ವಾರದ ಅಂಕಣ- 23
ಈ ಜಗತ್ತೇ ತುಂಬಾ ವಿಶೇಷ ಕಣ್ರೀ, ಬದುಕಿಗೆ ತುತ್ತು ಮುಖ್ಯ,ತುತ್ತಿಗೆ ಹಣ ಮುಖ್ಯ, ತುತ್ತಿಗಿಂತ ಹಣಕ್ಕೆ ಗೌರವ ಜಾಸ್ತಿ. ಈ ನಡುವೆ ತುಂಬಾ ಕಷ್ಟಪಟ್ಟು ದುಡಿಯಿರಿ. ಸಾಕಷ್ಟು ಸಂಪಾದಿಸಿ, ನ್ಯಾಯಯುತವಾಗಿ ಇನ್ನೊಬ್ಬರ ತಲೆಯ ಮೇಲೆ ಕಲ್ಲು ಹಾಕದೆ ನಿಮ್ಮ ಶ್ರಮದ ದುಡಿಮೆಯನ್ನು ಮಾಡಿ. ಸ್ಥಿತಿವಂತರಾಗಿ ಹಾಗೆಯೇ ಹಣವಿದ್ದಾಗ, ಆದಾಯವಿದ್ದಾಗ ಹಂಚುವಾಗ ಅಥವಾ ಕೊಡುವಾಗ ಒಂದಿಷ್ಟು ಎಚ್ಚರಾವಸ್ಥೆ ನಿಮ್ಮಲ್ಲಿ ಇರಲಿ. ನಾಟಕ ಮಾಡ್ತಾ ಕಾಡಿಬೇಡಿ ಕೇಳುವವರ ಸಂಖ್ಯೆ ಮಿತಿಮೀರಿದೆ. ಅವರ ಜಾಲಿ ಬದುಕಿಗಾಗಿ ನಮ್ಮ ಬದುಕನ್ನು ಹಾಳು ಮಾಡಿಕೊಳ್ಳಬೇಡಿ ಎಂಬುದೇ ಇಂದಿನ ನೆಗೆಟಿವ್ ಅಂಕಣದ ವಾಸ್ತವಾಂಶಗಳ ನೈಜ ಚಿತ್ರಣ.
ದುಡಿಯಲು ನೂರಾರು ಮಾರ್ಗಗಳಿವೆ. ಸಂಪಾದಿಸಲು ಸಾಕಷ್ಟು ಹಾದಿಗಳಿವೆ. ನಿಯತ್ತಾಗಿ ದುಡಿದರೆ ಅದು ಮೈಗೆ ಹತ್ತುತ್ತದೆ ಎಂಬ ವಾಕ್ಯ ಈಗ ನಾನಾ ಅನುಮಾನಗಳನ್ನು, ಅವಘಡಗಳನ್ನು ನಮ್ಮ ಮುಂದೆ ನೀಡಿರುವುದು ದುರಂತವೇ ಹೌದು.
ಸಂಪಾದನೆಗಾಗಿ ಸೊಂಪಾಗಿದ್ದವರನ್ನು ಬಡಿಯುವುದು ಎಷ್ಟರಮಟ್ಟಿಗೆ ಸರಿ? ಕೆಲ ವಿಚಿತ್ರ ಮನಸ್ಸುಗಳು ನಿತ್ಯ ಇಂತಹ ಹರಾಮಿ ಬದುಕನ್ನು ರೂಪಿಸಿಕೊಂಡಿರುತ್ತಾರೆ. ಹೊಸ ಹೊಸ ಕಿತ್ತುಕೊಳ್ಳುವ ಗಿರಾಕಿಗಳನ್ನು ನಿತ್ಯ ಹುಡುಕುತ್ತಿರುವುದನ್ನು ನಮ್ಮ ನಡುವೆ ಕಂಡಿದ್ದೇವೆ, ಕಾಣುತ್ತಿದ್ದೇವೆ, ಕಳೆದುಕೊಂಡಿದ್ದಾರೆ. ಕಳೆದುಕೊಂಡಿದ್ದೇವೆ. ಆದರೂ ಬುದ್ದಿ ಬಾರದ ಅದೆಷ್ಟೋ ಜನ ಈಗಲೂ ಅದೇ ವಂಚನೆಗೆ ಅದೇ ಮೋಸಕ್ಕೆ ಬಲಿಯಾಗುತ್ತಿರುವುದು ನಿಜದ ವಾಸ್ತವದ ಘಟನೆಗಳಲ್ಲಿ ಸೇರಿಕೊಳ್ಳುತ್ತಿರುವುದು ಕಂಡು ಬರುತ್ತಿದೆಯಲ್ಲವೇ?.
