ಶಿವಮೊಗ್ಗ,ಡಿ.7: ಆಶ್ರಯ ಸಮಿತಿಯ ಅಧ್ಯಕ್ಷರ ಗಮನಕ್ಕೂ ಬಾರದೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ದಿಢೀರನೆ ಮುಂದೂಡಿರುವುದು ಶಾಸಕರ ಹಕ್ಕುಚ್ಯುತಿಯಾಗಿದೆ. ಈ ಬಗ್ಗೆ ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಇಂದು ಪಾಲಿಕೆವತಿಯಿಂದ ಆಶ್ರಯ ಮನೆಯ ಹಕ್ಕುವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮವನ್ನು ದಿಢೀರನೆ ಮುಂದೂಡಿದ್ದನ್ನು ವಿರೋಧಿಸಿ ಫಲಾನುಭವಿಗಳು ಪ್ರತಿಭಟನೆ ನಡೆಸಿದರು.
ಪಾಲಿಕೆಯ ಆಯುಕ್ತರು ಹಾಗೂ ಸಚಿವರ ವಿರುದ್ಧ ಫಲಾನುಭವಿಗಳು ಘೋಷಣೆ ಕೂಗಿದರು. ನಮಗೆ ಹಕ್ಕುಪತ್ರ ಕೊಡುವ ತನಕ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪಾಲಿಕೆ ಆಯುಕ್ತರಿಗೆ ದಿಬ್ಬಂಧನ ಹಾಕಿ ಕುವೆಂಪು ರಂಗಮಂದಿರದ ಹೊರಗೇಟ್ನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ ಕಾರ್ಯಕ್ರಮವನ್ನು ಮುಂದೂಡಿರುವುದು ನಮಗೂ ಗೊತ್ತಿಲ್ಲ. ಇದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರ ನಿರ್ಧಾರವಾಗಿದೆ. ಅವರು ಹೇಳಿದಂತೆ ಆಯುಕ್ತರು ಕೇಳಿದ್ದಾರೆ. ಕಳೆದ ಹಲವು ವರ್ಷಗಳಿಂದ ನಮಗೆ ಮನೆ ಸಿಗುತ್ತದೆ ಎಂದು ನೂರಾರು ಜನರು ಕಾಯುತ್ತ ಕುಳಿತಿದ್ದಾರೆ. ನಿನ್ನೆ ತನಕ ಲಕ್ಷಾಂತರ ರೂ.ಗಳನ್ನು ಕಟ್ಟಿದ್ದಾರೆ. ಮನೆ ಸಿಗುತ್ತದೆ ಎಂದು ಈಗ ಬಂದಿದ್ದಾರೆ. ಮನೆಗಳ ಹಸ್ತಾಂತರ ಮಾಡುತ್ತೇವೆ ಎಂದು ಹೇಳಿ ಈಗ ಅದನ್ನು ಮುಂದೂಡಿರುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.
ಮೂಲಭೂತ ಸೌಲಭ್ಯಗಳು ಇಲ್ಲ ಎಂಬ ಕಾರಣವನ್ನು ಆಯುಕ್ತರು ಹೇಳುತ್ತಿದ್ದಾರೆ. ಇದು ಅವರಿಗೆ ಗೊತ್ತಿಲ್ಲರಲಿಲ್ಲವೆ. ಏಕೆ ಕಾರ್ಯಕ್ರಮ ಆಯೋಜಿಸಬೇಕಾಗಿತ್ತು. ವಿತರಣಾ ಕಾರ್ಯಕ್ರಮವನ್ನು ಮುಂದೂಡಬೇಕಾದವರು ಸಚಿವರೇ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಆಶ್ರಯ ಸಮಿತಿ ಎಂದು ಇರುತ್ತದೆ. ಅದಕ್ಕೆ ಅಧ್ಯಕ್ಷರು ಇರುತ್ತಾರೆ. ಶಾಸಕರು ಇದ್ದಾರೆ. ಶಾಸಕರ ಗಮನಕ್ಕೆ ಬಾರದೆ ಈ ರೀತಿ ಮಾಡಿರುವುದು ಹಕ್ಕುಚ್ಯುತಿಯಾಗಿದೆ. ಇದನ್ನು ನಾನು ಸದನದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದರು.
