಿಳಾ ಜಾಗೃತಿ ಮತ್ತು ತರಭೇತಿ ಶಿಬಿರ, ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಯುವ ಜನತೆ ತಮ್ಮ ಬೇಸಿಗೆ ರಜಾದಿನಗಳನ್ನು ಸದುಪಯೋಗ ಪಡಿಸಿಕೊಳ್ಳುವಂತಹ ಬೇಸಿಗೆ ಶಿಬಿರಗಳನ್ನು, ಆಯೋಜಿಸಲಾಗುತ್ತಿದೆ. ಕಲುಷಿತಗೊಳ್ಳುತ್ತಿರುವ ಸಮಾಜವನ್ನು ಸರಿಪಡಿಸಬೇಕಾದರೆ ಧರ್ಮಾಧಾರಿತ ಜೀವನ ಜಾರಿಗೆ ಬರಬೇಕು, ಎಂಬ ಕಾರಣಕ್ಕಾಗಿ ವೇದ, ಆಗಮ, ಉಪನಿಷತ್ಗಳನ್ನೊಳಗೊಂಡ, ಸಂಸ್ಕೃತ ಪಾಠಶಾಲೆಗಳು, ಅಧ್ಯಾತ್ಮ ಶಿಬಿರಗಳನ್ನು ನಡೆಸುತ್ತಾ ನೈತಿಕ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಭಾರತೀಯ ವೈದ್ಯ ಪದ್ಧತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ನಾಟಿವೈದ್ಯ ಸಮಾವೇಶವನ್ನು, ಯೋಗ ಶಿಬಿರವನ್ನು ನಡೆಸಿಕೊಂಡು ಬರಲಾಗುತ್ತಿದೆ.
ಪೂಜ್ಯರು ಕ್ರಮಿಸಬಹುದಾದ ಸೇವಾಪಥವನ್ನು ಕೇವಲ ಮೂರು ದಶಕದಲ್ಲಿ ಕ್ರಮಿಸುತ್ತಾ ಬಂದಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರ ಶಿವಮೊಗ್ಗ, ಗುರುಪುರ, ಕುಮುಟ, ಬಿ.ಆರ್. ಪಿ.,ಭದ್ರಾವತಿ, ಕಾರೇಹಳ್ಳಿ, ಎದ್ದುನಿಂತಿರುವ ಬೃಹತ್ ಕಟ್ಟಡಗಳು, ಕಲ್ಯಾಣ ಮಂಟಪ, ಸುಸಜ್ಜಿತವಾದ ಗ್ರಂಥಾಲಯ, ಪ್ರಯೋಗಾಲಯಗಳು, ಗೋಶಾಲೆಗಳು, ಸುತ್ತಲಿನ ಹಸಿರಿನ ಉದ್ಯಾನವನಗಳು, ಸಾವಿರಾರು ಶಿಕ್ಷಕವೃಂದ, ವಿದ್ಯಾರ್ಥಿವೃಂದವೇ ಇದಕ್ಕೆ ಸಾಕ್ಷಿಯಾಗಿದೆ. ಪರಮಪೂಜ್ಯರು ಸಮಾಜದ ಉನ್ನತಿಗಾಗಿ ಶ್ರಮಿಸಲೆಂದು ಸಂನ್ಯಾಸಿ ಪರಂಪರೆಯನ್ನು ಸೃಷ್ಟಿಸಿದರು. ತಮ್ಮಿಂದ ದೀಕ್ಷಾಬದ್ಧರಾದ ಶಿಷ್ಯರಿಗೆಲ್ಲ ಧರ್ಮ ಸಂಸ್ಕೃತಿಯ ರಕ್ಷಕರಾಗಿ ಸಮಾಜ ಸೇವೆಯನ್ನು ಮಾಡುವುದರಲ್ಲಿ ಭಗವತ್ಸಾಕ್ಷಾತ್ಕಾರವನ್ನು ಹೊಂದಿರೆಂದು ಬೋಧಿಸಿ ಜನಪರ ಕಾಳಜಿಯ ಸಂಸ್ಕಾರವನ್ನು ಮೈಗೂಡಿಸಿದ್ದಾರೆಂಬುದಕ್ಕೆ ಸಾಕ್ಷಿಯೇ ಪೂಜ್ಯ ಶ್ರೀಗಳ ಜೀವನಶೈಲಿ.
ಪೂಜ್ಯ ಶ್ರೀಗಳು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾಗಿ ಹತ್ತು ವರ್ಷಗಳು ಕಳೆದಿದ್ದು, ಪರಮಪೂಜ್ಯ ಜಗದ್ಗುರುಗಳಾದ ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ಶ್ರೀ ಮಠದ ಎಲ್ಲಾ ಕಾರ್ಯ ಚಟುವಟಿಕೆಗಳು ಯಶಸ್ವಿಯಾಗಿ ನಿರ್ವಹಿಸುತ್ತಾ ಮಠದ ಉನ್ನತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಶ್ರೀ ಮಠದ ಪ್ರಧಾನ ಕಾರ್ಯದರ್ಶಿಗಳಾಗಿ ಹೆಚ್ಚು ಕಾರ್ಯಭಾರಗಳ ಹೊರೆಯಿಂದಾಗಿ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿದ್ದರು ಶಿವಮೊಗ್ಗ ಶಾಖಾ ಮಠದ ಯಾವ ಕಾರ್ಯವನ್ನು ಕಡೆಗಣಿಸುವುದಿಲ. ಎಲ್ಲಾ ಆಗುಹೋಗುಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾ ಮುನ್ನಡೆಯುತ್ತಿರುವ ಪೂಜ್ಯರಿಗೆ ಕ್ಷೇತ್ರಾಧಿ ದೇವತೆಗಳು ಆರೋಗ್ಯ, ಆಯಸ್ಸು , ಯಶಸನ್ನು ನೀಡಿ ಹರಸಲಿ. ಪೂಜ್ಯ ಶ್ರೀಗಳ ಆಶೀರ್ವಾದ ಸರ್ವರಿಗೂ ಲಭಿಸಲಿ.