ಕಷ್ಟಪಟ್ಟು ದುಡಿಯುವ ರೈತನ ಶ್ರಮ ಭೂ ಮಾತೆಗೆ ಗೊತ್ತಾಗುತ್ತದೆ, ಫಲ ಬಿಟ್ಡಮೇಲೆ ಆತನ ಆನಂದವೇ ಆದಾಯವಾಗುತ್ತದೆ. ಕಾರ್ಖಾನೆಯಲ್ಲಿ ಹಗಲಿಡಿ ತಾಪಗಳ ನಡುವೆ ಕೆಲಸ ಮಾಡುವ ಕಾರ್ಮಿಕರ ಶ್ರಮ ಆ ಕಾರ್ಖಾನೆಗೆ ಗೊತ್ತಾಗುತ್ತೆ. ಸುಮ್ಮನೆ ಕುರ್ಚಿಯ ಮೇಲೆ ಕುಳಿತು ತಲೆಗೆ ನಾನಾ ಹರಾಮಿತನ ತುಂಬಿಕೊಂಡು ಒಟ್ಟಾರೆ ಗೆಬರುವ ಮನೋಭಾವ ಬಂದಿರುವವನ ಶ್ರಮ ಯಾರಿಗೆ ಗೊತ್ತಾಗುತ್ತದೆ. ಕಳೆದುಕೊಂಡವ ಹಿಡಿ ಶಾಪ ಆತನಿಗೆ ಬರಬಾರದ್ದನ್ನ ತರುತ್ತದೆ, ಆದರೆ ಅದಕ್ಕೆ ಒಂದಿಷ್ಟು ಸಮಯ ಬೇಕು ಎಂಬುದು ನಮ್ಮ ನಡುವಿನ ಸಹಜಮಾತಲ್ಲವ
ಹಾಗಾಗಿಯೇ ಹೇಳುವುದು “ನಾಕಾಣೆ ದುಡಿಯಿರಿ ಸಾಕು, ಅದು ನಿಮ್ಮ ನಿಯತ್ತಿನ ಹಣವಾಗಿರಲಿ” ಎಂಬುದೇ ಇಂದಿನ ಅತ್ಯಂತ ವಿಶೇಷ ಸಲಹೆ.
ಕೊಟ್ಟದ್ದನ್ನು ಪಡೆಯುವಾಗ ಕೊಟ್ಟವನು ಅನುಭವಿಸಿದ ಶ್ರಮ ಕೊಟ್ಟವನು ಪಟ್ಟ ಪಾಡು ಯಾವ ನನ್ಮಕ್ಕಳಿಗೂ ಬೇಡ ಎನ್ನುತ್ತಾರೆ. ಅಲ್ಲಿ ಅನುಭವಿಸುವವನು ಮತ್ತೆ ಯಾರಿಗೂ ಕೊಡಬಾರದು ಎಂದುಕೊಳ್ಳುತ್ತಾನೆ. ಆದರೆ ಆತನಲ್ಲಿರುವ ದೈವತ್ವದ ಮನಸ್ಸು, ಮುಗ್ಧತೆಯ ಭಾವನೆ ಮತ್ತೆ ಅಂತದೇ ತೊಂದರೆಗಳಿಗೆ ಸಿಗಿಸುವುದು ಸಾಮಾನ್ಯ ವಾಗಿರುತ್ತೆ ಅಲ್ಲವೇ?