ಮೂಲಭೂತ ಸೌಕರ್ಯ ನೀಡಲು ಇನ್ನೂ ಕೋಟ್ಯಾಂತರ ರೂ. ಬೇಕಾಗಿದೆ. ಇದು ಈಗಲೇ ಮುಗಿಯುವುದಲ್ಲ, ಅದಕ್ಕೆ ತಿಂಗಳುಗಳೇ ಬೇಕು, ಮೊದಲು ಹಣ ಕಟ್ಟಿದವರಿಗೆ ಹಂಚಿಕೆಯಾಗಬೇಕು. ಈ ಹಂಚಿಕೆಯನ್ನು ಲಾಟರಿಯ ಮೂಲಕ ಮಾಡಬೇಕಾಗಿತ್ತು. ಆದರೆ ಅದನ್ನು ಮಾಡುವುದಿಲ್ಲ. ಇಲ್ಲಿ ಪಕ್ಷಗಳ ಪ್ರಶ್ನೆ ಬರುವುದಿಲ್ಲ ಫಲಾನುಭವಿಗಳೇ ಇಲ್ಲಿ ಮುಖ್ಯವಾಗುತ್ತಾರೆ. ತಮ್ಮ ಜೀವಮಾನವಿಡಿ ದುಡಿದಿರುವುದನ್ನು ಮನೆ ಬರುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗೆ ವಾಪಾಸ್ಸು ಕಳಿಸದರೆ ಅವರ ಗತಿ ಏನು, ನಾನು ಯಾವಾಗಲು ಬಡವರ ಪರವಾಗಿ ಇದ್ದೇನೆ ಹೊರತು ಪಕ್ಷವಲ್ಲ ಎಂದರು.
ಈ ಮಧ್ಯೆ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಫಲಾನುಭವಿಗಳು ಪ್ರತಿಭಟನೆಯನ್ನು ಮುಂದುವರೆಸಿ ಪಾಲಿಕೆಯ ಆಯುಕ್ತರನ್ನು ಹೊರಗೆ ಬಿಡಲಿಲ್ಲ. ಕಾರನ್ನು ತಡೆದು ಕಾರಿನ ಮುಂದೆಯೇ ಕುರಿತು ಘೋಷಣೆ ಕೂಗ ತೊಡಗಿದರು. ಪ್ರತಿಭಟನೆ ನಿರೀಕ್ಷೆ ಇಲ್ಲದ , ಕೆಲವೇ ಸಂಖ್ಯೆಯಲ್ಲಿದ್ದ ಪೊಲೀಸರಿಗೂ ಕೂಡ ಇದು ತಲೆನೋವ್ವಾಯಿತು. ನಂತರ ಪೊಲೀಸರನ್ನು ಕರೆಸಲಾಯಿತು. ಆದರೆ ಅಷ್ಟೋತ್ತಿಗೆ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಕಾರನಿಂದ ಇಳಿದು, ನಡೆದುಕೊಂಡೇ ಪಾಲಾಯನಗೈದರು.
ಪ್ರತಿಭಟನೆಯಲ್ಲಿ ಫಲಾನುಭವಿಗಳ ಜೊತೆಗೆ ಬಿಜೆಪಿ ಮುಖಂಡರುಗಳಾದ ಮೋಹನ್ರೆಡ್ಡಿ, ಪ್ರಭು, ರಶ್ಮಿ, ಸುರೇಖಾ ಮುರಳೀಧರ್, ಯಶೋಧಾ ವೈಷ್ಣವ್ ಮೊದಲಾದವರು ಇದ್ದರು.
\
ಕಳೆದ 8 ವರ್ಷಗಳಿಂದ ಗೋವಿಂದಾಪುರ ಮತ್ತು ಗೋಪಿಶೆಟ್ಟಿಹಳ್ಳಿಯ ಆಶ್ರಯ ಬಡಾವಣೆಯ ಮನೆಗಳನ್ನು ಹಂಚಿಕೆ ಮಾಡುವಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ಮೊದಲೇ ನಿಗದಿಯಂತೆ ಇಂದು 638 ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರ ಸೂಚನೆಯಂತೆ ಹಾಗೂ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನಕುಮಾರ್ ಅವರ ಆಶಯದಂತೆ ಏಕಾಏಕಿ ರದ್ದು ಮಾಡಿರುವ ಕಮಿಷನರ್ ಕ್ರಮ ಅಕ್ಷಮ್ಯ. ಈ ಕಾರ್ಯಕ್ರಮವನ್ನು ರದ್ದುಗೊಳಿಸಿ ಬಡವರ ಬದುಕಲ್ಲಿ ಚೆಲ್ಲಾಟವಾಡುತ್ತಿರುವುದು ಅತ್ಯಂತ ನೀಚ ಸಂಗತಿ!!
ಎಸ್.ಎನ್.ಚನ್ನಬಸಪ್ಪ, ಶಾಸಕ