ದುಡಿಮೆ ಎಂಬುದು ಹೇಗಿರಬೇಕು ಗೊತ್ತೇ? ತಾಯಿಯೊಬ್ಬಳು ಮಗುವನ್ನು ಹೆರುವಾಗ ಅನುಭವಿಸುವ ಕಷ್ಟ, ನೋವು, ಯಾತನೆಯಂತಹ ಶ್ರಮವಿರಬೇಕು. ಅದೇ ಮಗುವಾದಾಗ ತಾಯಿ ಅನುಭವಿಸುವ ಖುಷಿ, ಸಂತೋಷ, ಆನಂದ ದುಡಿಮೆಯಾಗಿರಬೇಕು ಎಂಬುದು ಮನದಾಳದ ಮಾತು.
ಈಗಲೂ ಸೈಬರ್ ಪೊಲೀಸ್ ಠಾಣೆಯಲ್ಲಿ ನಿತ್ಯ ನಿರಂತರ ಅಂತರ್ಜಾಲದ ಮೂಲಕ ವಂಚಿಸಿದ ಪ್ರಕರಣಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಕಾಣುತ್ತಿದ್ದೇವೆ ಕಳೆದುಕೊಂಡವನೇ ಕಳೆದುಕೊಳ್ಳುತ್ತಿರುವುದು ಇಲ್ಲಿ ಸಹಜವಾಗಿದೆ. ಅತಿಯಾಸೆಗೆ ಬಲಿಯಾಗಬೇಡಿ.ನಂಬಿಕೆ ಎಂಬುದು ನಮ್ಮನ್ನು ವಂಚಿಸುವುದು ಬೇಡ. ಎಚ್ವರಾವಸ್ಥೆ ಅತ್ಯಂತ ಅಗತ್ಯ.
ಯಾರೇ ಆಗಲಿ ಹೇಗೆ ಆಗಲಿ ದುಡಿಮೆಯ ದಾರಿಯಲ್ಲಿ ಹಣ ಸಂಪಾದನೆ ಹಾದಿಯಲ್ಲಿ ನಮ್ಮನ್ನು ಕಳೆದುಕೊಂಡು ಪರರನ್ನು ಅಭಿವೃದ್ಧಿಪಡಿಸಲಾರ. ತನ್ನ ಎಲ್ಲವನ್ನು ಎಲ್ಲರಿಗೂ ಕೊಡಲಾರ ಎಂಬ ಸತ್ಯ ಗೊತ್ತಿದ್ದರೂ ಸಹ ನಿಮಗಿಷ್ಟು ಕೊಡುತ್ತೇನೆ ಅಂದಾಕ್ಷಣ ಹಾಕುವ ಕಾಯಕ ನಮ್ಮ ನಡುವೆ ನಡೆಯುತ್ತಿರುವುದು ದುರಂತವಲ್ಲವೇ,?
ದುಡಿಮೆಯ ದನದಲ್ಲಿ ಸ್ವಲ್ಪ ಸಹಾಯ ದಾನ ಧರ್ಮ ಒಳ್ಳೆಯದು ಹಾಗೆಂದ ಮಾತ್ರಕ್ಕೆ ಅದನ್ನು ನೋಡಿ ಕೊಡಿ. ನಿಯತ್ತಾಗಿ ಬಳಕೆ ಮಾಡಿಕೊಳ್ಳುವವರಿಗೆ ಕೊಡಿ ಎಂಬುದೇ ಅತ್ಯಂತ ಕಳಕಳಿಯ ಸಸಾರ್ವಜನಿಕ ಎಚ್ಚರಿಕೆ.
ಕೆಲವೊಬ್ರಿಗೆ ಕೊಟ್ರೆ ನಿಮಗೆ “ಶನಿ” ಬೆನ್ನಹತ್ತುತ್ತಾನೆ ಕಣ್ರಿ, ನೆಗಿಟೀವ್ ಥಿಂಕಿಂಗ್ ಅಂಕಣದೊಳಗೊಂದು ಸುತ್ತು…, ಹೇಗಿದೆ ಓದಿ, ಅಭಿಪ್ರಾಯಿಸಿ, ನಿಮ್ಮ ಸಲಹೆ, ಮಾತಿಲ್ಲಿ ಬರಹವಾಗುತ್ತೆ
- ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
ಕೆಲವರ ಮನಸ್ಥಿತಿ ಅತ್ಯಂತ ವಿಚಿತ್ರ. ಅವರಿಗೆ ನೀವು ದೊಡ್ಡ ಮನಸ್ಸು ಮಾಡಿ. ಏನಾದರೂ ಕೊಟ್ಟಿರೆಂದರೆ ಸಾಕು. ನಿಮಗೆ ನಿಜವಾಗಿಯೂ ಶನಿ ಬೆನ್ನತ್ತುತ್ತಾನೆ. ಅಂದರೆ ನಿಮ್ಮ ವ್ಯವಹಾರಿಕ ದುಡಿಮೆ ಹಾಗೂ ಮನದ ತಾಳ್ಮೆ ಮತ್ತು ನೆಮ್ಮದಿ ಕಳೆದು ಹೋಗುತ್ತದೆ. ಅದನ್ನು ಅನುಭವಿಸುವ ಮುನ್ನ ಕೊಡುವಾಗ ಒಂದಿಷ್ಟು ಯೋಚಿಸಿ ಕೊಡಿ.
ಇಂತಹ ಯೋಚನೆ ರಹಿತವಾಗಿ ಕೊಟ್ಟು ಸಾಕಷ್ಟು ಯಮ ಹಿಂಸೆ ಪಟ್ಟಿರುವ ಜನರನ್ನು ನಾವು ಈಗಲೂ ಗಮನಿಸಿದ್ದೇವೆ, ಗಮನಿಸುತ್ತೇವೆ. ಇಂತಹದೊಂದು ಘಟನೆಯನ್ನು ಅನುಭವವನ್ನು ಕೆಲವರು ಅನುಭವಿಸಿರುತ್ತಾರೆ. ಅದರಿಂದ ನರಕಯಾತನೇ ಪಟ್ಟಿರುತ್ತಾರೆ, ಹೇಳಲಾಗದೆ ಏನು ಮಾಡಲಾಗದೆ ಕೊಟ್ಟ ನಂತರ ನಿಮ್ಮ ಕೈಯಲ್ಲಿ ಕಿಲುಬು ಕಾಸು ಉಳಿಯುವುದಿಲ್ಲ ಕಳೆದುಕೊಳ್ಳುವುದು ನಿಜಕ್ಕೂ ಹಿಂಸೆಯಾಗುತ್ತದೆ ಅಲ್ಲವೇ?
ಇಂತಹ ಘಟನೆಯನ್ನು ಹಲವರು ನಮ್ಮ ನೆಗೆಟಿವ್ ಅಂಕಣ ಓದಿದ ನಂತರ ನೀಡಿದ ಮಾಹಿತಿಗಳನ್ನು ಕ್ರೂಡೀಕರಿಸಿ ನಿಮ್ಮ ಮುಂದೆ ನೀಡುವ ಒಂದು ಚಿಕ್ಕ ಪ್ರಯತ್ನ. ಇದು ಯಾರು ಹೇಗೆ ಎನ್ನುವುದು ಯಾರಿಗೂ ಅರ್ಥವಾಗುವುದಿಲ್ಲ ಆದರೆ ಅನುಭವಿಸಿದಾಗಲೇ ಅದರ ನೋವು, ಅದಕ್ಕೆ ಪಟ್ಟ ಪಾಡು ಅರ್ಥವಾಗುತ್ತದೆ. ಆದರೆ ನಂತರವೂ ಅಯ್ಯೋ ಪಾಪ ಎನ್ನುವ ನಿಮ್ಮ ಮನಸ್ಥಿತಿ ಬದಲಾಗಲೇಬೇಕಿದೆ ಎನ್ನುವ ಪರಿಸ್ಥಿತಿ ಬಂದಿದೆ.
– ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)